ಕೆ.ಆರ್.ನಗರ: ನಾಡಿನಾದ್ಯಂತ ಮದ್ಯವರ್ಜನ ಶಿಬಿರಗಳನ್ನು ನಡೆಸಿ ಕುಡಿತಕ್ಕೆ ದಾಸರಾಗಿರುವವರನ್ನು ಸರಿದಾರಿಗೆ ತಂದು ಸಮಾಜಮುಖೀ ಕೆಲಸ ಮಾಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿಯವರ ಸೇವಾ ಕಾರ್ಯ ಶ್ಲಾಘನೀಯ ಎಂದು ತಾ. ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಹೇಳಿದರು.
ಪಟ್ಟಣದ ಎಂಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಮದ್ಯವರ್ಜನ ಶಿಬಿರದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಗಳ ಮೂಲಕ ಆರ್ಥಿಕ ನೆರವು ನೀಡುವುದರ ಜತೆಗೆ ಇಂತಹ ಶಿಬಿರಗಳನ್ನು ನಡೆಸುವ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರಹೆಗ್ಗಡೆಯವರ ಚಿಂತನೆ ಇತರರಿಗೆ ಮಾದರಿ ಎಂದರು.
ಸರ್ವರೂ ಸಹಕಾರ ನೀಡಿ: ಇತ್ತೀಚಿನ ವರ್ಷಗಳಲ್ಲಿ ಸಂಸ್ಥೆಯವರು ಉತ್ತಮವಾದ ಕೆಲಸಗಳನ್ನು ಮಾಡುತ್ತಿದ್ದು ಇದರಿಂದ ಜನಸಾಮಾನ್ಯರಿಗೆ ಆರ್ಥಿಕ ಅನುಕೂಲ ಆಗುವುದರ ಜತೆಗೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿಯೂ ಸಹಕಾರಿಯಾಗುತ್ತಿದ್ದು ಇಂತಹ ಕೆಲಸಗಳಿಗೆ ಸರ್ವರೂ ಸಹಕಾರ ನೀಡಬೇಕು. ತಾಲೂಕು ಕೇಂದ್ರದಲ್ಲಿ ನಡೆಯಲಿರುವ 101ನೇ ಮದ್ಯ ವರ್ಜನ ಶಿಬಿರಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿ, ಪಟ್ಟಣ ಪ್ರದೇಶದ ಜತೆಗೆ ಗ್ರಾಮಾಂತರ ಪ್ರದೇಶಗ ಳಲ್ಲಿಯೂ ಇಂತಹ ಶಿಬಿರಗಳನ್ನು ಆಯೋಜಿಸಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಗಾಯತ್ರಿ ಮಾತನಾಡಿ, ಜುಲೈ ತಿಂಗಳಿನಲ್ಲಿ 8 ದಿನಗಳ ಕಾಲ ಪಟ್ಟಣದಲ್ಲಿ ಮದ್ಯವರ್ಜನ ಶಿಬಿರ ನಡೆಸುತ್ತಿದ್ದು ಇದಕ್ಕೆ ತಾಲೂಕಿನ ಸರ್ವರೂ ಅಗತ್ಯ ಸಲಹೆ ಮತ್ತು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಆಯ್ಕೆ: ಮದ್ಯವರ್ಜನ ಶಿಬಿರದ ಗೌರವಾಧ್ಯಕ್ಷರಾಗಿ ನಿವೃತ್ತ ಕೃಷಿ ಅಧಿಕಾರಿ ಕೆ.ಎಸ್.ಮಲ್ಲಪ್ಪ, ಅಧ್ಯಕ್ಷರಾಗಿ ಸತ್ಯನಾರಾಯಣ್, ಕೋಶಾಧಿಕಾರಿಯಾಗಿ ಎಲ್.ಪಿ. ರವಿಕುಮಾರ್, ಉಪಾಧ್ಯಕ್ಷರಾಗಿ ಮಹೇಂದ್ರ, ಆರ್.ಗೋಪಾಲ್, ಕವಿತಾ ವಿಜಯಕುಮಾರ್, ಕಾರ್ಯದರ್ಶಿಯಾಗಿ ಮನೋಹರಿ, ಪ್ರಧಾನ ಸಂಚಾಲಕರಾಗಿ ವಿಜಯಕುಮಾರ್, ಸಂಚಾಲಕರಾಗಿ ತಾಲೂಕು ಯೋಜನಾಧಿಕಾರಿ ಗಾಯತ್ರಿ, ಪದಾಧಿಕಾರಿಗಳಾಗಿ ಅರುಣ್.ಬಿ.ನರಗುಂದ್, ಸಂಪತ್‌ಕುಮಾರ್ ಸೇರಿದಂತೆ ಇತರರನ್ನು ಆಯ್ಕೆಮಾಡಲಾಯಿತು.
ಪುರಸಭೆ ಅಧ್ಯಕ್ಷೆ ಕವಿತಾವಿಜಯಕುಮಾರ್, ಸದಸ್ಯೆ ಸರೋಜಮಹದೇವ್, ವಕೀಲರ ಸಂಘದ ಅಧ್ಯಕ್ಷ ಸಿ.ಡಿ.ಮಹದೇವಪ್ಪ, ಗ್ರಾಪಂ ಸದಸ್ಯ ಹೆಚ್.ಆರ್. ಕೃಷ್ಣಮೂರ್ತಿ, ಸಂಸ್ಥೆಯ ಕೃಷಿ ಅಧಿಕಾರಿ ಉಮೇಶ್, ನಗರ ಮೇಲ್ವಿಚಾರಕಿ ಕಿಶೋರಿ ರೈ, ಶಿಬಿರಾಧಿಕಾರಿ ಭಾಸ್ಕರ್, ವಿಜಯಾನಂದ್ ಇದ್ದರು.