Advertisement

ಧಾರವಾಡ: ಸಂವಹನ ಮಾಧ್ಯಮದಿಂದ ಕಿರಿದಾದ ಜಗತ್ತು: ಪ್ರೊ|ಪ್ರಜ್ಞಾ

03:26 PM Feb 24, 2023 | Team Udayavani |

ಧಾರವಾಡ: ಸಂವಹನ ಮಾಧ್ಯಮದ ಪ್ರಭಾವದಿಂದ ಇಂದು ಇಡೀ ಜಗತ್ತೆ ಕಿರಿದಾಗಿದ್ದು, ಅಂಗೈಯಲ್ಲೇ ಜಗತ್ತು ಇರುವಂತಹ ಕ್ಷಿಪ್ರ ಬೆಳವಣಿಗೆ ಹೊಂದಿದೆ ಎಂದು ಕಿತ್ತೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಪ್ರೊ.ಪ್ರಜ್ಞಾ ಮತ್ತಿಹಳ್ಳಿ ಹೇಳಿದರು.

Advertisement

ನಗರದ ಕವಿಸಂನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗ ಹಮ್ಮಿಕೊಂಡಿದ್ದ ಸುಶೀಲಾ ನಾಯಕ (ರೇಡಿಯೋ ಅಕ್ಕಮ್ಮ) ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಹಿಳೆ ಹಾಗೂ ಸಂವಹನ ಮಾಧ್ಯಮ ವಿಷಯ ಕುರಿತು ಅವರು ಮಾತನಾಡಿದರು.

40ರ ದಶಕದಲ್ಲಿ ಭಾರತೀಯ ಅನೇಕ ಮಹಿಳೆಯರು ಸಂವಹನ ಮಾಧ್ಯಮ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಖ್ಯಾತ ಪತ್ರಕರ್ತೆಯಾಗಿದ್ದ ಅಮೀತಾ ಮಲ್ಲಿಕ ದೇಶದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸಂದರ್ಶನ ದಿಟ್ಟತನದಿಂದ ಮಾಡಿದ್ದಲ್ಲದೇ, ಅನೇಕ ಅಂತಾರಾಷ್ಟ್ರೀಯ ಖ್ಯಾತ ವ್ಯಕ್ತಿಗಳನ್ನು ಸಂದರ್ಶನ ಮಾಡಿದ ಕೀರ್ತಿ ಅವರದ್ದಾಗಿದೆ.

ಕೇರಳದ ಇಂದಿರಾ ಜೊಶಫ್‌ ಸಹ ಒಬ್ಬ ಅತ್ಯುತ್ತಮ ಸುದ್ದಿ ನಿವೇದಕರಾಗಿ ಕಾರ್ಯ ನಿರ್ವಹಿಸಿದ್ದು ಶ್ಲಾಘನೀಯ. ಇಂತಹ ದಿಟ್ಟ ಪತ್ರಕರ್ತರ, ಸುದ್ದಿ ವಾಚಕರ ಸಾಧನೆ ಇಂದಿನ ಯುವ ವರದಿಗಾರರಿಗೆ ಪರಿಚಯಿಸುವ ಅಗತ್ಯವಿದೆ. ಜತೆಗೆ ಅಂತಹ ಸಾಧಕರ ಸಾಧನೆ ದಾಖಲೀಕರಣ ಮಾಡುವ ತುರ್ತು ಅಗತ್ಯವಿದೆ ಎಂದರು.

ಸಮುದಾಯ ರೇಡಿಯೋಗಳು ಸಹ ಹರಿಯಾಣ, ಜಾರ್ಖಂಡ್‌ ರಾಜ್ಯದಲ್ಲಿ ಪ್ರಾರಂಭವಾಗಿ ಆ ಪ್ರಾದೇಶಿಕ ಪ್ರದೇಶದ ಜನರ ಸಾಂಸ್ಕೃತಿಕ ಬದುಕಿನ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿವೆ. 2014ರಲ್ಲಿ ಬೆಂಗಳೂರಿನಲ್ಲೂ ಅಂತಹ ಸಮುದಾಯ ರೇಡಿಯೋ ಆರಂಭಿಸಲಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ|ರಾಜೇಶ್ವರಿ ಮಹೇಶ್ವರಯ್ಯ ಮಾತನಾಡಿ, 60ರ ದಶಕದಲ್ಲಿ ಧಾರವಾಡ ಆಕಾಶವಾಣಿ ಕೇಂದ್ರದಿಂದ ಪ್ರಸಾರವಾಗುತ್ತಿದ್ದ ಗಿಳಿವಿಂಡೊ ಕಾರ್ಯಕ್ರಮ ಹೆಚ್ಚು ಪ್ರಭಾರದಲ್ಲಿತ್ತು.

Advertisement

ಸುಶೀಲಾ ನಾಯಕರು (ರೇಡಿಯೋ ಅಕ್ಕಮ್ಮ) ನಡೆಸಿಕೊಡುತ್ತಿದ್ದ ಈ ಕಾರ್ಯಕ್ರಮದಲ್ಲಿ ರೇಡಿಯೋ ಅಕ್ಕಮ್ಮನ ಮಾತು ಕೇಳುವುದೇ ಎಲ್ಲರಿಗೂ ಕುತೂಹಲ, ಸಂತೋಷ. ಅವರ ನಡವಳಿಕೆ, ಧ್ವನಿ, ಸರಳತೆ ಎಲ್ಲರಿಗೂ ಅಚ್ಚಮೆಚ್ಚಾಗಿತ್ತು ಎಂದರು. ಶಿವಾನಂದ ಭಾವಿಕಟ್ಟಿ, ಶ್ರೀಧರ ಗಸ್ತಿ, ಮಹಾಂತೇಶ ನರೇಗಲ್‌, ಎಂ.ಎಂ. ಚಿಕ್ಕಮಠ, ನಿಂಗಣ್ಣ ಕುಂಟಿ, ಬಸಯ್ಯ ಶಿರೋಳ ಸೇರಿದಂತೆ ಹಲವರು ಇದ್ದರು.

ಕವಿವಿ ಪ್ರಸಾರಾಂಗ ನಿರ್ದೇಶಕ ಡಾ| ಚಂದ್ರಶೇಖರ ರೊಟ್ಟಿಗವಾಡ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಹಲಗತ್ತಿ ಸ್ವಾಗತಿಸಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಡಾ|ಧನವಂತ ಹಾಜವಗೋಳ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next