ಮೊಳಕಾಲ್ಮೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿ ತಾಲೂಕಿನ ತುಮಕೂರ‌್ಲಹಳ್ಳಿ ಗ್ರಾಮದಲ್ಲಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಸಿದ್ದಯ್ಯನಕೋಟೆ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ತುಮಕೂರ‌್ಲಹಳ್ಳಿ ಗ್ರಾಮದ ಸುಮಾರು 24.16 ಎಕರೆ ವಿಸ್ತೀರ್ಣದ ಕೆರೆಯನ್ನು 14.26 ಲಕ್ಷ ರೂ. ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದೆ. ಗ್ರಾಮೀಣ ಜನತೆಯ ಬದುಕನ್ನು ಹಸನು ಮಾಡುವ ಗುರಿಯನ್ನು ಧರ್ಮಸ್ಥಳ ಸಂಸ್ಥೆ ಹೊಂದಿದೆ. ಧರ್ಮಸ್ಥಳ ಧರ್ಮಾಧಿ ಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಕನಸಿನ ಕೂಸಾದ “ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದ ಅಡಿಯಲ್ಲಿ ಕರ್ನಾಟಕದಾದ್ಯಂತ ಹೂಳು ತುಂಬಿದ ಕೆರೆಗಳನ್ನು ಪುನಶ್ಚೇತನಗೊಳಿಸಲು ಉದ್ದೇಶಿಸಲಾಗಿದೆ.
ಇದನ್ನೂ ಓದಿ:ಸರ್ವಿಸ್ ಆನ್ ವೀಲ್ಸ್ : ಮನೆ ಬಾಗಿಲಿಗೆ ಸರಕಾರಿ ಸೇವೆ
ತುಮಕೂರ‌್ಲಹಳ್ಳಿ ಕೆರೆಯನ್ನು 295ನೇ ಕೆರೆಯಾಗಿ ಡಾ| ವೀರೇಂದ್ರ ಹೆಗ್ಗಡೆಯವರು ಆಯ್ಕೆ ಮಾಡುವ ಮೂಲಕ ಗ್ರಾಮಾಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಗಳೂರು ಜಿಲ್ಲಾ ಕಚೇರಿ ನಿರ್ದೇಶಕ ಜನಾರ್ದನ ಮಾತನಾಡಿ, ಮನುಷ್ಯರು ಹಾಗೂ ಜೀವರಾಶಿಗಳು ಉಸಿರಾಡಲು ಆಮ್ಲಜನಕ ಎಷ್ಟು ಮುಖ್ಯವೋ ಒಂದು ಗ್ರಾಮಕ್ಕೆ ಕೆರೆ ಕೂಡ ಅಷ್ಟೇ ಮುಖ್ಯ. ನಮ್ಮ ಮನೆಗಳಲ್ಲಿ ಸಿಂಟೆಕ್ಸ್, ತೊಟ್ಟಿ, ಡ್ರಮ್, ಕೊಡಗಳಲ್ಲಿ ಹೇಗೆ ನೀರನ್ನು ಶೇಖರಿಸಿ ಬಳಕೆ ಮಾಡಲಾಗುತ್ತಿದೆಯೋ ಅದೇ ರೀತಿ ನಮ್ಮ ಊರಿನ ಕೆರೆಯಲ್ಲಿ ನೀರು ಶೇಖರಣೆಯಾದಲ್ಲಿ ವ್ಯವಸಾಯ ಮಾಡಲು ರೈತರಿಗೆ, ಬಳಕೆ ಮಾಡಲು ಊರಿನ ಜನರಿಗೆ, ಕುಡಿಯಲು ಜಾನುವಾರು ಪಶು-ಪಕ್ಷಿಗಳಿಗೆ ತುಂಬಾ ಸಹಾಯವಾಗಲಿದೆ. ಗ್ರಾಮ ಪಂಚಾಯತ್ ಮತ್ತು ಗ್ರಾಮಸ್ಥರ ಸಹಕಾರದೊಂದಿಗೆ ಧರ್ಮಸ್ಥಳ ಸಂಸ್ಥೆಯು ಕಾಮಗಾರಿ ಆರಂಭಿಸಲಿದೆ ಎಂದರು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ಬೋರಮ್ಮ, ಇಂಜಿನಿಯರ್. ಮಂಜುನಾಥ, ಧರ್ಮಸ್ಥಳ ಸಂಸ್ಥೆ ಯೋಜನಾ ಧಿಕಾರಿ ಕೊರಗಪ್ಪ ಪೂಜಾರಿ, ಗ್ರಾಪಂ ಸದಸ್ಯ ಬಸಣ್ಣ, ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜಣ್ಣ, ಪಿಡಿಒ ಹೊನ್ನೂರಪ್ಪ ಭಾಗವಹಿಸಿದ್ದರು