Advertisement

ಹಲವು ಭಾಗ್ಯ ಕರುಣಿಸಿದ ಡಾ.ವೀರೇಂದ್ರ ಹೆಗ್ಗಡೆ: ಶಾಸಕ ಮಂಜುನಾಥ್

11:18 AM Jun 26, 2022 | Team Udayavani |

ಹುಣಸೂರು: ಕೆರೆಗಳ ಅಭಿವೃದ್ದಿ ಎಂದರೆ ಅದು ಸಮೃದ್ದಿಯ ಸಂಕೇತವೆಂದು ಶಾಸಕ ಎಚ್.ಪಿ. ಮಂಜುನಾಥ್ ಹೇಳಿದರು.

Advertisement

ತಾಲೂಕಿನ ಬನ್ನಿಕುಪ್ಪೆಯ ವಲಯದ ಸೋಮನಹಳ್ಳಿಯಲ್ಲಿ ಬೀಜಗನ ಹಳ್ಳಿ ಗ್ರಾ.ಪಂ.ನ ಸಹಯೋಗದಲ್ಲಿ ನಮ್ಮೂರು-ನಮ್ಮ ಕೆರೆ ಯೋಜನೆಯಡಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ  ಅಭಿವೃದ್ದಿಪಡಿಸಿರುವ ಬಸವನಕೆರೆ ಹಸ್ತಾಂತರ ಕಾರ್ಯಕ್ರಮದ ಅಂಗವಾಗಿ ಕೆರೆಗೆ ಬಾಗಿನ ಅರ್ಪಿಸಿದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಕೆರೆಗಳ ಅಭಿವೃದ್ದಿ, ಉಳಿತಾಯ, ಸಾಲ ಸೌಲಭ್ಯ, ಕೃಷಿ ಪ್ರಗತಿ, ಮಹಿಳಾ ಸಬಲೀಕರಣ, ಮದ್ಯವರ್ಜನ ಶಿಬಿರ, ವಿದ್ಯಾರ್ಥಿಗಳು, ನಿರ್ಗತಿಕರಿಗೆ ನೆರವು ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಸರಕಾರ ಮಾಡದ ಕೆಲಸವನ್ನು ಮಾಡುತ್ತಿದೆ ಎಂದು ಪ್ರಶಂಸಿಸಿ, ಧರ್ಮಸ್ಥಳ ಯೋಜನೆಯನ್ನು ದೇವರ ರೀತಿ ಕಾಣುವ ಸದಸ್ಯರು, ಸಾರ್ವಜನಿಕರು, ಸರಕಾರದ ಯೋಜನೆಗಳ ಬಗ್ಗೆ ಅಸಡ್ಡೆ ತೋರುತ್ತಾರೆಂದು ವಿಷಾದಿಸಿದರು.

ಕೆರೆಗಳ ಪುನಶ್ಚೇತನ; ತಮ್ಮ ಅವಧಿಯಲ್ಲಿ 25-30 ವರ್ಷಗಳಿಂದ ತುಂಬದ  ಹೈರಿಗೆಕೆರೆ,  ಬಿಳಿಕೆರೆ, ಹಳೆಬೀಡು ಕೆರೆ ಸೇರಿದಂತೆ ತಾಲೂಕಿನ ಮರದೂರು ಏತ ನೀರಾವರಿ ಯೋಜನೆಯಡಿ 47 ಕೆರೆಗಳಿಗೆ ನೀರು ತುಂಬಿಸುವ  ಸೇರಿದಂತೆ  ವಿವಿಧ ಯೋಜನೆಯಡಿ ತಾಲೂಕಿನ ಶೇ.72 ರಷ್ಟು ಕೆರೆಗಳಿಗೆ ನೀರು ತುಂಬಿಸಲಾಗಿದೆ. ಅಲ್ಲದೇ ತಾಲೂಕಿನಲ್ಲಿ ಶೈಕ್ಷಣಿಕ ಅಭಿವೃದ್ಧಿಯ ಕ್ರಾಂತಿ ನಡೆದಿದೆ. ತಾಲೂಕಿನ ಜನತೆ ಇವೆಲ್ಲವನ್ನು ಮನಗಾಣಬೇಕೆಂದು ಕೋರಿದರು.

Advertisement

452 ಕೆರೆಗಳ ಅಭಿವೃದ್ದಿ; ಧರ್ಮಸ್ಥಳ ಯೋಜನೆಯ ಪ್ರಾದೇಶಿಕ ನಿರ್ದೇಶಕ ಗಂಗಾಧರ ರೈ ಮಾತನಾಡಿ, ಯೋಜನೆಯು ಹುಟ್ಟಿನಿಂದ ಸಾವಿನವರೆವಿಗೂ ಅನೇಕ ಕಾರ್ಯಕ್ರಮ ರೂಪಿಸಿದೆ. ಅನ್ನ, ಆರೋಗ್ಯ, ಅಭಯ, ಶಿಕ್ಷಣ ಕ್ಷೇತ್ರ, ಮಹಿಳಾ ಸಬಲೀಕರಣ, ಕೆರೆಗಳ ಅಭಿವೃದ್ದಿ ಸೇರಿದಂತೆ ಸಾಮಾಜಿಕ ಕಾರ್ಯಗಳ ಮೂಲಕ ಏಷ್ಯಾದಲ್ಲೇ ಮೊದಲನೇ ಸ್ಥಾನದಲ್ಲಿರುವುದು ಹೆಮ್ಮೆಯ ಸಂಗತಿ.

45 ಕೋಟಿ-452 ಕೆರೆ ಅಭಿವೃದ್ದಿ: ರಾಜ್ಯಾದ್ಯಂತ 452 ಕೆರೆಗಳನ್ನು45 ಕೋಟಿ ವೆಚ್ಚ ಮಾಡಿ ಕೆರೆಗಳನ್ನು ಅಭಿವೃದ್ದಿಪಡಿಸಲಾಗಿದೆ. ವರ್ಷಕ್ಕೆ 50 ಕೆರೆಗಳನ್ನು ಅಭಿವೃದ್ದಿಪಡಿಸಲಾಗುವುದು. ಪ್ರಾಣಿ-ಪಕ್ಷಿಗಳಿಗೆ ಆಹಾರವಾಗುವ ದಶ ಲಕ್ಷ ಸಸಿ ನೆಡುವ ವಿನೂತನ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದೆ. 14 ಸಾವಿರ ಮಂದಿ ನಿರ್ಗತಿಕರಿಗೆ ಮಾಶಾಸನ ನೀಡಲಾಗುತ್ತಿದೆ. ಈ ಬಾರಿ ರಾಜ್ಯಾದ್ಯಂತ ನಿರ್ಗತಿಕರಿಗಾಗಿ 500 ಮನೆಗಳ ನಿರ್ಮಾಣ ಹಾಗೂ 750 ಮನೆಗಳ ದುರಸ್ತಿಗೆ ಕಾರ್ಯ ಯೋಜನೆ ರೂಪಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಯೋಜನಾಧಿಕಾರಿ ಮುರುಳಿಧರ್, ತಾಲೂಕು ಯೋಜನಾಧಿಕಾರಿಗಳಾದ ಧನಂಜಯ್, ರಮೇಶ್, ಜಿಲ್ಲಾ ಜನ ಜಾಗೃತಿ ಸಮಿತಿ ಅಧ್ಯಕ್ಷ ಹಂದನಹಳ್ಳಿ ಸೋಮಶೇಖರ್, ಗ್ರಾ.ಪಂ.ಅಧ್ಯಕ್ಷ ನಾರಾಯಣ್‌ ಕುಮಾರ್, ಇನ್ಸ್ ಪೆಕ್ಟರ್ ಸಿ.ವಿ.ರವಿ ಕೆರೆ ಅಭಿವೃದ್ದಿ ಸಮಿತಿ ಅಧ್ಯಕ್ಷ ಸೋಮನಾಥ ಚೌಹಾನ್ ಮಾತನಾಡಿದರು.

ಕೆರೆ ಅಂಚಿನಲ್ಲಿ ಸಸಿಗಳನ್ನು ನೆಡಲಾಯಿತು. ಕಾರ್ಯಕ್ರಮದಲ್ಲಿ ಯೋಜನೆಯ ಮೇಲ್ವಿಚಾರಕರಾದ ಲೋಕೇಶ್, ರಾಣಿ, ವೀಣಾ, ಕಿರಣ್, ಸಂತೋಷ್, ಬಾಬು, ಜ್ಞಾನ ವಿಕಾಸ ಕೇಂದ್ರದ ಶೃತಿ, ಸಿಬ್ಬಂದಿಗಳಾದ ಅಶೋಕ್‌ಶೆಟ್ಟಿ, ಶಿವಕುಮಾರ್, ಕೆರೆ ಅಭಿವೃದ್ದಿ ಸಮಿತಿ ಸದಸ್ಯರು, ಸೇವಾ ಪ್ರತಿನಿಧಿಗಳು, ಸಂಘದ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next