ಮೈಸೂರು: ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಮರಣದಿಂದ ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯಕ್ಕೆ ಅಪಾರ ನಷ್ಟವಾಗಿದೆ ಎಂದು ಕಾಂಗ್ರೆಸ್ ಮುಖಂಡ ಡಾ.ಯತೀಂದ್ರ ಹೇಳಿದರು. ಚಾಮುಂಡೇಶ್ವರಿ ಕ್ಷೇತ್ರದ ಇಲವಾಲದಲ್ಲಿ ಗುರುವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಧರಂಸಿಂಗ್‌ರ ಭಾವಚಿತ್ರಕ್ಕೆ ಪುಷ್ಪಾ ನಮನ ಸಲ್ಲಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಮುತ್ಸದ್ಧಿ, ಸಜ್ಜನ, ಹಿರಿಯ ರಾಜಕಾರಣಿ, ದಿವಂಗತ ಧರಂಸಿಂಗ್ 8 ಬಾರಿ ಶಾಸಕರಾಗಿ, ವಿವಿಧ ಇಲಾಖೆಗಳ ಮಂತ್ರಿ, ಮುಖ್ಯಮಂತ್ರಿ, ಲೋಕಸಭಾ ಸದಸ್ಯರಾಗಿ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಂತೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.
ವಿಶೇಷವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿಗೆ ವಿಶೇಷ ಸ್ಥಾನಮಾನ ಕೊಡಿಸುವಲ್ಲಿ ಅವರ ಪಾತ್ರ ಬಹಳಮುಖ್ಯವಾದುದು. ಅಲ್ಪ$ಸಂಖ್ಯಾತ ಜನ ಸಮುದಾಯದಿಂದ ಬಂದು ಬಹುಸಂಖ್ಯಾತ ಜನರ ವಿಶ್ವಾಸ ಗಳಿಸಿ ಜಾತ್ಯತೀತ ನಾಯಕರಾಗಿ ಬೆಳೆದು ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದು ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಿದ ಮಹಾನ್ ನಾಯಕರಾಗಿದ್ದರು ಎಂದು ನೆನೆದರು.
ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ ಮಾತನಾಡಿ, ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದ 20 ತಿಂಗಳು ಕರ್ನಾಟಕದ ಎಲ್ಲಾ ವರ್ಗದ ಜನರ ಹಿತಕಾಯುವ ನಿಟ್ಟಿನಲ್ಲಿ ಕೆಲಸ ಮಾಡಿದ್ದರು ಎಂದು ಸ್ಮರಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್ ಮಾತನಾಡಿ, ಧರಂಸಿಂಗ್ ಮರಣದ ಹಿನ್ನೆಲೆ ಕೆಪಿಸಿಸಿ ಆದೇಶದ ಮೇರೆಗೆ ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಶ್ರದ್ಧಾಂಜಲಿ ಸಭೆ ನಡೆಸಲು ಸೂಚಿಸಲಾಗಿದೆ ಎಂದರು.
ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್, ಜಿಪಂ ಸದಸ್ಯರಾದ ಅರುಣ್‌ಕುಮಾರ್, ರಾಕೇಶ್ ಪಾಪಣ್ಣ, ಮಾಜಿ ಸದಸ್ಯರಾದ ಲಾರಿಸ್ವಾಮಿ, ಕಾಂಗ್ರೆಸ್ ಸೇವಾದಳದ ಮಾಜಿ ಅಧ್ಯಕ್ಷ ಜಯರಾಮೇಗೌಡ, ತಾಪಂ ಸದಸ್ಯರಾದ ಸಿದ್ದರಾಮೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮಾಶಂಕರ್ ಇತರರು ಇದ್ದರು.