Advertisement

ಧಾರವಾಡ: ಅನುಭವ ಮಂಟಪ-ವಚನ ಸಾಹಿತ್ಯ ಜಗತ್ತಿಗೇ ಮಾದರಿ

06:20 PM Mar 14, 2023 | Team Udayavani |

ಧಾರವಾಡ: ಬಸವಾದಿ ಶರಣರು ರಚಿಸಿದ ಅನುಭವ ಮಂಟಪ ಹಾಗೂ ವಚನ ಸಾಹಿತ್ಯ ಈ ನಾಡಿಗೆ ಅಷ್ಟೇ ಅಲ್ಲದೆ ಜಗತ್ತಿಗೆ ಮಾದರಿಯಾಗಿದ್ದು, ಇದರ ಪ್ರಸಾರ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.

Advertisement

ಸಪ್ತಗಿರಿ ಲೇಔಟ್‌ನಲ್ಲಿರುವ ಅಲ್ಲಮಪ್ರಭು ನಗರದಲ್ಲಿ ವಚನ ಪಿತಾಮಹ ಡಾ| ಫ.ಗು. ಹಳಕಟ್ಟಿ ಅವರ ಸ್ಮಾರಕ ಭವನಕ್ಕೆ ಭೂಮಿಪೂಜೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿ ನಂತರ ಬಸವಾದಿ ಶರಣರು ವಚನಗಳನ್ನು ಸಂರಕ್ಷಣೆ ಮಾಡುವಲ್ಲಿ ತಮ್ಮ ಜೀವನವನ್ನೇ ತೆತ್ತರು. ತದನಂತರ ಡಾ| ಹಳಕಟ್ಟಿಯವರು ಶರಣರು ಸಂಚರಿಸಿದ ಜಾಗದಲ್ಲಿ ಹೋಗಿ ವಚನಗಳನ್ನು ಕ್ರೋಢೀಕರಿಸುವ ಕೆಲಸ ಮಾಡಿದ್ದರು. ವಚನ ಗ್ರಂಥಗಳನ್ನು ಸಿದ್ಧಪಡಿಸಿದರು. ಹಳಕಟ್ಟಿಯವರನ್ನು ನಾವು ನಿತ್ಯ ಸ್ಮರಿಸಬೇಕು ಎಂದರು.

ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಡಾ| ಹಳಕಟ್ಟಿಯವರು ವಚನ ಸಾಹಿತ್ಯವನ್ನು ಜನಮನಕ್ಕೆ ತಲುಪಿಸಿದ ಕಾರಣ ಇಂದು ಜಗತ್ತಿಗೆ ಬಸವಣ್ಣನವರ ವಚನ ಹಾಗೂ ಅವರ ಅನುಭವ ಮಂಟಪದ ಮಾಹಿತಿ ಲಭ್ಯವಾಗಿದೆ. ಯುವ ಜನರು ಬಸವತತ್ವ ಪ್ರಚಾರ ಮಾಡುವುದರ ಜತೆಗೆ ಬಸವಾದಿ ಶರಣರ ಆದರ್ಶಗಳನ್ನು ಬೆಳೆಸಿಕೊಳ್ಳಬೇಕು. ಸ್ಮಾರಕ ಭವನ ನಿರ್ಮಾಣದ ನಂತರ ಮಕ್ಕಳು ಹಾಗೂ ಯುವಜನರನ್ನು ಕರೆಯಿಸಿ ಅವರಿಗೆ ವಚನ ಸಾಹಿತ್ಯ ಹಾಗೂ ಬಸವಾದಿ ಶರಣರ ಸಂದೇಶಗಳನ್ನು ತಿಳಿಸಿಕೊಟ್ಟು ಮತ್ತಷ್ಟು ಹೆಚ್ಚು ಬಸವ ತತ್ವ ಪ್ರಚಾರ ಮಾಡೋಣ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬಸವತತ್ವ ಪ್ರಸಾರ ಸಂಸ್ಥೆ ಅಧ್ಯಕ್ಷ ಡಾ| ಎಸ್‌.ಆರ್‌. ಗುಂಜಾಳ ಮಾತನಾಡಿ, ಹಳಕಟ್ಟಿಯವರ ಭವನ ಭೂಮಿಪೂಜೆ ಸಮಾರಂಭದಲ್ಲಿಯೇ ಅನೇಕ ಮಠಾಧೀಶರು, ಸಮಾಜ ಬಾಂಧವರು 25 ಲಕ್ಷಕ್ಕೂ ಅಧಿಕ ನೆರವಿನ ವಾಗ್ಧಾನ ಮಾಡಿರುವುದು ಸಂತಸದ ಸಂಗತಿ ಎಂದರು.

Advertisement

ತೋಂಟದಾರ್ಯ ಸಂಸ್ಥಾನಮಠದ ಡಾ| ತೋಂಟದ ಸಿದ್ದರಾಮ ಸ್ವಾಮೀಜಿ, ಜಮಖಂಡಿ ಓಲೆಮಠದ ಡಾ| ಅಭಿನವಕುಮಾರ ಚನ್ನಬಸವ ಸ್ವಾಮೀಜಿ, ಮುರುಘಾಮಠದ ಡಾ| ಮಲ್ಲಿಕಾರ್ಜುನ ಸ್ವಾಮೀಜಿ, ಸಂಶೋಧಕ ಡಾ| ವೀರಣ್ಣ ರಾಜೂರ, ಕಾರ್ಯದರ್ಶಿ ಡಾ| ಸುಲೋಚನಾ ಮಟ್ಟಿ , ರವಿಕುಮಾರ, ನಾಗರಾಜ ಪಟ್ಟಣಶೆಟ್ಟಿ, ಮಾರ್ಕಾಂಡೇಯ ದೊಡಮನಿ ಇದ್ದರು. ಪ್ರಭಾವತಿ ತಂಡದವರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಕೂಡಲಪ್ಪ ಕೊಪ್ಪದ ನಿರೂಪಿಸಿದರು. ಮಹೇಶ ಬೆಲ್ಲದ ಸ್ವಾಗತಿಸಿದರು. ಶಕುಂತಲಾ ಮನ್ನಂಗಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next