ಉತ್ತರ ಮತ್ತು ದಕ್ಷಿಣ ಭಾರತದ ಸಂತರು, ಸ್ವಾಮೀಜಿಯವರು ಒಟ್ಟಾಗಿ ಕಲೆತು ನಿರ್ಣಯವನ್ನು ತಳೆಯುವ ವೇದಿಕೆ ಧರ್ಮಸಂಸದ್. ಇದನ್ನು ಮಾಡುವುದು ವಿಶ್ವ ಹಿಂದೂ ಪರಿಷದ್. ಸಾಧು ಸಂತರ ನಿರ್ಣಯವನ್ನು ತಾವು ಕಾರ್ಯಗತಗೊಳಿಸುವುದಾಗಿ ವಿಶ್ವ ಹಿಂದು ಪರಿಷದ್‌ನವರು ಪ್ರಕಟಿಸುತ್ತಾರೆ. 1984ರಲ್ಲಿ ಹೊಸದಿಲ್ಲಿ ಯಲ್ಲಿ ಮೊದಲ ಧರ್ಮಸಂಸದ್ ಸಭೆ ನಡೆದಿತ್ತು.
2ನೇ ಧರ್ಮ ಸಂಸದ್ ನಮ್ಮ ಮೂರನೆಯ ಪರ್ಯಾಯದ ಅವಧಿ 1985ರಲ್ಲಿ ನಡೆಯಿತು. ಇದುವರೆಗೆ ನಡೆದ 14 ಧರ್ಮ ಸಂಸದ್ ಸಭೆಗಳಲ್ಲಿ ಪರ್ಯಾಯ ಅವಧಿ ಹೊರತುಪಡಿಸಿ ನಾವು ಎಲ್ಲದರ ಲ್ಲಿಯೂ ಪಾಲ್ಗೊಂಡಿದ್ದೆವು. ಬಹುತೇಕ ಸಭೆ ನಡೆದದ್ದು ದಿಲ್ಲಿ, ಪ್ರಯಾಗ, ಹರಿದ್ವಾರಗಳಲ್ಲಿ. 1964ರಲ್ಲಿ ಆರೆಸ್ಸೆಸ್ 2ನೇ ಸರಸಂಘಚಾಲಕರು ಧರ್ಮಾಚಾರ್ಯರ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಲು ವಿಶ್ವ ಹಿಂದೂ ಪರಿಷದ್ ಸ್ಥಾಪಿಸಿದರು.
ವಿಶ್ವ ಹಿಂದು ಪರಿಷದ್ ಧರ್ಮಾಧಿಪತಿಗಳಿಗೆ ಪ್ರತ್ಯೇಕ ವೇದಿಕೆಯನ್ನು ರಚಿಸಿತು. 1985ರಲ್ಲಿ ಉಡುಪಿಯಲ್ಲಿ ನಡೆದ ಧರ್ಮಸಂಸದ್ ಸಭೆಯಲ್ಲಿ ಸರಕಾರವಂತೂ ಅಯೋಧ್ಯೆಯ ರಾಮ ಮಂದಿರವನ್ನು ಸಾರ್ವಜನಿಕರಿಗೆ ಬಿಟ್ಟುಕೊಡುವುದಿಲ್ಲವಾದ ಕಾರಣ ನಾವು ಚಳವಳಿ ನಡೆಸಿ ಬೀಗ ಒಡೆಯುತ್ತೇವೆಂದು ನಿರ್ಣಯ ಮಂಡನೆಯಾಯಿತು.
ಇದಾದ ಬಳಿಕ ರಾಜೀವ್‌ಗಾಂಧಿಯವರು ಬೀಗ ತೆಗೆದರು. ಹೀಗೆ ಉಡುಪಿಯಲ್ಲಿ ನಡೆದ ಒಂದು ನಿರ್ಣಯದಿಂದ ಅಯೋಧ್ಯೆ ರಾಮಮಂದಿರ ಸಾರ್ವಜನಿಕರಿಗೆ ತೆರೆಯುವಂತೆ ಆಯಿತು. ಈ ಬಾರಿಯೂ ಇದರ ಬಗೆಗೆ ನಿರ್ಣಯ ತಳೆಯಬಹುದು. ರಾಮಮಂದಿರವಲ್ಲದೆ ಏಕರೂಪ ನಾಗರಿಕ ಸಂಹಿತೆ, ಗೋಹತ್ಯೆ ಇತ್ಯಾದಿ ವಿಷಯ ಬಗ್ಗೆ ನಿರ್ಣಯವನ್ನು ಕೈಗೊಂಡರೂ ಕಾರ್ಯಗತವಾಗಲು ಅಡ್ಡಿಯಾಗುತ್ತಿದೆ.
ಮಂದಿರ ನಿರ್ಮಾಣಕ್ಕೆ ಕಾನೂನಿನ ತೊಂದರೆಯೂ ಇದೆ. ಪ್ರತ್ಯೇಕ ಮಸೂದೆ ತಂದರೆ ಮಾತ್ರ ಮುಂದಿನ ಕೆಲಸ ಸುಲಭವಾಗಬಹುದು. ಮುಂದೆ ಏನು ಆಗುತ್ತದೆ ಎಂಬುದನ್ನು ಕಾದು ನೋಡಬೇಕು. ಈ ಬಾರಿ ಸುಮಾರು 2,000ಕ್ಕೂ ಹೆಚ್ಚು ಸಂತರು ಬರಬಹುದು ಎಂದು ವಿಶ್ವ ಹಿಂದೂ ಪರಿಷದ್ ಕಾರ್ಯಕರ್ತರು ಹೇಳುತ್ತಿದ್ದಾರೆ. ಸಾಧು ಸಂತರನ್ನು ಸಂಪರ್ಕಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ.
ಕೆಲವು ಧರ್ಮಾಚಾರ್ಯರು ನಮ್ಮನ್ನು ಸಂಪರ್ಕಿಸುತ್ತಿ ದ್ದಾರೆ. ನಾವು ಧರ್ಮಸಂಸದ್ ಅಧಿವೇಶನದ ಆತಿಥೇಯ ಮಾತ್ರ. ಅತಿಥಿಗಳು ಸಾಧುಸಂತರು. ಸಭೆಯ ನಿರ್ಣಯಗಳನ್ನು ಅವರೇ ತಳೆಯುತ್ತಾರೆ. ಕೆಲವು ಬಾರಿ ನಮ್ಮ ಅಭಿಪ್ರಾಯಗಳನ್ನು ಹೇಳಿದ್ದು ಇದೆ. ಧರ್ಮಸಂಸದ್ ಬೇರೆ, ಹಿಂದೂ ಸಮಾಜೋತ್ಸವ ಬೇರೆ. ಧರ್ಮ ಸಂಸದ್ ಸಭೆ ಅಖೀಲ ಭಾರತ ಮಟ್ಟದ್ದು. ಹಿಂದೂ ಸಮಾಜೋತ್ಸವ ಸ್ಥಳೀಯವಾದದ್ದು.
-ಶ್ರೀವಿಶ್ವೇಶತೀರ್ಥ ಶ್ರೀಪಾದರು,
ಪಂಚಮ ಪರ್ಯಾಯ ಪೀಠಾಧೀಶರು, ಪರ್ಯಾಯ ಶ್ರೀಪೇಜಾವರ ಮಠ, ಶ್ರೀಕೃಷ್ಣಮಠ, ಉಡುಪಿ.