ಧಾರವಾಡ: ಜೀವನದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಮನೆಗೆ ಬರುವ ಧಾನ್ಯ ರೈತ ಬೆಳೆದಿದ್ದರಿಂದಲೇ ಎನ್ನುವುದನ್ನು ಮರೆಯಬಾರದು ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು. ನಗರದ ವೈ.ಬಿ. ಅಣ್ಣಿಗೇರಿ ವಿಜ್ಞಾನ ಹಾಗೂ ವಾಣಿಜ್ಯ ಪಿಯು ಮಹಾವಿದ್ಯಾಲಯದ ನೂತನ ಕಟ್ಟಡ ಉದ್ಘಾಟಿಸಿದ ಬಳಿಕ ಆರ್ಶೀವಚನ ನೀಡಿದ ಅವರು, ಈ ಸತ್ಯ ಅರಿತು ಮತ್ತೂಬ್ಬರ ಕಾರ್ಯವನ್ನು ಪ್ರಶಂಸೆ ಮಾಡುವ ಗುಣ ಬೆಳೆಸಿಕೊಳ್ಳಬೇಕು. ಅಂತಹ ಹೃದಯವಂತಿಕೆ ನಮ್ಮದಾಗಬೇಕು ಎಂದರು.
ಮಕ್ಕಳು ಗಿಡದ ಬೀಜವಿದ್ದಂತೆ. ಪ್ರಾರಂಭದ ಹಂತದಲ್ಲಿ ಅದರ ಪ್ರತಿಭೆ ತಿಳಿಯುವುದಿಲ್ಲ. ಆದರೆ, ಹಂತ ಹಂತವಾಗಿ ಬೀಜಕ್ಕೆ ನೀರುಣಿಸಿದಾಗ ಮುಂದೊಂದು ದಿನ ಅದು ಮಹಾನ್ ಪ್ರತಿಭೆಯಾಗಿ ಹೊರಹೊಮ್ಮುತ್ತದೆ. ಪ್ರಾರಂಭದ ದಿನಗಳಲ್ಲಿ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಏನು ಎನ್ನುವುದು ತಿಳಿಯುವುದಿಲ್ಲ. ಆದರೆ, ಅವರಲ್ಲಿರುವ ಪ್ರತಿಭೆಗೆ ತಕ್ಕಂತೆ ನಾವು ಸಹಕಾರ ನೀಡಿದರೆ ಮುಂದಿನ ದಿನಗಳಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದು ಹೇಳಿದರು.
ಪ್ರಸ್ತುತ ದಿನಗಳಲ್ಲಿ ಯುವ ಪೀಳಿಗೆಯ ಹೃದಯ ಬತ್ತುತ್ತಿದೆ. ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಬೇಕು. ಶಿಕ್ಷಕರು ಮಕ್ಕಳಲ್ಲಿ ಉತ್ತಮ ಹೃದಯವಂತಿಕೆ ಹೊಂದುವಂತೆ ಪ್ರೇರಣೆ ನೀಡಬೇಕು. ಆಗ ಅತ್ಯುದ್ಭುತ ಭಾರತ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ನಾಗೇಶ ಅಣ್ಣಿಗೇರಿ ಅವರು ಸಾಮಾನ್ಯ ವ್ಯಕ್ತಿಯಾಗಿ ಧಾರವಾಡಕ್ಕೆ ಕಾಲಿಟ್ಟು ಇಂದು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಇದಕ್ಕೆ ಅವರ ತಂದೆ-ತಾಯಿ ನೀಡಿದ ಸಂಸ್ಕೃತಿಯೇ ಕಾರಣ. ಅಣ್ಣಿಗೇರಿ ಅವರು ಉತ್ತಮ ರೀತಿಯ ಕಾಲೇಜು ಕಟ್ಟಿದ್ದು, ಇಲ್ಲಿಂದ ಶ್ರೇಷ್ಠ ವ್ಯಕ್ತಿಗಳು ಹೊರಹೊಮ್ಮಬೇಕು ಎಂದು ಆಶಿಸಿದರು. ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಉತ್ತಮ ಶಿಕ್ಷಣ ಸಂಸ್ಥೆ ಧಾರವಾಡಕ್ಕೆ ಬಂದಿದ್ದು ಸಂತಸ. ಮಕ್ಕಳಿಗೆ ವಿಜ್ಞಾನದ ಜೊತೆಗೆ ವೃತ್ತಿ ಕೌಶಲ ತರಬೇತಿಯನ್ನೂ ನೀಡುವ ಕೆಲಸವನ್ನು ಈ ಸಂಸ್ಥೆ ಮಾಡಲಿ ಎಂದು ಶುಭ ಹಾರೈಸಿದರು.
ಶಿಗ್ಗಾಂವ ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, 21ನೇ ಶತಮಾನ ಜ್ಞಾನ ಮತ್ತು ವಿಜ್ಞಾನ ಯುಗವಾಗಿದ್ದು, ನಮ್ಮ ದೇಶದ ವಿದ್ಯಾರ್ಥಿಗಳು ಬೇರೆ ದೇಶದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಉತ್ತಮವಾದ ತರಬೇತಿಯನ್ನು ಶಿಕ್ಷಣ ಸಂಸ್ಥೆಗಳು ನೀಡಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ನಾಗೇಶ ಅಣ್ಣಿಗೇರಿ ಮಾತನಾಡಿ, ಚಿಕ್ಕಂದಿನಿಂದಲೂ ಕಷ್ಟದ ಜೀವನದಲ್ಲಿಯೇ ಬೆಳೆದುಬಂದ ನಾನು ತಂದೆ-ತಾಯಿಗಳ ಆಶಯದಂತೆ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದ್ದೇನೆ. ಅಲ್ಲದೇ ತಂದೆಯ ಆಶಯದಂತೆ ಪ್ರತಿ ವರ್ಷ 10 ಜನ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದರ ಜೊತೆಗೆ ಉನ್ನತ ಶಿಕ್ಷಣಕ್ಕೂ ಸಮಸ್ಯೆ ಇದ್ದರೆ ಸಹಾಯ ಮಾಡುತ್ತ ಬರಲಾಗುತ್ತಿದೆ ಎಂದು ತಿಳಿಸಿದರು.
ಮಾಜಿ ಸಚಿವ ವಿನಯ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಇಚಲಕರಂಜಿಯ ಮಹೇಶಾನಂದ ಸ್ವಾಮೀಜಿ, ಚಂದ್ರಶೇಖರ ಶಿವಯೋಗಿ ಸ್ವಾಮೀಜಿ, ಶಾಸಕ ಗಣೇಶ ಹುಕ್ಕೇರಿ, ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಮಾಜಿ ಸಂಸದ ಮಂಜುನಾಥ ಕುನ್ನೂರ, ಮಾಜಿ ಶಾಸಕಿ ಸೀಮಾ ಮಸೂತಿ, ಶಂಕ್ರಣ್ಣ ಮುನವಳ್ಳಿ, ಗುರುರಾಜ ಹುಣಸಿಮರದ, ಪಾಲಿಕೆ ಸದಸ್ಯರಾದ ವಿಜಯಾನಂದ ಶೆಟ್ಟಿ, ಬಲರಾಮ ಕುಸುಗಲ್, ರಾಜಣ್ಣ ಕೊರವಿ, ಕೆಎಎಸ್ ಅಧಿಕಾರಿ ರವಿ ತಿರ್ಲಾಪುರ, ಯಲ್ಲಪ್ಪ ಅಣ್ಣೀಗೇರಿ ಇನ್ನಿತರರಿದ್ದರು.