ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಜಾತಶತ್ರು ಎಂದೇ ಖ್ಯಾತಿ ಪಡೆದಿದ್ದ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ಅಕಾಲಿಕ ನಿಧನ ಕಾಂಗ್ರೆಸ್‌ಗೆ ತುಂಬಲಾರದ ನಷ್ಟವಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಭಾರತಯಾತ್ರಾ ಕೇಂದ್ರ ಹಾಗೂ ಬಿಬಿಎಂಪಿ ವತಿಯಿಂದ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ಚಿಂತನೆ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎನ್.ಧರಂಸಿಂಗ್ ಅವರಿಗೆ ಗೌರವ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ಅವರು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ಅತ್ಯಂತ ಸರಳ ಜೀವಿಯಾಗಿದ್ದರು. ರಾಜಕಾರಣದಲ್ಲಿ ಅಜಾತ ಶತ್ರುವೆಂದು ಹೆಸರು ಗಳಿಸಿದ್ದರು. ತಮ್ಮ ಖಾಸಗಿ ಹಾಗೂ ರಾಜಕೀಯ ಜೀವನದಲ್ಲಿ ಯಾರೊಂದಿಗೂ ವೈರತ್ವ ಕಟ್ಟಿಕೊಂಡವರಲ್ಲ ಎಂದರು.
ಧರಂಸಿಂಗ್ ಅವರು ಭಾಗವಹಿಸುವ ಅನೇಕ ಕಾರ್ಯಕ್ರಮಗಳು ನಗೆಕೂಟವಾಗಿ ಪರಿವರ್ತನೆಯಾಗುತ್ತಿತ್ತು. ಹಾಸ್ಯ ಪ್ರಜ್ಞೆಯನ್ನು ಜೀವದಲ್ಲಿ ಅಳವಡಿಸಿಕೊಂಡಿದ್ದರು. ಅಂತಹ ಸಹೃದಯ ರಾಜಕಾರಣಿ ನಮ್ಮನ್ನು ಹಗಲಿರುವುದು ರಾಜ್ಯ ರಾಜಕಾರಣಕ್ಕೆ ಹಾಗೂ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ನುಡಿ ನಮನ ಸಲ್ಲಿಸಿದರು.
ಪಶುಸಂಗೋಪನಾ ಸಚಿವ ಎ.ಮಂಜು ಮಾತನಾಡಿ, ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರು ಹಲವು ಕಿರಿಯ ರಾಜಕಾರಣಿಗಳನ್ನು ಬೆಳೆಸುವಲ್ಲಿ ಉತ್ಸುಕರಾಗಿದ್ದರು ಹಾಗೂ ಅನೇಕರನ್ನು ಬೆಳೆಸಿದ್ದಾರೆ. ಸಾಮಾನ್ಯ ವ್ಯಕ್ತಿಯನ್ನು ಯಾವುದೇ ಅಹಂ ಭಾವವಿಲ್ಲದೇ ಮಾತನಾಡಿಸುತ್ತಿದ್ದರು. ಅವರ ವ್ಯಕ್ತಿತ್ವ ಜನಪ್ರತಿನಿಧಿಗಳಿಗೆ ಆದರ್ಶ ಎಂದರು.
ರಂಗಕರ್ಮಿ ಕೆ.ವಿ.ನಾಗರಾಜ್, ಕನ್ನಡಪರ ಚಿಂತಕರಾದ ರಾ.ನಂ.ಚಂದ್ರಶೇಖರ್, ಸಿದ್ದಯ್ಯ ಮೊದಲಾದವರು ಉಪಸ್ಥಿತರಿದ್ದರು.