Advertisement

Dharmasthala; ರಾಮನ ಹೆಸರು ಉಸಿರಾಗಬೇಕು: ಹೇಮಾವತಿ ಹೆಗ್ಗಡೆ

11:35 PM Jan 22, 2024 | Team Udayavani |

ಬೆಳ್ತಂಗಡಿ: ಮರ್ಯಾದಾ ಪುರುಷೋತ್ತಮನಾಗಿ ಮೆರೆದ ಶ್ರೀರಾಮ ಪಿತೃವಾಕ್ಯ ಪರಿಪಾಲನೆ, ಕುಟುಂಬದವರ ಮೇಲಿನ ಪ್ರೀತಿ-ವಿಶ್ವಾಸ, ಸತ್ಯ-ಧರ್ಮ, ನ್ಯಾಯ-ನೀತಿ ಪರಿಪಾಲನೆ, ತಾಳ್ಮೆ, ದೃಢಸಂಕಲ್ಪ ಮೊದಲಾದ ಮಾನವೀಯ ಮೌಲ್ಯ ಹಾಗೂ ನೈತಿಕ ಗುಣಗಳಿಂದಾಗಿ ಸಾವಿರಾರು ವರ್ಷಗಳಿಂದ ಲಕ್ಷಾಂತರ ಜನರ ಮನ -ಮನೆಗಳಲ್ಲಿ ಸ್ಥಿರವಾಗಿದ್ದಾನೆ. ರಾಮನ ಹೆಸರು ನಮ್ಮ ಉಸಿರಾಗಬೇಕು ಎಂದು ಹೇಮಾವತಿ ವೀ. ಹೆಗ್ಗಡೆ ಹೇಳಿದರು.

Advertisement

ಅಯೋಧ್ಯೆಯ ಶ್ರೀರಾಮ ಮಂದಿರ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಧರ್ಮಸ್ಥಳದಲ್ಲಿ ಜ. 22ರಂದು ಅಮೃತವರ್ಷಿಣಿ ಸಭಾಭವನದಲ್ಲಿ ರಾಮನಾಮ ತಾರಕ ಮಂತ್ರ ಪಠಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಎಲ್ಲರೂ ರಾಮನಾಗಲು ಅಸಾಧ್ಯ. ಆದರೆ ರಾಮನ ಆದರ್ಶ ಗುಣಗಳನ್ನಾದರೂ ಪಾಲಿಸಿ ರಾಮರಾಜ್ಯದ ಕನಸು ನನಸಾಗಬೇಕು. ರಾಮನನ್ನು ಹಲವರು ದೇವರಾಗಿ ಆರಾಧಿಸಿದರೆ ಅನೇಕ ಮಂದಿ ಆತನ ಆದರ್ಶ, ಮಾನವೀಯ ಗುಣಗಳಿಗಾಗಿ ಗೌರವಿಸಿ ಅನುಸರಿಸುತ್ತಾರೆ. ಅಯೋಧ್ಯೆಯೂ ಹಲವು ಮಂದಿ ತೀರ್ಥಂಕರರ ಜನ್ಮಸ್ಥಳವಾಗಿದ್ದು ಜೈನರಿಗೂ ಪವಿತ್ರ ತೀರ್ಥಕ್ಷೇತ್ರವಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ದೃಢಸಂಕಲ್ಪ ಹಾಗೂ ಲಕ್ಷಾಂತರ ಭಕ್ತರ ಕಠಿನ ವ್ರತ-ನಿಯಮಗಳ ಪಾಲನೆ, ಶ್ರದ್ಧಾಭಕ್ತಿಯಿಂದ ರಾಮಮಂದಿರದ ಕನಸು ನನಸಾಗಿದೆ ಎಂದು ಹೇಳಿ ಹೇಮಾವತಿ ಹೆಗ್ಗಡೆಯವರು ರಾಮನಾಮತಾರಕ ಮಂತ್ರ ಪಠಣಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಡಿ. ಹರ್ಷೇಂದ್ರ ಕುಮಾರ್‌ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್‌ ಉಪಸ್ಥಿತರಿದ್ದರು. ಬೆಳ್ತಂಗಡಿ ತಾಲೂಕಿನ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯೊಂದಿಗೆ ಸಾಮೂಹಿಕ ಭಜನೆ ಹಾಗೂ ರಾಮನಾಮತಾರಕ ಮಂತ್ರ ಪಠಿಸಲಾಯಿತು. ಆಯೋಧ್ಯೆಯ ರಾಮಜನ್ಮಭೂಮಿಯ ಕರಸೇವೆಯಲ್ಲಿ ಭಾಗಿಯಾದ ಕೆಲವರನ್ನು ಸಮ್ಮಾನಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next