Advertisement

Dharwad: ಮುಂಗಾರಿ ಸೀತನಿಗೆ ಮುನ್ನುಡಿ ಬರೆದ ಕೃಷಿ ವಿವಿ

06:18 PM Sep 12, 2023 | Team Udayavani |

ಧಾರವಾಡ: ಉತ್ತರ ಕರ್ನಾಟಕ ಅಂದ್ರೆ ಜೋಳದ ರೊಟ್ಟಿ ಎಣ್ಣೆಗಾಯಿ ಪಲ್ಯ ನೆನಪಿಗೆ ಬರುವುದು ಸಹಜ. ಅದು ಈ ಭಾಗದ ಆಹಾರ ಅಸ್ಮಿತೆಯೂ ಕೂಡ. ಆದರೆ ಜೋಳದಿಂದ ಬರೀ ರೊಟ್ಟಿ ತಟ್ಟಿದರೆ ಸಾಲದು, ಅದನ್ನು ಕೂಡ ಅತ್ಯಾಧುನಿಕ ಆಹಾರಗಳ ಅಗ್ರಪಂಕ್ತಿಯಲ್ಲಿ ನಿಲ್ಲಿಸಬೇಕು ಎನ್ನುವ ಹಠ ತೊಟ್ಟಿದೆ ಧಾರವಾಡದ ಕೃಷಿ ವಿಶ್ವವಿದ್ಯಾಲಯ.

Advertisement

ಹೌದು, ಹತ್ತಿಯಲ್ಲಿ ದೇಶದಲ್ಲಿಯೇ ಅತ್ಯಧಿಕ ಸುಧಾರಿತ ತಳಿಗಳನ್ನು ಸಂಶೋಧನೆ ಮಾಡಿದ ಕೀರ್ತಿಗೆ ಭಾಜನವಾಗಿರುವ
ಧಾರವಾಡದ ಕೃಷಿ ವಿವಿ ಇದೀಗ ಉತ್ತರ ಕರ್ನಾಟಕದ ಪ್ರಧಾನ ಆಹಾರ ಬೆಳೆಯಾದ ಜೋಳವನ್ನು ಇನ್ನಷ್ಟು ಮೌಲ್ಯವರ್ಧನಗೊಳಿಸುವ ಯತ್ನಕ್ಕೆ ಕೈ ಹಾಕಿದೆ. ಇದರ ಭಾಗವಾಗಿ ಜೋಳದ ಸೀತನಿ (ಹಾಲುಗಾಳು ಹಂತದಲ್ಲಿರುವ ಜೋಳ)
ಮಾರಾಟ ಮಾಡುವ ಮತ್ತು ಮಾರಾಟವನ್ನೇ ಒಂದು ಹಬ್ಬದ ರೂಪದಲ್ಲಿ ಮಾಡುವ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ.

ಸಾಮಾನ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಡಿಸೆಂಬರ್‌ ಮತ್ತು ಜನವರಿ ತಿಂಗಳಿನಲ್ಲಿ ಜೋಳದ ತೆನೆ ಹಾಲುಗಾಳು ಹಂತ ತಲುಪುತ್ತದೆ. ಇದನ್ನು ಗೋವಿನ ಜೋಳದ ಮಾದರಿಯಲ್ಲೇ ಸುಟ್ಟು  ತಿನ್ನಲಾಗುತ್ತದೆ. ಆದರೆ ಸೀತನಿಗೆ ಗೋವಿನ ಜೋಳದಷ್ಟು ಪ್ರಚಾರ ಮತ್ತು ವೈವಿಧ್ಯತೆ ಸಿಕ್ಕಿಲ್ಲ. ಕಾರಣ ಇದನ್ನು ಸಂಸ್ಕರಿಸಿ ಮಾರಾಟ ಮಾಡುವುದು ಕೊಂಚ ಕಷ್ಟವೇ ಆಗಿದೆ. ಆದರೆ ಇದೀಗ ಕೃಷಿ ವಿವಿ ಸೀತನಿ ಹಬ್ಬ ಮಾಡುವುದಕ್ಕೆ ಮುನ್ನುಡಿ ಬರೆದಿದೆ.

ಏನಿದು ಸೀತನಿ?: ಹುಲುಸಾಗಿ ಬೆಳೆದ ಜೋಳ ಹಾಲುಕಾಳಿನ ಹಂತ ತಲುಪಿದಾಗ ಅದನ್ನು ಕಿತ್ತು ಹಸಿಕಾಳು ಮಾಡಿ ಅದನ್ನು
ಸುಟ್ಟು ತಿನ್ನುವುದಕ್ಕೆ ಹದ ಮಾಡಿದರೆ ಅದೇ ಸೀತನಿ. ಜೋಳ ಬೆಳೆಯುವ ಬೆಳಗಾವಿ, ಬಾಗಲಕೋಟೆ, ಧಾರವಾಡ, ಹಾವೇರಿ,
ಗದಗ, ವಿಜಯಪುರ, ಕಲಬುರ್ಗಿ ಮತ್ತು ಬೀದರ ಜಿಲ್ಲೆಗಳಲ್ಲಿ ಹುಲುಸಾಗಿ ಬೆಳೆಯುವ ಬಿಳಿಜೋಳದ ಸೀತನಿ ಮಾಡುವುದು
ಸಾಮಾನ್ಯ. ವಿಟಾಮಿನ್‌ ದೃಷ್ಟಿಯಿಂದಲೂ ಸೀತನಿಯನ್ನು ಅಧ್ಯಯನಕ್ಕೆ ಒಳಪಡಿಸಿರುವ ಕೃಷಿ ವಿವಿ, ಇದು ಅತ್ಯುತ್ತಮ ಆಹಾರಗಳ ಪೈಕಿ ಒಂದು ಎಂಬುದನ್ನು ಕಂಡುಕೊಂಡು ರೈತರಿಗೂ ಮನದಟ್ಟು ಮಾಡುವ ಪ್ರಯತ್ನದಲ್ಲಿದೆ.

ಮುಂಗಾರಿ ಸೀತನಿ ತಳಿ ವೃದ್ಧಿ: ರಾಜ್ಯದಲ್ಲಿ ಒಟ್ಟು 9 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬೆಳೆಯುತ್ತಿದ್ದು, ಪ್ರತಿವರ್ಷ 10 ಲಕ್ಷ ಟನ್‌ ಉತ್ಪಾದನೆಯಾಗುತ್ತಿದೆ. ಬಿಳಿಜೋಳವನ್ನ ಹಿಂಗಾರಿ ಬೆಳೆಯಾಗಿ ಉ.ಕ. ಭಾಗದಲ್ಲಿ ಬೆಳೆಯಲಾಗುತ್ತದೆ. ಹೀಗಾಗಿ ಸೆಪ್ಟೆಂಬರ್‌
ಮತ್ತು ಅಕ್ಟೋಬರ್‌ ತಿಂಗಳಿನಲ್ಲಿ ಬಿತ್ತನೆ ಮಾಡಿದ ಜೋಳ ನಾಲ್ಕು ತಿಂಗಳು ಅಂದರೆ ಡಿಸೆಂಬರ್‌ ಮತ್ತು ಜನವರಿ ತಿಂಗಳ ಹೊತ್ತಿಗೆ ಹಾಲುಕಾಳು ಹಂತ ತಲುಪುತ್ತದೆ. ಹೀಗಾಗಿ ಸೀತನಿ ಈ ವೇಳೆಯಲ್ಲಿ ಮಾತ್ರ ಲಭ್ಯವಿರುತ್ತದೆ. ಆದರೆ ಧಾರವಾಡ ಕೃಷಿ
ವಿವಿ ಇದೀಗ ಮುಂಗಾರಿನಲ್ಲಿಯೂ ಬಿತ್ತನೆ ಮಾಡಿ ಬೆಳೆಯುವ ವಿನೂತನ ತಳಿಯೊಂದನ್ನು ಸೀತನಿಗಾಗಿಯೇ ಅಭಿವೃದ್ಧಿ
ಪಡಿಸಿದ್ದು ವಿಶೇಷವಾಗಿದೆ.

Advertisement

ರೈತರಿಂದಲೂ ಉತ್ಸಾಹ: ಸೀತನಿ ಹಬ್ಬ ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಿರುವ ಕೃಷಿ ವಿವಿ ಪ್ರಯತ್ನಕ್ಕೆ ರೈತರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೀತನಿ ಜೋಳ ಬೆಳೆಯುವ ಕುರಿತು ಸಾವಿರಾರು ರೈತರು ಅಗತ್ಯ ಮಾಹಿತಿಯನ್ನು ಕೇಳುತ್ತಿದ್ದಾರೆ. ಅಷ್ಟೇಯಲ್ಲ, ಇಂತಹ ಪರಿಕಲ್ಪನೆ ಸ್ವಾಗತಾರ್ಹ ಎಂದು ಕೃಷಿ ವಿವಿ ಕಾರ್ಯವನ್ನು ಮತ್ತು ವಿಜ್ಞಾನಿಗಳ ಪ್ರಯತ್ನವನ್ನು ಅಭಿನಂದಿಸುತ್ತಿದ್ದಾರೆ.

ಹುರಡಾ ಮೇಳ ಸ್ಪೂರ್ತಿ
ಮಹಾರಾಷ್ಟ್ರದಲ್ಲಿ ಪ್ರತಿವರ್ಷ ಅಕ್ಟೋಬರ್‌ನಿಂದ ಫೆಬ್ರವರಿ ವರೆಗೂ ಕ್ರಮವಾಗಿ ಬೆಳೆಯುವ ಜೋಳದಿಂದ ಸೀತನಿ ಮಾಡಲಾಗುತ್ತದೆ. ಇದಕ್ಕೆ ಅವರು ಹುರಡಾ ಎಂದು ಕರೆಯುತ್ತಾರೆ. ಕೊಲ್ಲಾಪೂರ, ಸೊಲ್ಲಾಪೂರ, ಸತಾರಾ, ಸಾಂಗ್ಲಿ, ಮೀರಜ್‌ ಸೇರಿಂದತೆ ಅನೇಕ ಜಿಲ್ಲೆಗಳಲ್ಲಿ ಹುರಡಾ ಕನಿಷ್ಟ ಐದು ತಿಂಗಳ ಕಾಲ ನಡೆಯುತ್ತಲೇ ಇರುತ್ತದೆ. ಇಲ್ಲಿನ ರಸ್ತೆಗಳಿಂದ ಹಿಡಿದು ಶಾಪಿಂಗ್‌ ಮಹಲ್‌ಗ‌ಳ ವರೆಗೂ ಎಲ್ಲ ಕಡೆಗೂ ಹುರಡಾ ಪಾರ್ಟಿ ಸಿಕ್ಕುತ್ತದೆ. ಹಸಿ ಜೋಳದ ಕಾಳನ್ನು ಇಲ್ಲಿ ಊಟದ ರೂಪದಲ್ಲಿ ಮೊಸಲು, ಪಲ್ಯ, ಖಾರಾ, ಚಟ್ನಿ ಜೊತೆ ನೀಡುತ್ತಾರೆ. ಇದು ಜೋಳ ಬೆಳೆಯುವ ರೈತರ ಆರ್ಥಿಕ ಸ್ಥಿತಿ ವೃದ್ಧಿಗೂ ಅನುಕೂಲವಾಗಿದೆ,

ಸ್ವಿಟ್‌ಕಾರ್ನ್ ಮಾದರಿಯಲ್ಲಿ ಜೋಳದ ಸೀತನಿ ಅಥವಾ ಬೆಳಸನ್ನು ಪೌಷ್ಟಿಕ ಆಹಾರವಾಗಿ ಇಂದಿನ ಯುವ ಪೀಳಿಗೆ ಮುಂದಿಡಬೇಕಿದೆ. ಹೀಗಾಗಿ ಕಾರ್ತಿಕೇಯ್‌ ಎನ್ನುವ ತಳಿಯನ್ನು ಮಹಾರಾಷ್ಟ್ರದಿಂದ ತಂದು, ಧಾರವಾಡ ಕೃಷಿ ವಿವಿಯಿಂದ ಮುಂಗಾರಿನಲ್ಲೂ ಬೆಳೆಯುವ ಜೋಳದ ತಳಿ ಅಭಿವೃದ್ಧಿ ಮಾಡುತ್ತಿದ್ದೇವೆ. ಈಗಾಗಲೇ ಎಫ್‌-4, ಎಫ್‌-5 ಸೀತನಿಗೆ ಅನುಕೂಲವಾಗುಂತೆ ಅಭಿವೃದ್ಧಿ ಪಡಿಸಲಾಗಿದ್ದು, ಮುಂದಿನ ವರ್ಷವೇ ಇದು ರೈತರ ಹೊಲ ತಲುಪಲಿದೆ. ಕೇವಲ 80 ದಿನಕ್ಕೆ ಸೀತನಿ ಹಾಲುಕಾಳು ಲಭ್ಯವಾಗುತ್ತಿದ್ದು, ತೆನೆ ಕೊಯ್ಲಿನ ನಂತರ ಹಸಿ ಮೇವು ಕೂಡ ಹುಲಸಾಗುವಂತೆ ಕೂಡ ಮಾಡಲಿದ್ದೇವೆ.
ಡಾ| ಎನ್‌.ಜಿ. ಹನಮರಟ್ಟಿ, ಮುಖ್ಯಸ್ಥರು, ತಳಿ ಸಂವರ್ಧನೆ ವಿಭಾಗ, ಕೃಷಿ ವಿವಿ 

*ಬಸವರಾಜ್‌ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next