Advertisement

ಲೋಕಸಭೆಯಲ್ಲಿ ಬಿಜೆಪಿಗೆ ದಕ್ಷಿಣವೇ ಮಗ್ಗಲು ಮುಳ್ಳು

11:44 AM Feb 01, 2019 | Team Udayavani |

ಧಾರವಾಡ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದಕ್ಷಿಣ ಭಾರತವೇ ಮಗ್ಗಲು ಮುಳ್ಳಾಗಲಿದೆ ಎಂದು ಗಾಂಧೀಜಿ ಮೊಮ್ಮಗ ರಾಜಮೋಹನ ಗಾಂಧಿ ಹೇಳಿದರು.

Advertisement

ನಗರದಲ್ಲಿ ದಕ್ಷಿಣಾಯಣ ಸಂಘಟನೆಯಿಂದ ಜರುಗಿದ ಸಂವಾದ ಕಾರ್ಯಕ್ರಮ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ಯ ಮರೆಮಾಚಿ ಸುಳ್ಳಿನ ಸಾಮ್ರಾಜ್ಯ ಕಟ್ಟುವ ಕೆಲಸವನ್ನು ಬಿಜೆಪಿ ಮಾಡುತ್ತಲೇ ಬಂದಿದೆ. ಪ್ರಜಾಪ್ರಭುತ್ವ ಮೇಲೆ ಹಲ್ಲೆ ಹಾಗೂ ಸಂವಿಧಾನ ವಿರೋಧಿ ನಡೆಗಳನ್ನು ಜನರು ಈಗಾಗಲೇ ಖಂಡಿಸಿ, ತಮ್ಮದೇ ರೀತಿಯಲ್ಲಿ ಪ್ರತಿಭಟಿಸಲು ಆರಂಭಿಸಿದ್ದಾರೆ. ಅದು ಲೋಕಸಭಾ ಚುನಾವಣೆಯಲ್ಲಿ ಪ್ರತಿಫಲಿಸಲಿದೆ. ದೇಶದಲ್ಲಿ ಕೋಮು ಭಾವನೆಗಳು ಎದ್ದಾಗ ಪಟ್ಟಭದ್ರ ಹಿತಾಸಕ್ತಿಗಳಿಗೆ ಜನರೇ ಪಾಠ ಕಲಿಸಿದ ಉದಾಹರಣೆಗಳು ಸಾಕಷ್ಟಿದ್ದು, ಅದರಂತೆ ದೇಶದ ಜನರೇ ತಕ್ಕ ಉತ್ತರ-ಪಾಠ ಕಲಿಸಲಿದ್ದಾರೆ ಎಂದರು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ದ್ವೇಷದ ಹಿಂದುತ್ವ ಬಿತ್ತುತ್ತಿದೆ. ಗುಜರಾತ್‌ ರಾಜ್ಯವನ್ನು ಹಿಂದೂ ರಾಷ್ಟ್ರದ ಮಾದರಿಯನ್ನಾಗಿ ಪರಿವರ್ತಿಸುವ ಪ್ರಯತ್ನದಲ್ಲಿದ್ದು, ಗುಜರಾತಿನ ಜನ ಎಂದಿಗೂ ಇದಕ್ಕೆ ಅವಕಾಶ ನೀಡಲ್ಲ. ಮಹಾತ್ಮಾ ಗಾಂಧಿಧೀಜಿ ಅವರು ನೈಜ ಹಿಂದುತ್ವವನ್ನು ಪ್ರತಿಪಾದಿಸಿದ್ದರು. ಆ ಹಿಂದುತ್ವ ಎಂದೂ ಈ ದೇಶದಲ್ಲಿ ದ್ವೇಷದ ಭಾವನೆ ಬಿತ್ತಿರಲಿಲ್ಲ. ಭಾರತಕ್ಕೆ ಗಾಂಧಿ ಕಂಡ ಹಿಂದುತ್ವ ಬೇಕಿದೆಯೇ ಹೊರತು ಬಿಜೆಪಿ ಬಯಸುವ ಹಿಂದುತ್ವ ಅಲ್ಲ ಎಂದರು.

ರಾಹುಲ್‌ ಗಾಂಧಿ ತಂದೆ ಮುಸ್ಲಿಂ ಎಂಬ ಅನಂತಕುಮಾರ ಹೆಗಡೆ ಹೇಳಿಕೆಯನ್ನು ಕರ್ನಾಟಕದ ಜನತೆ ಖಂಡಿಸಿ ಪ್ರತಿಭಟಿಸಬೇಕಿತ್ತು. ರಾಹುಲ್‌ ಗಾಂಧಿ ತಂದೆ ಒಬ್ಬ ಹಿಂದೂ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ದೇಶದ ಯಾರಿಗೂ ಮುಸ್ಲಿಂ ತಂದೆಯಾಗಬಾರದೇ? ಎಂದು ಪ್ರಶ್ನಿಸಿದರು.

ಮೋದಿಗೆ ಗೊತ್ತಿಲ್ಲ ಚರಕದ ಮಹತ್ವ: ದೇಶಕ್ಕೆ ಬರುವ ವಿದೇಶಿ ಗಣ್ಯರನ್ನು ಸಾಬರಮತಿ ಆಶ್ರಮಕ್ಕೆ ಕರೆ ತರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿರುವ ಚರಕ ಹಾಗೂ ಗಾಂಧೀಜಿಯ ಸರಳತೆ ಪ್ರತಿಪಾದಿಸುವ ಅನೇಕ ವಸ್ತುಗಳನ್ನು ತೋರಿಸುತ್ತಾರೆ. ಆದರೆ ದೇಶದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗೆ ಗಾಂಧೀಜಿ ನೆಲೆಯಲ್ಲಿನ ಪರಿಹಾರ ಬಳಸುವ ಬದಲು ಮೌನಕ್ಕೆ ಶರಣಾಗುತ್ತಾರೆ. ಇದು ಅವರ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದರು.

Advertisement

1947ರಲ್ಲಿ ದೇಶ ವಿಭಜನೆಯಾದಾಗ ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾಯಿತು. ಹಾಗೆ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಅನೇಕರು ಹೊರಟಿದ್ದರು. ಆಗ ಮಹಾತ್ಮಾ ಗಾಂಧೀಜಿ, ಜವಾಹರಲಾಲ ನೆಹರೂ, ಡಾ |ಬಿ.ಆರ್‌.ಅಂಬೇಡ್ಕರ್‌ ಹಾಗೂ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರು ಅದನ್ನು ವಿರೋಧಿಸಿದ್ದರು. ಜಾತ್ಯತೀತ ರಾಷ್ಟ್ರ ಕಟ್ಟುವುದು ಅವರೆಲ್ಲರ ಕನಸಾಗಿತ್ತು. ಭಾರತ ಹಿಂದೆ, ಇಂದು ಮತ್ತು ಮುಂದೆ ಜಾತ್ಯತೀತ ರಾಷ್ಟ್ರವಾಗಿಯೇ ಉಳಿಯಲಿದೆ ಎಂದು ಹೇಳಿದರು.

ದಕ್ಷಿಣಾಯಣ ಸಂಚಾಲಕ ಡಾ| ರಾಜೇಂದ್ರ ಚೆನ್ನಿ ಮಾತನಾಡಿ, ದೇಶದಲ್ಲಿ ವಿಚಾರವಾದಿಗಳ ಹತ್ಯೆಯಾದಾಗ ಪ್ರತಿರೋಧ ವ್ಯಕ್ತಪಡಿಸಿ ಪ್ರಶಸ್ತಿ ವಾಪಸಾತಿ ಆಂದೋಲನ ಮೂಲಕ ಹುಟ್ಟಿಕೊಂಡ ಸಾಂಸ್ಕೃತಿಕ ವೇದಿಕೆ ದಕ್ಷಿಣಾಯಣ ಇನ್ನಷ್ಟು ಪರಿಣಾಮಕಾರಿಯಾಗಿ ಜನರನ್ನು ತಲುಪುವ ಕೆಲಸ ಆರಂಭಿಸಲಿದೆ. ಇದಕ್ಕಾಗಿ ದೇಶದ ವಿವಿಧ ರಾಜ್ಯಗಳ 70 ಸದಸ್ಯರ ತಂಡ ಸುದೀರ್ಘ‌ ಚರ್ಚೆ ಮೂಲಕ ಹೋರಾಟದ ರೂಪುರೇಷೆ ಸಿದ್ಧಗೊಳಿಸಿದೆ ಎಂದರು.

ಈ ಹೋರಾಟವು ಹೊಸದಾಗಿ ಹಲವು ರಾಜ್ಯಗಳಲ್ಲಿ ತನ್ನ ಕಾರ್ಯ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಒಕ್ಕೂಟ ವ್ಯವಸ್ಥೆಯ ಆಶಯವನ್ನು ಒಪ್ಪಿಕೊಂಡಿದೆ. ಆಯಾ ರಾಜ್ಯಗಳ ಸಂಘಟನೆಗಳು ತಮ್ಮದೇ ಆದ ಕಾರ್ಯಕ್ರಮ ರೂಪಿಸಲು ಸ್ವತಂತ್ರವಾಗಿವೆ. ಹಾಗೆಯೇ ಇತರ ಪ್ರಗತಿಪರ ಸಂಘಟನೆಗಳ ಕಾರ್ಯಕ್ರಮಗಳಲ್ಲೂ ದಕ್ಷಿಣಾಯಣ ಪಾಲ್ಗೊಳ್ಳಲು ನಿರ್ಧರಿಸಿದೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವ ಮೇಲೆ ಹಲ್ಲೆ ನಡೆದಾಗ ಅದನ್ನು ಪ್ರತಿಭಟಿಸಿ, ದಾಳಿಗೆ ಒಳಗಾದವರನ್ನು ದಕ್ಷಿಣಾಯಣ ಎಂದಿಗೂ ಕೈ ಬಿಡಲ್ಲ. ಕಳೆದ ಮೂರು ತಿಂಗಳಲ್ಲಿ ಪ್ರಜಾಪ್ರಭುತ್ವ ಮೇಲೆ ನಿರಂತರ ಹಲ್ಲೆಗಳು ನಡೆದಿವೆ. ಆದರೆ ನಮ್ಮ ಜಾಗೃತ ಸಮಾಜ ಸದಾ ಇವುಗಳ ವಿರುದ್ಧ ಧ್ವನಿ ಎತ್ತಿದ್ದು, ಪರಿವರ್ತನೆಗೆ ಈಗ ಕಾಲ ಪಕ್ವವಾಗಿದೆ.
 • ಜಿ.ಎನ್‌. ದೇವಿ, ಸಾಹಿತಿ

ಗಾಂಧಿಗೆ ಮತ್ತೆ ಗುಂಡಿಕ್ಕುವ ಪ್ರವೃತ್ತಿ ಕಂಡು ಅಚ್ಚರಿ ಪಡಬೇಕಿಲ್ಲ. ಈ ಘಟನೆಗೆ ದೇಶದ ಜನತೆ ನೋವು ಪಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡದೇ ಮೌನವಾಗಿರುವುದೇಕೆ? ಈ ಬಗ್ಗೆ ಅರ್ಥ ಗೊತ್ತಿರುವ ಬುದ್ಧಿವಂತ ಜನತೆ ತಕ್ಕ ಉತ್ತರ ನೀಡುತ್ತಾರೆ.
 • ರಾಜಮೋಹನ ಗಾಂಧಿ, ಗಾಂಧೀಜಿ ಮೊಮ್ಮಗ

Advertisement

Udayavani is now on Telegram. Click here to join our channel and stay updated with the latest news.

Next