Advertisement

ಗ್ರಾಮೀಣ ಬದುಕು ಸುಧಾರಿಸಿದ ಧರ್ಮಸ್ಥಳ ಸಂಸ್ಥೆ; ಪಾಟೀಲ ರೇವೂರ

01:41 PM Oct 10, 2022 | Team Udayavani |

ಕಲಬುರಗಿ: ಗ್ರಾಮೀಣ ಜನರ ಬದುಕಿನ ಸುಧಾರಣೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಪಾತ್ರ ದೊಡ್ಡದು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ ಡಿಬಿ) ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹೇಳಿದರು.

Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿಯ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಹಯೋಗದಲ್ಲಿ ರವಿವಾರ ನಗರದಲ್ಲಿ ಆಯೋಜಿಸಿದ್ದ “ಗಾಂಧಿ ಸ್ಮರಣೆ ಹಾಗೂ ದುಶ್ಚಟಗಳ ವಿರುದ್ಧದ ಜಾಗೃತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಸಂಸ್ಥೆ ನಿರಂತರವಾಗಿ ಸ್ವ-ಸಹಾಯ ಸಂಘಗಳ ಮೂಲಕ ಗ್ರಾಮೀಣ ಮಹಿಳೆಯರ ಬದುಕಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಆರ್ಥಿಕ ನೆರವಿನ ಮೂಲಕ ಸ್ವಾವಲಂಬನೆಯ ದಾರಿ ತೋರಿಸುತ್ತಿದೆ ಎಂದರು. ಜಿಲ್ಲಾ ಸಹಕಾರಿ ಬ್ಯಾಂಕ್‌ ಮೂಲಕ ಜಿಲ್ಲೆಯ ಸ್ವ-ಸಹಾಯ ಸಂಘಗಳಿಗೆ ತಲಾ ಒಂದು ಲಕ್ಷ ರೂ. ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಅದರ ಬಡ್ಡಿಯನ್ನು ಸರ್ಕಾರ ಪಾವತಿಸುತ್ತಿದೆ. ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ|ವೀರೇಂದ್ರ ಹೆಗ್ಗಡೆ ಅವರು ರಾಜ್ಯಸಭಾ ಸದಸ್ಯರಾದ ಕಾರಣ ನಾಡಿನ ಜನತೆಗೆ ಸಂತಸವಾಗಿದೆ. ಜನಪರ ಕೆಲಸ ಮಾಡಲು ಅವರಿಗೆ ಇನ್ನೂ ಶಕ್ತಿ ದೊರೆತಿದೆ ಎಂದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಪ್ರವೀಣ್‌ ಮಾತನಾಡಿ, ಗಾಂಧೀಜಿಯವರ 18 ರಚನಾತ್ಮಕ ಕಾರ್ಯಕ್ರಮಗಳಲ್ಲಿ ಮಾದಕ ವಸ್ತು ಹಾಗೂ ಮದ್ಯ ವ್ಯಸನದ ನಿರ್ಮೂಲನೆಯೂ ಒಂದು. ಈಗಿನ ದಿನಮಾನಗಳಲ್ಲಿ ಹಸಿವಿನಿಂದ ಸಾಯುವವರಿಗಿಂತ ವ್ಯವಸನದಿಂದ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಈ ಕುರಿತು ಅರಿವು ಮೂಡಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು. ಇಂತಹ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ರಚಿಸಲಾಗಿದೆ. ಇದಕ್ಕೆ ಈಗಾಗಲೇ 10ಸಾವಿರ ಜನ ಸದಸ್ಯರಾಗಿದ್ದಾರೆ ಎಂದು ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ ಸುವರ್ಣ, ಜನಜಾಗೃತಿ ವೇದಿಕೆ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ರಾಜೇಶ ಕೆ., ಸುಭಾಷ ಮಹಾರಾಜ್‌, ಪೊಲೀಸ್‌ ಕಾನ್‌ಸ್ಟೆàಬಲ್‌ ಲಲಿತಾ ಹಾಗೂ ಸ್ವ-ಸಹಾಯ ಸಂಘಗಳ ಸದಸ್ಯರು ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ದುರ್ಗೆಯರ ವೇಷ ಧರಿಸಿದ್ದ ಮಹಿಳೆಯರು, ಮಕ್ಕಳು ಗಮನ ಸೆಳೆದರು.

Advertisement

“ಕೊಡು ತಾಯಿ ವರವ ಕುಡುಕನಲ್ಲದ ಗಂಡನ’, “ಪಾನ ಮುಕ್ತ ಸಮಾಜ ನಮ್ಮೆಲ್ಲರ ಹೊಣೆ’ ಎನ್ನುವ ವಿವಿಧ ಘೋಷಣೆಗಳನ್ನು ಮೆರವಣಿಗೆಯಲ್ಲಿ ಕೂಗಲಾಯಿತು. ಇದೇ ವೇಳೆ ಮಾದಕ ವಸ್ತು ಹಾಗೂ ವ್ಯಸನದ ದುಷ್ಪರಿಣಾಮಗಳು ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next