Advertisement

ರೈಲ್ವೇ  ಕ್ರಾಸಿಂಗ್‌; ಈಡೇರಿಲ್ಲ ದಶಕದ ಬೇಡಿಕೆ

11:19 AM Jan 12, 2019 | |

ಧಾರವಾಡ: ಚಾಲಕನ ಸಮಯ ಪ್ರಜ್ಞೆಯಿಂದ 50ಕ್ಕೂ ಹೆಚ್ಚು ಜನರ ಪ್ರಾಣ ಉಳಿದ ರೈಲ್ವೆ ಲೆವೆಲ್‌ ಕ್ರಾಸಿಂಗ್‌ಗಳಲ್ಲಿ ಮೇಲ್ಸೆತುವೆ ಅಥವಾ ಅಂಡರ್‌ಪಾಸ್‌ಗಳನ್ನು ನಿರ್ಮಿಸುವ ಯೋಜನೆಗಳ ಬಗ್ಗೆ ರೈಲ್ವೆ ಇಲಾಖೆ ದಶಕಗಳಿಂದಲೂ ತಾತ್ಸಾರ ತೋರುತ್ತಿರುವ ಅಂಶ ಬೆಳಕಿಗೆ ಬಂದಿದೆ.

Advertisement

ಹೌದು. ಇಡೀ ಧಾರವಾಡ ನಗರದಲ್ಲಿಯೇ ಹೆಚ್ಚೆಂದರೆ ನಾಲ್ಕೈದು ಕಡೆಗಳಲ್ಲಿ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಇದ್ದು, ಇವುಗಳಲ್ಲಿ ಮೇಲ್ಸೇತುವೆ ಅಥವಾ ಅಂಡರ್‌ಪಾಸ್‌ ನಿರ್ಮಿಸುವುದಕ್ಕೆ ಸಾರ್ವಜನಿಕರು, ಸ್ಥಳೀಯ ಮುಖಂಡರು, ಸ್ವಯಂ ಸೇವಾ ಸಂಸ್ಥೆಗಳು ಕಳೆದ ಒಂದು ದಶಕದಿಂದ ಮನವಿ ಮಾಡುತ್ತ ಬಂದಿದ್ದರೂ ಕೆಲಸ ಮಾತ್ರ ಆಗುತ್ತಿಲ್ಲ. ರೈಲ್ವೆ ಇಲಾಖೆಯ ಈ ನಿರ್ಲಕ್ಷ್ಯಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಧಾರವಾಡ ನಗರದಲ್ಲಿ ಒಟ್ಟು ನಾಲ್ಕು ಕಡೆಗಳಲ್ಲಿ ರೈಲ್ವೆ ಲೆವೆಲ್‌ ಕ್ರಾಸಿಂಗ್‌ಗಳಿವೆ. ಒಂದು ರೈಲ್ವೆ ನಿಲ್ದಾಣ ಪಕ್ಕದಲ್ಲಿರುವ ಕಲ್ಯಾಣ ನಗರ ಲೆವೆಲ್‌ ಕ್ರಾಸಿಂಗ್‌, ಇನ್ನೊಂದು ಶ್ರೀನಗರ- ಕರ್ನಾಟಕ ವಿಶ್ವವಿದ್ಯಾಲಯ ಆವರಣ ಬಳಿ ಇರುವಂತಹದ್ದು, 3ನೇಯದ್ದು ಧಾರವಾಡ-ಹಳಿಯಾಳ ರಸ್ತೆ ಅಕ್ಕಮಹಾದೇವಿ ಆಶ್ರಯ ಬಳಿ ನಾಲ್ಕನೇಯದ್ದು ಧಾರವಾಡ-ಅಳ್ನಾವರ ರಸ್ತೆಯ ಕೆಲಗೇರಿ ಬಳಿಯ ಲೆವೆಲ್‌ ಕ್ರಾಸಿಂಗ್‌.

ಈ ನಾಲ್ಕರಲ್ಲೂ ಮೇಲ್ಸೇತುವೆ ಅಥವಾ ಅಂಡರ್‌ಪಾಸ್‌ ಮಾಡಲು ಅವಕಾಶವಿದ್ದು, ದಶಕಗಳಿಂದ ಈ ಬೇಡಿಕೆ ಇಡೇರಿಲ್ಲ. ಸದ್ಯಕ್ಕೆ ಕಲ್ಯಾಣ ನಗರದಲ್ಲಿ ಮೇಲ್ಸೇತುವೆ ಕಟ್ಟಲು ಕಾಮಗಾರಿ ಆರಂಭಗೊಂಡಿದ್ದರೂ, ತಾಂತ್ರಿಕ ಕಾರಣದಿಂದ ಕೆಲಸ ನಿಂತಿದೆ. ಇನ್ನು ಅಳ್ನಾವರ ರಸ್ತೆ ಕೆಶಿಫ್‌ ರಸ್ತೆಯಾಗಿ ಪರಿವರ್ತನೆಯಾದರೂ ಮೇಲ್ಸೇತುವೆ ಮಾತ್ರ ಅರ್ಧಕ್ಕೆ ನಿಂತಿದ್ದು ಈಗಲೂ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಗೇಟ್ ಮೂಲಕವೇ ನಿಯಂತ್ರಿತವಾಗುತ್ತಿದೆ.

ರಾಜ್ಯಹೆದ್ದಾರಿ 28ರಲ್ಲಿ ಪ್ರಯಾಣಿಸುವ ಅದರಲ್ಲೂ ಧಾರವಾಡ-ಹಳಿಯಾಳ ಮಧ್ಯ ದಿನಕ್ಕೆ ನೂರಾರು ಬಸ್‌ಗಳು, ಖಾಸಗಿ ವಾಹನಗಳು, ಕಬ್ಬು ಸಾಗಣೆ ಲಾರಿಗಳು, ದಾಂಡೇಲಿ ಪೇಪರ್‌ಮಿಲ್‌ನ ಕಚ್ಚಾವಸ್ತು ಸಾಗಿಸುವ ವಾಹನಗಳು ಸಂಚರಿಸುತ್ತವೆ. ಆದರೆ ರೈಲ್ವೆ ಕ್ರಾಸಿಂಗ್‌ನಲ್ಲಿ ಮಾತ್ರ ಒಮ್ಮೆ ರೈಲ್ವೆ ಗೇಟ್ ಹಾಕಿದರೆ ಬರೊಬ್ಬರಿ ಒಂದು ಕಿಮೀ ವರೆಗೂ ವಾಹನಗಳು ನಿಲ್ಲಬೇಕು. ರೈಲ್ವೆ ದಾಟಿದ ನಂತರ ಆ ವಾಹನಗಳಿಂದ ಉಂಟಾಗುವ ಸಂಚಾರ ದಟ್ಟಣೆ ಮತ್ತು ಅಪಘಾತಗಳ ಸಂಖ್ಯೆ ಈ ರಸ್ತೆಯಲ್ಲಿ ಓಡಾಡುವವರಿಗೆ ನರಕ ಸದೃಶ್ಯವಾಗಿ ಹೋಗಿದೆ.

Advertisement

ಹೆಚ್ಚುತ್ತಿದೆ ವಾಹನ ದಟ್ಟಣೆ
ಇಡೀ ಧಾರವಾಡ ನಗರದಲ್ಲಿಯೇ ಅತೀ ಹೆಚ್ಚು ಬಸ್‌ಗಳು, ಖಾಸಗಿ ವಾಹನಗಳು ಸಂಚರಿಸುವ ರಸ್ತೆಯೆಂದರೆ ರಾಜ್ಯ ಹೆದ್ದಾರಿ 28 ಧಾರವಾಡ-ಹಳಿಯಾಳ ರಸ್ತೆ. ಪ್ರವಾಸೋದ್ಯಮ, ಕೈಗಾರಿಕೆ, ಹಳ್ಳಿಗರ ಬದುಕಿನೊಂದಿಗೆ ಜೋಡಣೆಯಾಗಿರುವ ಈ ರಸ್ತೆಯಲ್ಲಿ ಪ್ರತಿದಿನ ಸಾವಿರಕ್ಕೂ ಅಧಿಕ ವಾಹನಗಳು ಸಂಚರಿಸುತ್ತವೆ.

ಮೊದಲು ಸಿಂಗಲ್‌ ರೈಲ್ವೆಗಳ ಓಡಾಟವಿದ್ದಾಗ ಕೊಂಚ ವಾಹನ ದಟ್ಟಣೆ ಕಡಿಮೆಯಾಗುತ್ತಿತ್ತು. ಇದೀಗ ರೈಲ್ವೆ ಡಬ್ಲಿಂಗ್‌ ಆದ ಮೇಲೆ ರೈಲುಗಳ ಸಂಖ್ಯೆಯೂ ದ್ವಿಗುಣವಾಗಿದ್ದು, ಬೆಂಗಳೂರು-ಮುಂಬೈ, ಹುಬ್ಬಳ್ಳಿ-ಗೋವಾ ಹಾಗೂ ದಕ್ಷಿಣ ಭಾರತದಿಂದಉತ್ತರ ಭಾರತ ಮತ್ತು ಪಶ್ಚಿಮ ಭಾರತದ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರೈಲುಗಳ ಹೆದ್ದಾರಿ ಎಂಬಂತಾಗಿದ್ದು, ಪ್ರತಿ ರೈಲು ಸಂಚರಿಸುವಾಗಲು ರೈಲ್ವೆ ಲೆವೆಲ್‌ ಕ್ರಾಸಿಂಗ್‌ನಲ್ಲಿ ನೂರಾರು ವಾಹನಗಳು ಜಮಾವಣೆಯಾಗಿ ಸಾರ್ವಜನಿಕರು ಕಷ್ಟ ಅನುಭವಿಸುವಂತಾಗಿದೆ.

30 ಕುಟುಂಬ ಸ್ಥಳಾಂತರ
ಹಳಿಯಾಳ ರಸ್ತೆಯ ಅಕ್ಕಮಹಾದೇವಿ ಆಶ್ರಮ ಬಳಿ ಇರುವ ಗೌಳಿ ಮತ್ತು ಬಡ ಕೂಲಿ ಕಾರ್ಮಿಕರ 30ಕ್ಕೂ ಹೆಚ್ಚು ಗುಡಿಸಲು ಮತ್ತು ಮನೆಗಳನ್ನು ಸ್ಥಳಾಂತರಿಸುವ ಕೆಲಸ ಆಗಬೇಕಿದ್ದು, ಅದಕ್ಕಾಗಿ ಈ ಕುಟುಂಬಗಳಿಗೆ ರೈಲ್ವೆ ಇಲಾಖೆ ಶೀಘ್ರವೇ ನೋಟಿಸ್‌ ಜಾರಿಗೊಳಿಸಲಿದೆ. ರೈಲ್ವೆ ಇಲಾಖೆ ಜಾಗದಲ್ಲೇ ತಾತ್ಕಾಲಿಕ ಮನೆಗಳು, ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸವಾಗಿರುವ ಈ ಕುಟುಂಬಗಳನ್ನು ಸ್ಥಳಾಂತರಿಸಿದರೆ ಮಾತ್ರ ಇಲ್ಲಿ ಅಂಡರ್‌ಪಾಸ್‌ ಸಾಧ್ಯವಾಗಲಿದೆ.

ಅಂಡರ್‌ಪಾಸ್‌ಗೆ ಹಸಿರು ನಿಶಾನೆ
ಸದ್ಯ ಹಳಿಯಾಳ ರಸ್ತೆಯಲ್ಲಿನ ಲೆವೆಲ್‌ ಕ್ರಾಸಿಂಗ್‌ನಲ್ಲಿ ಅಂಡರ್‌ಪಾಸ್‌ ನಿರ್ಮಿಸಲು ಸಮೀಕ್ಷೆ ಕಾರ್ಯ ಮುಗಿದಿದ್ದು, ಇನ್ನು ಆರು ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎನ್ನುತ್ತಾರೆ ನೈಋತ್ಯ ರೈಲ್ವೆ ವಲಯ ಅಧಿಕಾರಿಗಳು. 15 ಕೋಟಿ ರೂ. ವೆಚ್ಚದಲ್ಲಿ ಅಂಡರ್‌ಪಾಸ್‌ ನಿರ್ಮಾಣವಾಗಲಿದೆ ಎನ್ನಲಾಗಿದೆ.

•2016 ರಲ್ಲೂ ತಪ್ಪಿತ್ತು ಲೆವೆಲ್‌ ಕ್ರಾಸಿಂಗ್‌ನಲ್ಲಿ ಅಪಘಾತ

•2019 ರಲ್ಲಿ ಮತ್ತೆ ಮರುಕಳಿದ ಲೆವೆಲ್‌ ಕ್ರಾಸಿಂಗ್‌ ನಿರ್ಲಕ್ಷ್ಯ

•ನಗರದ 4 ಲೆವೆಲ್‌ ಕ್ರಾಸಿಂಗ್‌ನಲ್ಲೂ ಕಟ್ಟೆಚ್ಚರ ವಹಿಸಿದ ನೈಋತ್ಯ ರೈಲ್ವೆ

•ಅಕ್ಕಮಹಾದೇವಿ ಆಶ್ರಮ ಬಳಿ ಅಂಡರ್‌ಪಾಸ್‌ಗೆ ಗ್ರೀನ್‌ಸಿಗ್ನಲ್‌

•ಸ್ಥಳಾಂತರವಾಗಬೇಕಿದೆ 30 ಬಡ ಕುಟುಂಬಗಳು

ಈ ರಸ್ತೆಯಲ್ಲಿ ಓಡಾಟ ಮಾಡುವವರಿಗೆ ನಿಜಕ್ಕೂ ಯಮಯಾತನೆ ಎನಿಸುತ್ತಿದೆ. ಪ್ರತಿ 15 ನಿಮಿಷಕ್ಕೊಂದರಂತೆ ರೈಲು ಓಡಾಡುತ್ತವೆ. ನಮ್ಮೂರುಗಳಿಗೆ ತೆರಳುವಾಗೊಮ್ಮೆ ರೈಲ್ವೆಗಾಗಿ 15 ನಿಮಿಷ ನಿಲ್ಲಲೇಬೇಕು. ಹೀಗಾಗಿ ಬೇಗ ಇಲ್ಲಿ ಅಂಡರ್‌ಪಾಸ್‌ ನಿರ್ಮಿಸಬೇಕು.
•ಶೇಖರ್‌ ನಾಯ್ಕರ್‌, ನಿಗದಿ ಗ್ರಾಮಸ್ಥ

ಧಾರವಾಡ-ಹಳಿಯಾಳ ರಸ್ತೆಯ ಗಣೇಶ ನಗರ ಬಳಿಯ ಲೆವೆಲ್‌ ಕ್ರಾಸಿಂಗ್‌ನಲ್ಲಿ ಅಂಡರ್‌ಪಾಸ್‌ ನಿರ್ಮಿಸಲು ಸಮೀಕ್ಷೆ ಕಾರ್ಯ ಮುಗಿದಿದೆ. ಇನ್ನು ಆರೇಳು ತಿಂಗಳಲ್ಲಿ ಕಾಮಗಾರಿ ಆರಂಭಿಸಿ ಮುಗಿಸಲು ಯೋಜಿಸಲಾಗಿದೆ. ಇದಕ್ಕೆ ಇಲಾಖೆ ಒಪ್ಪಿಗೆ ಸೂಚಿಸಿದ್ದು, ಟೆಂಡರ್‌ ಶೀಘ್ರವೇ ಟೆಂಡರ್‌ ಕರೆಯಲಾಗುವುದು.
•ರೈಲ್ವೆ ಇಲಾಖೆ ಅಧಿಕಾರಿ

•ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next