Advertisement

ಚಿಂಚೋಳಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಧರಂ

01:30 PM Jul 28, 2017 | |

ಚಿಂಚೋಳಿ: ಮಾಜಿ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್‌ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಚಿಂಚೋಳಿ ತಾಲೂಕಿಗೆ ಅನೇಕ ಅನುಕೂಲ ಮಾಡಿಕೊಟ್ಟಿದ್ದಾರೆ. ಲೋಕೋಪಯೋಗಿ ಖಾತೆ ಸಚಿವರಾಗಿದ್ದಾಗ ತಾಲೂಕಿನ ಕರಚಖೇಡ ಮತ್ತು ಚತ್ರಸಾಲ ಗ್ರಾಮಗಳ ಮಧ್ಯೆ ಹರಿಯುವ
ಮುಲ್ಲಾಮಾರಿ ನದಿಗೆ 1.10 ಕೋಟಿ ರೂ. ವೆಚ್ಚದಲ್ಲಿ ಸೇತುವೆ ಮಂಜೂರು ಮಾಡಿ ಜನರಿಗೆ ಸಾರಿಗೆ ಸಂಪರ್ಕ ವ್ಯವಸ್ಥೆಗೊಳಿಸಿದ್ದರು. ಅಲ್ಲದೇ ಕುಂಚಾವರಂ ಗಡಿಪ್ರದೇಶದಲ್ಲಿ ವಂಟಿಚಿಂತಾ ತಾಂಡಾದಲ್ಲಿ ಆಶ್ರಮ ಶಾಲೆ ಹಾಗೂ ಅಂತಾವರಂ ಗ್ರಾಮಕ್ಕೆ ಸಣ್ಣ ನೀರಾವರಿ ಕೆರೆ  
ಮಂಜೂರಾತಿಗೊಳಿಸಿದ್ದಾರೆ . ಗಡಿಪ್ರದೇಶದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ. ಗೃಹ ಖಾತೆ ಸಚಿವರಾಗಿದ್ದಾಗ ಮಿರಿಯಾಣ ಗ್ರಾಮದಲ್ಲಿ ಹೊಸದಾಗಿ ಪೊಲೀಸ್‌ ಠಾಣೆ ಮತ್ತು ಕುಂಚಾವರಂ ಗ್ರಾಮದಲ್ಲಿ ಪೊಲೀಸ್‌ ಠಾಣೆ ನವೀಕರಿಸಲು ಅನುದಾನ ನೀಡಿದ್ದರು.

Advertisement

ಪೋಲಕಪಳ್ಳಿಯಲ್ಲಿ ಆಹಾರ ಧಾನ್ಯ ಸಂಗ್ರಹಣೆಗಾಗಿ 5 ಲಕ್ಷ ರೂ. ವೆಚ್ಚದಲಿ ಗೋದಾಮ ನಿರ್ಮಿಸಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದರು. 1989ರಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ಅವರು ತಾಲೂಕಿಗೆ ಆಗಮಿಸಿದ ಪಾಂಚಜನ್ಯ ಯಾತ್ರೆಯಲ್ಲಿ ಧರ್ಮಸಿಂಗ್‌ ಅವರು ಭಾಗವಹಿಸಿ ಪ್ರಚಾರ ಮಾಡಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಕೈಲಾಶನಾಥ ಪಾಟೀಲ ಅವರು ಜಯ ಗಳಿಸಲು ಸಾಧ್ಯವಾಯಿತು.

ಬೀದರ ಲೋಕಸಬಾ ಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆಯಾದ ನಂತರ ಮಿರಿಯಾಣ-ಚಿಂಚೋಳಿ ರಸ್ತೆ ಸುಧಾರಣೆಗೆ ಕೇಂದ್ರ ಸರಕಾರದಿಂದ 21 ಕೋಟಿ ರೂ. ಮಂಜೂರು ಮಾಡಿಸಿದ್ದರು. ಪಟ್ಟಣದ ವೀರೇಂದ್ರ ಪಾಟೀಲ ಪಬ್ಲಿಕ್‌ ಶಾಲೆಗೆ ಭೇಟಿ ನೀಡಿ ಶೈಕ್ಷಣಿಕ ಪ್ರಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ತಾಲೂಕಿಗೆ ಧರ್ಮಸಿಂಗ್‌ ಅವರ ಕೊಡುಗೆ ಅಪಾರ ಮತ್ತು ಕಾಂಗ್ರೆಸ ಕಾರ್ಯಕರ್ತರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು. ಅವರ ನಿಧನಕ್ಕೆ ತಾಲೂಕಿನ ಕಾರ್ಯಕರ್ತರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. 

ಸಂತಾಪ: ಮಾಜಿ ಮುಖ್ಯಮಂತ್ರಿ ಎನ್‌. ಧರ್ಮಸಿಂಗ್‌ ಅವರ ನಿಧನಕ್ಕೆ ಕಾಂಗ್ರೆಸ್‌ ಪಕ್ಷದ ಅನೇಕ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಶಾಸಕರ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ದಿ| ಎನ್‌. ಧರ್ಮಸಿಂಗ್‌ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. 

ಜಿಪಂ ಸದಸ್ಯ ಗೌತಮ ಪಾಟೀಲ, ಮುಖಂಡರಾದ ಗೋಪಾಲರಾವ ಕಟ್ಟಿಮನಿ, ಕೆ.ಎಂ. ಬಾರಿ, ಆರ್‌. ಗಣಪತರಾವ, ಲಕ್ಷ್ಮಣ ಆವಂಟಿ, ಅಮರ ಲೊಡನೊರ, ಶಿವನಾಗಯ್ಯ ಸ್ವಾಮಿ, ಉಮಾ ಪಾಟೀಲ, ನರಸಪ್ಪ ಕಿವಣೋರ, ಜಗನ್ನಾಥ ಕಟ್ಟಿ, ಅಯ್ಯೂಬ್‌ ಖಾನ್‌, ಬಸವಣ್ಣ ಪಾಟೀಲ, ಸದ್ದಾಂ ಹುಸೇನ್‌, ಸಂಗಯ್ಯ ಸ್ವಾಮಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next