ಧಾರವಾಡ: ಕೊನೆಗೆ ಧಾರವಾಡಕ್ಕೆ ವರ್ಷದಲ್ಲಿ ದೈತ್ಯ ಮಳೆಯೊಂದು ಸುರಿದಂತಾಗಿದ್ದು, ಸೋಮವಾರ ಸುರಿದ ಮಳೆಯ ರಭಸಕ್ಕೆ ಇಡೀ ನಗರವೇ ನೀರಿನಲ್ಲಿ ಮಿಂದೆದ್ದಿತು. ಮಧ್ಯಾಹ್ನ 3:00ಗಂಟೆಗೆ ಆರಂಭಗೊಂಡ ರಭಸದ ಮಳೆ ಸತತ ಎರಡು ತಾಸು ಧೋ ಎಂದು ಸರಿಯಿತು.
ಮಳೆಯ ರಭಸಕ್ಕೆ ನಗರ ಪ್ರಮುಖ ರಸ್ತೆಗಳು, ಬೀದಿಗಳು ಮತ್ತು ವೃತ್ತಗಳು ಜಲಾವೃತಗೊಂಡಿದ್ದವು. ಧಾರವಾಡದ ಪ್ರಧಾನ ವೃತ್ತವಾದ ಜ್ಯುಬಿಲಿ ವೃತ್ತದಲ್ಲಿ ಮಳೆಯ ನೀರು ಮಳೆ ನಿಂತಮೇಲೂ ಅರ್ಧಗಂಟೆ ವರೆಗೂ ಹರೆಯುತ್ತಲೇ ಇತ್ತು. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.
ಇನ್ನು ಹುಬ್ಬಳ್ಳಿ-ಧಾರವಾಡ ರಸ್ತೆಯ ಶಂಕರ ಪ್ಲಾಜಾ, ಕೋರ್ಟ್ ವೃತ್ತ, ಲಕ್ಷ್ಮೀ ಟಾಕೀಸ್ ವೃತ್ತ, ದೈವಜ್ಞ ಕಲ್ಯಾಣ ಮಂಟಪ ಮತ್ತು ಟೋಲ್‌ನಾಕಾ ಬಳಿ ಮಳೆಯ ನೀರು ರಸ್ತೆಯ ತುಂಬ ಹಿರಿಯುವ ದೃಶ್ಯ ಕಂಡು ಬಂದಿತು. ಇನ್ನು ಚೆನ್ನಬಸವೇಶ್ವರ ನಗರದಲ್ಲಿನ ಮನೆಗಳಿಗೆ ನೀರು ನುಗ್ಗಿದ್ದರೆ, ಕೊಪ್ಪದ ಕೆರೆಯ ಬಳಿ ಇರುವ ಮಹಾತ್ಮ ಬಸವೇಶ್ವರ ನಗರದಲ್ಲಿನ ಶಿವಾಲಯವು ಮಳೆಯ ನೀರಿನಿಂದ ಆವೃತವಾಗಿದ್ದ ದೃಶ್ಯ ಕಂಡು ಬಂದಿತು.
ಮುರುಘಾಮಠದ ಪ್ರದೇಶದಲ್ಲಿ ಮಳೆಯ ನೀರು 2 ಅಡಿಗಳಷ್ಟು ಎತ್ತರಕ್ಕೆ ಹರಿದಿದ್ದರಿಂದ ಅಲ್ಲಿನ ನಿವಾಸಿಗಳು ಸ್ವಲ್ಪ ಹೊತ್ತು ಆತಂಕಕ್ಕೆ ಒಳಗಾಗಿದ್ದರು. ಇನ್ನು ಸಿಮೆಂಟ್ ರಸ್ತೆ ನಿರ್ಮಾಣ ಮತ್ತು ಒಳಚರಂಡಿ ನಿರ್ಮಾಣ ಕಾಮಾಗರಿಗಳು ನಡೆದ ಭೂಸಪ್ಪ ಚೌಕ್, ರವಿವಾರ ಪೇಟೆಯಲ್ಲಿ ಮಳೆಯ ನೀರು ರಸ್ತೆಯನ್ನು ಬಿಟ್ಟು ಸಂದಿಗೊಂದಿಗಳಲ್ಲಿ ನುಗ್ಗಿದ್ದರಿಂದ ಅಕ್ಕ ಪಕ್ಕದ ನಿವಾಸಿಗಳು ಪರದಾಡುವಂತಾಯಿತು.
ಜನ್ನತ್ ನಗರ, ತೇಜಸ್ವಿನಗರ, ಶ್ರೀರಾಮ ನಗರ ಸೇರಿದಂತೆ ಮದಾರ ಮಡ್ಡಿ ಮತ್ತು ಮಾಳಾಪುರದ ತಗ್ಗು ಪ್ರದೇಶಗಳಿಗೆ ಮಳೆಯ ನೀರು ನುಗ್ಗಿತ್ತು. ಸಾರಿಗೆ ಬಸ್ ಡಿಪೋ ಹತ್ತಿರದ ಬಳಿ ಹಿರಿಯುವ ರಾಜ ಕಾಲುವೆ ತುಂಬಿ ಹರೆದ ದೃಶ್ಯ ಕಂಡು ಬಂದಿತು. ಇನ್ನು ಸಾಧನಕೇರಿ, ಪೊಲೀಸ್ ಹೆಡ್ ಕ್ವಾರ್ಟರ್ಸ್, ಹೊಸ ಬಸ್ ನಿಲ್ದಾಣದ ಹಿಂಭಾಗ ಸೇರಿದಂತೆ ಅನೇಕ ಪ್ರದೇಶಗಳಲ್ಲೂ ವರುಣ ರುದ್ರಾವತಾರದ ಕುರುಹುಗಳಾಗಿ ಚರಂಡಿಗಳು ಎಲ್ಲೆಂದರಲ್ಲಿ ನುಗ್ಗಿ ಹಿರಿಯುತ್ತಿದ್ದ ದೃಶ್ಯ ಕಂಡು ಬಂದಿತು.