ಕೊಟ್ಟಿಗೆಹಾರ: ಶಿವರಾತ್ರಿ ಅಂಗವಾಗಿ ಬೆಂಗಳೂರು ಮೂಲಕ ಧರ್ಮಸ್ಥಳಕ್ಕೆ ಸಹಸ್ರಾರು ಜನರು ತೆರಳುತ್ತಿದ್ದಾರೆ. ಧರ್ಮಸ್ಥಳದ ಪಾದಯಾತ್ರೆಗೆ ಕೊಟ್ಟಿಗೆಹಾರದಲ್ಲಿ ಯಾತ್ರಿಕರಿಗೆ ಮಲಗಲು ಸ್ಥಳವಿಲ್ಲದೇ ಬಸ್ ನಿಲ್ದಾಣ, ಶಾಲೆ, ಮತ್ತಿತರ ಕಡೆ ಟೆಂಟ್ ಹಾಕಿದರೂ ಜನರಿಗೆ ತಂಗಲು ಸ್ಥಳಾವಕಾಶ ಇಲ್ಲದೇ ಕೊಟ್ಟಿಗೆಹಾರ ಯಾತ್ರಿಕರಿಂದ ಸೋಮವಾರ ತುಂಬಿ ಹೋಗಿತ್ತು.
ಪಾದಯಾತ್ರಿಕರಿಗೆ ದಾನಿಗಳು ಉಚಿತ ಫಲಾಹಾರ, ತಂಪು ಪಾನೀಯ ವಿತರಿಸುವ ಮೂಲಕ ಗಮನ ಸೆಳೆದರು. ಸುಮಾರು ಐದಾರು ವರ್ಷಗಳಿಂದ ಪಾದಯಾತ್ರಿಗಳಿಗೆ ಸೇವೆ ನೀಡುತ್ತಿದ್ದು, ಸೋಮವಾರ ಕೊಟ್ಟಿಗೆಹಾರ ವೇಣು ಗೋಪಾಲ್ ಪೈ ಅವರ ಮನೆ ಮುಂದೆ ಪೆಂಡಾಲ್ ಹಾಕಿ ಬೆಂಗಳೂರಿನ ರೇವಣ್ಣ ಅವರ ತಂಡ ಸುಮಾರು 10 ಸಾವಿರಕ್ಕೂ ಅಧಿಕ ಮಂದಿಗೆ ಕೋಸಂಬರಿ, ಮಜ್ಜಿಗೆ, ಕಲ್ಲಂಗಡಿ ಹಣ್ಣು ಹಾಗೂ ತಂಪು ಪಾನೀಯ ವಿತರಿಸಿದೆ. ಬಸವೇಶ್ವರ ನಗರದ ರೇವಣ್ಣ ಪತ್ರಿಕೆಯೊಂದಿಗೆ ಮಾತನಾಡಿ, ಪ್ರತಿವರ್ಷವೂ ನಿರಂತರವಾಗಿ ಈ ಸೇವೆ ಮಾಡುತ್ತಾ ಬಂದಿದ್ದೇವೆ. ಈ ಉಚಿತ ಸೇವೆಯನ್ನು 10 ವರ್ಷದ ಹಿಂದೆ ಆರಂಭಿಸಿದ್ದು, 3 ವರ್ಷ ಬೆಂಗಳೂರಿನಲ್ಲಿಯೇ ಮಾಡುತ್ತಿದ್ದೆವು. ಆದರೆ, ದೂರದ ಪ್ರಯಾಣದ ಪಾದಯಾತ್ರೆಯಾದ್ದರಿಂದ ಕೊಟ್ಟಿಗೆಹಾರ ಪ್ರವಾಸಿ ತಾಣವೂ ಆಗಿರುವುದರಿಂದ ಹಾಗೂ ಚಾರ್ಮಾಡಿ ಘಾಟಿ ಇರುವುದರಿಂದ ಜನರಿಗೆ ಮಾರ್ಗದರ್ಶನ ನೀಡುವ ಸಲುವಾಗಿ ಕೊಟ್ಟಿಗೆಹಾರ ಆಯ್ಕೆ ಮಾಡಿ ಆಯಾಸವಾಗಿ ಬಂದ ಪ್ರಯಾಣಿಕರಿಗೆ ಉಚಿತ ಸೇವೆ ನೀಡುತ್ತಿದ್ದೇವೆ. ಇಂತಹ ಕಾರ್ಯಗಳಿಂದ ನಮಗೆ ನೆಮ್ಮದಿ, ಮನಃಶಾಂತಿ ಸಿಗುತ್ತದೆ ಎಂದರು.
ಸ್ಥಳೀಯರಾದ ಸಂಜಯ್ ಗೌಡ ಮಾತನಾಡಿ, ಸೋಮವಾರ ಹತ್ತು ಸಾವಿರಕ್ಕೂ ಅಧಿ ಕ ಮಂದಿ ಕೊಟ್ಟಿಗೆಹಾರದಲ್ಲಿ ಮಲಗಿದ್ದಾರೆ. ಸರ್ಕಾರಿ ಬಸ್ ನಿಲ್ದಾಣದಲ್ಲಿ ಬಸ್‌ಗಳ ಸಂಚಾರ ಇಲ್ಲದೇ ಇರುವುದರಿಂದ ಪಾದಯಾತ್ರಿಗಳು ಸುಮಾರು 2 ಸಾವಿರ ಮಂದಿ ಯಾತ್ರಿಕರು ಉಳಿದುಕೊಡಿದ್ದಾರೆ. ಕೊಟ್ಟಿಗೆಹಾರದಲ್ಲಿ ಒಂದೇ ಸ್ಥಳದಲ್ಲಿ ಅಲ್ಲದೇ ಹಲವು ಕಡೆ ತಂಡೋಪತಂಡವಾಗಿ ಭಕ್ತರು ಉಳಿದಿದ್ದಾರೆ. ಭಕ್ತಾ ದಿಗಳಿಗೆ ಮೂಲಸೌಲಭ್ಯ ಹಾಗೂ ಶೌಚಾಲಯದ ಕೊರತೆಯಿದೆ. ಮುಂದಿನ ವರ್ಷಗಳಲ್ಲಿ ಸರ್ಕಾರದ ವತಿಯಿಂದ ಜನರಿಗೆ ಉಳಿಯಲು ಸಮುದಾಯ ಭವನ, ಸೌಚಾಲಯ, ಮೂತ್ರಾಲಯಗಳ ಅವಶ್ಯಕತೆ ಮುಖ್ಯವಾಗಿ ಬೇಕಾಗಿರುವುದರಿಂದ ಜಿಲ್ಲಾಡಳಿತ ಈ ಬಗ್ಗೆ ಸೌಲಭ್ಯ ಕಲ್ಪಿಸುವುದು ಒಳಿತು ಎಂದರು.
ಪಾದಯಾತ್ರೆಯಲ್ಲಿ ಬೆಂಗಳೂರು, ಕುಣಿಗಲ್, ಕಾಮಾಕ್ಷಿಪಾಳ್ಯ, ಕೋಲಾರ, ಮಂಡ್ಯ, ಬಳ್ಳಾರಿ, ಚೆನ್ನರಾಯಪಟ್ಟಣ, ಕೋಲಾರ, ಮೈಸೂರು, ಹಾಸನ, ಚಿಕ್ಕಮಗಳೂರು, ಮೂಡಿಗೆರೆ ಸೇರಿದಂತೆ ಹಲವು ಕಡೆಯಿಂದ ಜನ ಸಾಗರ ಶಿವರಾತ್ರಿ ಅಂಗವಾಗಿ ಧರ್ಮಸ್ಥಳಕ್ಕೆ ಹರಿದು ಬಂದಿದೆ.
ಈ ಬಾರಿ ಪಾದಯಾತ್ರಿಕರಿಗೆ ರಸ್ತೆ ವಿಸ್ತರಣೆಗೆ ಮರಗಳನ್ನು ಕಡಿತಲೆ ಮಾಡಿರುವುದರಿಂದ ಎಲ್ಲಿಯೂ ವಿಶ್ರಾಂತಿ ಪಡೆಯಲು ರಸ್ತೆ ಬದಿಯ ಮರವಿಲ್ಲದೇ ತೊಂದರೆಯಾಗಿದೆ. ಮರಗಳ ಮಹತ್ವ ಏನು ಎಂಬುದು ಈ ಬಾರಿ ನಮಗೆ ಗೊತ್ತಾಗಿದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಬೇಕು. (ಮಂಜುನಾಥ್, ಚನ್ನರಾಯಪಟ್ಟಣ)