ಧಾರವಾಡ: ಅಕ್ಕನ ಬಳಗ ವತಿಯಿಂದ ಎರಡು ವರ್ಷಕ್ಕೊಮ್ಮೆ ಕೊಡ ಮಾಡುವ ಅಕ್ಕ ಪ್ರಶಸ್ತಿಗೆ ಮಾಜಿ ಸಚಿವೆ ಡಾ.ಲೀಲಾದೇವಿ ಆರ್. ಪ್ರಸಾದ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಳಗದ ಅಧ್ಯಕ್ಷೆ ಮುಕ್ತಾ ಸವಡಿ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಶಸ್ತಿಯು 10 ಸಾವಿರ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ಇಲ್ಲಿಯ ಶ್ರೀ ಮೃತ್ಯುಂಜಯಪ್ಪಗಳ ಭವನದಲ್ಲಿ ಫೆ.27 ರಂದು ಬೆಳಿಗ್ಗೆ 11 ಗಂಟೆಗೆ ಪ್ರಶಸ್ತಿ ಪ್ರದಾನ ನೆರವೇರಲಿದೆ.
ವಿರೋಧ ಪಕ್ಷ ಉಪನಾಯಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾಧಿಕಾರಿ ದಿವ್ಯಾ ಪ್ರಭು ಮುಖ್ಯ ಅತಿಥಿಯಾಗಿ ಆಗಮಿಸುವರು. ವೈಶುದೀಪ ಫೌಂಡೇಶನ್ ಮುಖ್ಯಸ್ಥೆ ಶಿವಲೀಲಾ ಕುಲಕರ್ಣಿ, ಉತ್ತರ ಕನ್ನಡ ಲೇಖಕಿಯರ ಸಂಘದ ಅಧ್ಯಕ್ಷೆ ರಾಜೇಶ್ವರಿ ಮಹೇಶ್ವರಯ್ಯ ಪಾಲ್ಗೊಳ್ಳಲಿದ್ದಾರೆ ಎಂದರು.
ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಮಾತೋಶ್ರೀ ಸುವರ್ಣಮ್ಮ ರಾಜಶೇಖರ ಕುಲಕರ್ಣಿ ಸ್ಮರಣಾರ್ಥ ಈ ದತ್ತಿ ಸ್ಥಾಪಿಸಿದ್ದು, ಇದರ ಮೂಲಕ ಪ್ರತಿ ಎರಡು ವರ್ಷಕ್ಕೊಮ್ಮೆ ಪ್ರಶಸ್ತಿ ಪ್ರದಾನ ಮಾಡುತ್ತಾ ಬರಲಾಗಿದೆ. ಇದಲ್ಲದೆ ಅಕ್ಕನ ಬಳಗವು ಸಾಹಿತ್ಯ ಹಾಗೂ ಮಹಿಳಾ ಪರವಾದ ಕಾರ್ಯ ಮಾಡುವುದರ ಜತೆಗೆ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಕೊಂಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸುನಂದಾ ಗುಡ್ಡದ, ಪ್ರೇಮಾ ಹಲಕಿ, ಗೌರಾ ಹಾಲಭಾವಿ, ಶಾರದಾ ಕೌದಿ, ವೀಣಾ ಹರಿಹರ, ಭಾರತಿ ರಾಜಗುರು ಇದ್ದರು.