Advertisement
ಧರ್ಮಸ್ಥಳಕ್ಕೆ ಅ.29ರಂದು ಕೊಲ್ಲೂರು ಹಾಗೂ ಮಂಗಳೂರಿನ ಕದ್ರಿಯಿಂದ ಭವ್ಯ ಮೆರವಣಿಗೆಯಲ್ಲಿ ಬಂದ ಧರ್ಮಸಂರಕ್ಷಣ ರಥದ ಜತೆ ಉಜಿರೆಯಿಂದ 50 ಸಾವಿರಕ್ಕೂ ಮಿಕ್ಕಿ ಭಕ್ತರು, ಅಭಿಮಾನಿಗಳು ಪಾದಯಾತ್ರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ ಬಳಿಕ ಡಾ| ಹೆಗ್ಗಡೆಯವರು ಭಕ್ತಸಮೂಹವನ್ನು ಉದ್ದೇಶಿಸಿ ಮಾತನಾಡಿದರು.
ಸಭೆಯ ಆರಂಭದಲ್ಲಿ ಹೆಗ್ಗಡೆಯವರು ವೇದಿಕೆಯ ಮಧ್ಯದಲ್ಲಿರುವ ಧರ್ಮ ಪೀಠದಲ್ಲಿ ಆಸೀನರಾದರು. ಎಲ್ಲ ಸ್ವಾಮೀಜಿಯವರು ಹಣ್ಣು-ಹಂಪಲು, ತಾಂಬೂಲ, ಕಾಯಿ, ವೀಳ್ಯದೆಲೆ ಇರುವ ಹರಿವಾಣಕ್ಕೆ ಅಭಿಮಂತ್ರಿಸಿದ ಮಂತ್ರಾಕ್ಷತೆ ಹಾಕಿ ಶುಭ ಹಾರೈಸಿದರು. ಬಳಿಕ ಸಂಕಲ್ಪ ಪೀಠದಲ್ಲಿದ್ದ ಹರಿವಾಣವನ್ನು ಹೆಗ್ಗಡೆಯವರಿಗೆ ಹಸ್ತಾಂತರಿಸಲಾಯಿತು. ಬಳಿಕ ಸೇರಿದ ಸಭಾಸದರೆಲ್ಲರೂ ನಾವು ಸದಾ ಧರ್ಮದ ರಕ್ಷಣೆಗಾಗಿ ಧರ್ಮಸ್ಥಳದ ರಕ್ಷಣೆಗೆ ನಿಮ್ಮೊಂದಿಗಿದ್ದೇವೆ ಎಂದು ದೃಢಸಂಕಲ್ಪ ಮಾಡಿದರು.
Related Articles
Advertisement
ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಶಾಸಕ ಹರೀಶ್ ಪೂಂಜ ಇದ್ದರು.
ಮುಖ್ಯಾಂಶಗಳು-ಕೊಲ್ಲೂರಿನಿಂದ ಹೊರಟ ಧರ್ಮ ಸಂರಕ್ಷಣ ರಥ ಮತ್ತು ಮಂಗಳೂರಿನಿಂದ ಕದ್ರಿ ದೇವಸ್ಥಾನದಿಂದ ಹೊರಟ ಧರ್ಮಸಂರಕ್ಷಣ ರಥ ಉಜಿರೆಯ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದಾಗ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ, ಶಾಸಕ ಹರೀಶ್ ಪೂಂಜ, ಸಂಚಾಲಕ ಶಶಿಧರ ಶೆಟ್ಟಿ, ಬಸ್ರೂರು ಅಪ್ಪಣ್ಣ ಹೆಗ್ಡೆ ಉಭಯ ರಥಗಳನ್ನು ಗೌರವಪೂರ್ವಕವಾಗಿ ಸ್ವಾಗತಿಸಿದರು.
– ಸುಮಾರು 50ರಿಂದ 75 ಸಾವಿರದಷ್ಟು ಭಕ್ತರಿಂದ ಉಜಿರೆಯಿಂದ ಧರ್ಮಸ್ಥಳಕ್ಕೆ ಹೆಜ್ಜೆ.
– ಪಾದಯಾತ್ರೆಯಲ್ಲಿ ಮೊಳಗಿದ ಹರಹರ ಮಹಾದೇವ ಘೋಷಣೆ
– ಧರ್ಮಸ್ಥಳ ಮುಖ್ಯ ಪ್ರವೇಶದ್ವಾರದ ಬಳಿ ಧರ್ಮರಥ ಮತ್ತು ಪಾದಯಾತ್ರಿಗಳಿಗೆ ಸ್ವಾಗತ ಕೋರಿದ ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಶ್ರೇಯಸ್ ಕುಮಾರ್, ನಿಶ್ಚಲ್‌ಕುಮಾರ್.
– ಉಚಿತ ಪಾನೀಯ ವಿತರಿಸಿ ಧರ್ಮ ಸಾಮರಸ್ಯ ಮೆರೆದ ಕನ್ಯಾಡಿ ಬದ್ರಿಯಾ ಮಸೀದಿ ಮುಸಲ್ಮಾನ ಬಾಂಧವರು.
– ಸಾಮೂಹಿಕ ಪ್ರಾರ್ಥನೆಯೊಂದಿಗೆ ಪವಿತ್ರ ಧರ್ಮಕ್ಷೇತ್ರಗಳ ಸಂರಕ್ಷಣೆಯ ದೃಢಸಂಕಲ್ಪ.
– ಮಳೆ ಲೆಕ್ಕಿಸದೆ ಭಕ್ತರ ಸಮಾಗಮ, ಸಂಜೆ 3ರಿಂದ ರಾತ್ರಿ 7ರವರೆಗೆ ಪಾದಯಾತ್ರೆಯಲ್ಲಿ ಬಂದ ಭಕ್ತರು. ಕ್ಷೇತ್ರದಿಂದ ದುಪ್ಪಟ್ಟು ದಾನ ಧರ್ಮ
ಶ್ರೀ ಮುಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ಹಾಗೂ ಧರ್ಮದೇವತೆ ಸನ್ನಿಧಿಯಲ್ಲಿ ಪ್ರತಿ ತಿಂಗಳು ಸಂಕ್ರಾಂತಿಯಂದು ತಾನು ವರದಿ ಒಪ್ಪಿಸಬೇಕು. ಅವರ ಅಭಯ, ಅನುಗ್ರಹ ತಾನು ಮಾಡುವ ಎಲ್ಲ ಸೇವಾ ಕಾರ್ಯಗಳಿಗೆ ಇದೆ. ತಾನು ಮತ್ತು ಕುಟುಂಬದವರು ಎಲ್ಲರೂ ಶಾಂತಚಿತ್ತರಾಗಿದ್ದೇವೆ. ನಮ್ಮಲ್ಲಿ ಯಾವುದೇ ಸಂಶಯ, ಗೊಂದಲವಿಲ್ಲ. ನಿಮ್ಮ ಆಶೀರ್ವಾದದಿಂದ ಮುಂದೆ ನಿಶ್ಚಿಂತೆಯಾಗಿರುವೆ. ಪ್ರತಿ ವರ್ಷ ಮಹಾರಾಷ್ಟ್ರದಿಂದ ಕರ್ನಾಟಕದವರೆಗೆ ನೂರು ದೇವಸ್ಥಾನಗಳ ಅಭಿವೃದ್ಧಿಗೆ ಅಭಯ ನೀಡುತ್ತಿದ್ದೇವೆ. ನಿಮ್ಮ ಪ್ರೀತಿಗೆ ಕೃತಜ್ಞತೆಯಾಗಿ ನಮ್ಮ ಸೇವಾಕಾರ್ಯ ದುಪ್ಪಟ್ಟಾಗಲಿವೆ ಎಂದು ಡಾ| ಡಿ. ವೀರೇಂದ್ರ ಹೆಗ್ಗಡೆಯವರು ವಿಶ್ವಾಸ ವ್ಯಕ್ತಪಡಿಸಿದರು.