Advertisement

ಧರ್ಮಸ್ಥಳ ಯೋಜನೆ: 130 ಕಾಮಗಾರಿಗೆ 1.25 ಕೋ.ರೂ. 

10:49 AM Jan 29, 2018 | Team Udayavani |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಮುಖಾಂತರ ಸಮುದಾಯಕ್ಕೆ ಸಂಬಂಧ ಪಟ್ಟಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನೆರವನ್ನು ನೀಡಲಾಗುತ್ತಿದೆ. ಇದೀಗ ರಾಜ್ಯದ ವಿವಿಧ ಜಿಲ್ಲೆಗಳ 92 ತಾಲೂಕಿನ 130 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 1.25 ಕೋ.ರೂ. ಮೊತ್ತಕ್ಕೆ ಮಂಜೂರಾತಿ ನೀಡಿರುತ್ತಾರೆ ಎಂದು ಸಮುದಾಯ ಅಭಿವೃದ್ಧಿ ವಿಭಾಗ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ ಹೇಳಿದ್ದಾರೆ.

Advertisement

ಗ್ರಾಮದ ಅಭಿವೃದ್ಧಿಗೆ ಆರ್ಥಿಕ ಸಹಕಾರದೊಂದಿಗೆ ತಾಂತ್ರಿಕ ಮಾಹಿತಿ ನೀಡಿ ವ್ಯವಹಾರದಲ್ಲಿ ಪಾರದರ್ಶಕತೆ, ದಾಖಲಾತಿಗಳ ನಿರ್ವಹಣೆ, ಸಮಿತಿಗಳ ನಿರ್ವಹಣೆ, ಕಾಮಗಾರಿ ಗುಣಮಟ್ಟ ಮುಂತಾದ ಮಾಹಿತಿಗಳನ್ನು ಒದಗಿಸಲಾಗುತ್ತಿದೆ. ಅಭಿವೃದ್ಧಿ ಕಾಮಗಾರಿಗಳು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಿಕೆ ಬಗ್ಗೆ ನಿರಂತರ ಪರಿಶೀಲನೆ ಮಾಡಲಾಗುತ್ತಿದೆ.

    ಅಭಿವೃದ್ಧಿಗೆ ಪೂರಕವಾಗಿ ಸ್ಥಳೀಯ ಸಂಪನ್ಮೂಲಗಳು, ಸಂಘ-ಸಂಸ್ಥೆಗಳಿಂದ ಆರ್ಥಿಕ ಕ್ರೋಡೀಕರಣ, ಸರಕಾರಿ ಅನುದಾನಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಡುವುದರೊಂದಿಗೆ ಶ್ರೀ ಕ್ಷೇತ್ರದ ನೆರವನ್ನು ನೀಡಲಾಗುತ್ತಿದೆ. ಇದು ಸಮುದಾಯ ಅಭಿವೃದ್ಧಿ ವಿಭಾಗದ ಮುಖ್ಯ ಉದ್ದೇಶವಾಗಿದೆ.

ಕಳೆದ 25 ವರ್ಷಗಳಿಂದ ಈ ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷ ಡಾ| ಡಿ. ವೀರೇಂದ್ರ ಹೆಗ್ಗಡೆ ಮುನ್ನಡೆಸುತ್ತಿದ್ದಾರೆ. ಸಂಘ-ಸಂಸ್ಥೆಗಳಿಗೆ ಆರ್ಥಿಕ ನೆರವನ್ನು ನೀಡುವುದರೊಂದಿಗೆ ಸಂಘ-ಸಂಸ್ಥೆಗಳನ್ನು ಸದೃಢಗೊಳಿಸುತ್ತಿದ್ದಾರೆ. ಗ್ರಾಮ ಕಲ್ಯಾಣ ಕಾರ್ಯಕ್ರಮದಂತೆ ಸಭಾಭವನ ರಚನೆ, ಭಜನ ಮಂದಿರ ಕಟ್ಟಡ ರಚನೆ, ಅಂಗನವಾಡಿ ಕೇಂದ್ರದ ಶೌಚಾಲಯ ರಚನೆ, ಶಾಲಾ ತರಗತಿ ಕೊಠಡಿ ರಚನೆ, ಯುವಕ ಮಂಡಲ ರಚನೆ, ಸಾರ್ವಜನಿಕ ಶೌಚಾಲಯ ರಚನೆ, ಭೋಜನ ಶಾಲೆ ನಿರ್ಮಾಣ ಮುಂತಾದ 70 ಅಭಿವೃದ್ಧಿ ಕಾರ್ಯಕ್ರಮಕ್ಕೆ 76 ಲಕ್ಷ ರೂ. ಮಂಜೂರಾಗಿರುತ್ತದೆ.

ಜ್ಞಾನದೀಪ ಶಾಲಾ ಶಿಕ್ಷಣ ಅಭಿವೃದ್ಧಿ ಕಾರ್ಯಕ್ರಮದಂತೆ ಶಾಲಾ ಆಟದ ಮೈದಾನ, ಶಾಲಾ ಆವರಣ, ಶಾಲಾ ಶೌಚಾಲಯ, ಶಾಲಾ ಕಟ್ಟಡ ದುರಸ್ತಿ ಮತ್ತು ಶಾಲಾ ವಿದ್ಯುತ್ಕರಣ ಕುರಿತು ಒಟ್ಟು 12 ತಾಲೂಕಿನ 14 ಅಭಿವೃದ್ಧಿ ಕಾಮಗಾರಿಗೆ  6. ಲಕ್ಷ ರೂ.ಬಿಡುಗಡೆ ಮಾಡಲಾಗಿದೆ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ಉದ್ದೇಶದೊಂದಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ರಚನೆಗೆ ಅನುದಾನ ನೀಡಲಾಗುತ್ತಿದೆ. ಇದೀಗ 21 ತಾಲೂಕಿನ 32 ವಿವಿಧ ಗ್ರಾಮೀಣ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ  26.50 ಲಕ್ಷ ರೂ. ಮಂಜೂರು ಮಾಡಲಾಗಿದೆ.

Advertisement

ಉಡುಪಿ ತಾಲೂಕಿನ ಯಡ್ತಾಡಿ, ಬೆಳ್ತಂಗಡಿ ತಾಲೂಕಿನ ವೇಣೂರು ಮತ್ತು ಲಾೖಲ, ಬಂಟ್ವಾಳ ತಾಲೂಕಿನ ಕಲ್ಲಡ್ಕ ಗೋಳ್ತಮಜಲು ಹಿಂದೂ ರುದ್ರಭೂಮಿ ರಚನೆಗೆ ಒಟ್ಟು 8 ತಾಲೂಕಿನ 10 ಹಿಂದೂ ರುದ್ರಭೂಮಿ ರಚನೆಗೆ ಒಟ್ಟು ರೂ 18.50 ಲಕ್ಷವನ್ನು ಮಂಜೂರು ಮಾಡಲಾಗಿದೆ. ನವಚೇತನ ಕಾರ್ಯಕ್ರಮದಂತೆ ಮಾಗಡಿ ತಾಲೂಕಿನ ಶ್ರೀ ಶತಶೃಂಗ ವಿದ್ಯಾಸಂಸ್ಥೆಯ ಕಿವುಡು ಮಕ್ಕಳ ಶಾಲಾ ಕಟ್ಟಡ ರಚನೆಗೆ ಅನುದಾನ ದೊರಕಿಸಿಕೊಡಲಾಗಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದ ಮೂಲಕ ಸಮುದಾಯದ ಅಭಿವೃದ್ಧಿಗೆ ಒಟ್ಟು 130 ಅಭಿವೃದ್ಧಿ ಕಾಮಗಾರಿಗೆ ಪ್ರೋತ್ಸಾಹ ನೀಡಲಾಗಿದೆ ಎಂದು ಜಯರಾಮ ನೆಲ್ಲಿತ್ತಾಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next