Advertisement

ಮಹಾಮಸ್ತಕಾಭಿಷೇಕ ಯಶಸ್ಸಿಗೆ ರಾಜ್ಯ ಮಟ್ಟದ ಸಮಿತಿ: ಹೆಗ್ಗಡೆ

01:17 PM Sep 13, 2018 | Team Udayavani |

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್‌ ಬಾಹುಬಲಿ ಸ್ವಾಮಿಗೆ 2019ರ ಫೆಬ್ರವರಿಯಲ್ಲಿ ನಾಲ್ಕನೇ ಮಹಾಮಸ್ತಕಾಭಿಷೇಕ ನಡೆಯಲಿದ್ದು, ತಯಾರಿಗಾಗಿ ರಾಜ್ಯ ಮಟ್ಟದ ಸಮಿತಿ ರಚಿಸಲಾಗಿದೆ ಎಂದು ಕ್ಷೇತ್ರದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

ಮಹಾಮಸ್ತಾಕಾಭಿಷೇಕದ ಪೂರ್ವ ಸಿದ್ಧತೆಗೆ ರಾಜ್ಯದ ವಿವಿಧ ಭಾಗಗಳ ಶ್ರಾವಕರು ಹಾಗೂ ಸಂಘ- ಸಂಸ್ಥೆಗಳ ಪ್ರಮುಖರ ಸಭೆಯನ್ನು ಸೋಮವಾರ ಕ್ಷೇತ್ರದಲ್ಲಿ ಕರೆಯಲಾಗಿದ್ದು, ಎಲ್ಲರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ನಾಡಿನ ಶ್ರೇಷ್ಠ ಸಂತರಾದ ದಿಗಂಬರ ಆಚಾರ್ಯ ವರ್ಧಮಾನ ಸಾಗರ್‌ಜಿ ಮಹಾರಾಜರು, ಪುಷ್ಪದಂತ ಸಾಗರಜಿ ಮಹಾರಾಜರ ಸಹಿತ ಕನಿಷ್ಠ 15 ಮಂದಿ ದಿಗಂಬರ ಮುನಿಗಳು ಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಸ್ತಕಾಭಿಷೇಕದ ಪ್ರಧಾನ ಸಂಚಾಲಕರಾಗಿ ಡಿ. ಸುರೇಂದ್ರ ಕುಮಾರ್‌, ಸಂಚಾಲಕರಾಗಿ ಡಿ. ಹರ್ಷೇನ್ದ್ರ ಕುಮಾರ್‌, ಜತೆಗೆ ಉಸ್ತುವಾರಿ ನೋಡಲು ಕೆ. ಮಹಾವೀರ ಅಜ್ರಿ ಹಾಗೂ ಎ.ವಿ. ಶೆಟ್ಟಿ ಅವರು ಸಮಿತಿಯಲ್ಲಿರುತ್ತಾರೆ ಎಂದರು.

ಮಸ್ತಕಾಭಿಷೇಕದ ದಿನಾಂಕದ ಕುರಿತು ಗುರುಗಳ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಆರಂಭದಲ್ಲಿ 5 ದಿನಗಳ ಕಲ್ಯಾಣ ಕಾರ್ಯಕ್ರಮ, 3 ದಿನ ಸತತ ಮಸ್ತಕಾಭಿಷೇಕ ನಡೆಯಲಿದ್ದು, ಬಳಿಕ ಪ್ರತಿವಾರ ಭಕ್ತರ ಅಪೇಕ್ಷೆಯ ಮೇರೆಗೆ ಶನಿವಾರ ಹಾಗೂ ರವಿವಾರ ಮಸ್ತಕಾಭಿಷೇಕ ಮುಂದುವರಿಸಲಾಗುತ್ತದೆ ಎಂದರು.

ರಿಂಗ್‌ ರೋಡ್‌ ಭರವಸೆ
ರಾಜ್ಯ ಸರಕಾರವು ಕ್ಷೇತ್ರಕ್ಕೆ ಈಗಾಗಲೇ ಎಲ್ಲ ರೀತಿಯ ಬೆಂಬಲ ನೀಡಿದ್ದು, ಮುಖ್ಯಮಂತ್ರಿ ಕುಮಾರ ಸ್ವಾಮಿ ಹಾಗೂ ಸಚಿವ ಎಚ್‌.ಡಿ. ರೇವಣ್ಣ ಸಹಕಾರದ ಭರವಸೆ ನೀಡಿದ್ದಾರೆ. ಕ್ಷೇತ್ರದ ಮುಖ್ಯರಸ್ತೆಗಳಲ್ಲಿನ ವಾಹನ ಒತ್ತಡಕ್ಕೆ ಶಾಶ್ವತ ಪರಿಹಾರ ನೀಡಲು ರೇವಣ್ಣ ಅವರು ಕ್ಷೇತ್ರಕ್ಕೆ ರಿಂಗ್‌ರೋಡ್‌ನ‌ ಕುರಿತು ಭರವಸೆ ನೀಡಿದ್ದಾರೆ ಎಂದು ಹೆಗ್ಗಡೆ ತಿಳಿಸಿದರು.

ಜನಕಲ್ಯಾಣ ಕಾರ್ಯ
ಕ್ಷೇತ್ರದಲ್ಲಿ ಬಾಹುಬಲಿಯ ಪ್ರತಿಷ್ಠೆಯ ವರ್ಷ ಜನಕಲ್ಯಾಣ ಕಾರ್ಯವಾಗಿ ಗ್ರಾಮಾಭಿವೃದ್ಧಿ ಯೋಜನೆ, ರುಡ್‌ಸೆಡ್‌ ಪ್ರಾರಂಭವಾಯಿತು. ಈ ಬಾರಿ ರಾಜ್ಯದಲ್ಲಿ 200 ಕೆರೆಗಳ ಹೂಳೆತ್ತುವ ಕಾರ್ಯವನ್ನು ಕೈಗೊಂಡಿದ್ದೇವೆ. ಇದಕ್ಕೆ ರಾಜ್ಯ ಸರಕಾರ ಕೂಡ ನಮಗೆ ಸಹಕಾರ ನೀಡಿದ್ದು, ಕಿರು ನೀರಾವರಿ ಯೋಜನೆಯ ಪುಟ್ಟರಾಜು ಅವರ ಸಭೆಯನ್ನೂ ಕರೆದಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದಿಂದಲೂ ಈ ಕಾರ್ಯ ನಡೆಯಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next