Advertisement

Kaiva ಅಮರಪ್ರೇಮಿಯ ರಕ್ತಚರಿತ್ರೆ; ಬಜಾರಿಗೆ ಬಂತು ಧನ್ವೀರ್ ಚಿತ್ರ

11:03 AM Dec 08, 2023 | |

“ಕೈವ’- ಆರಂಭದಿಂದಲೂ ಸದ್ದು ಮಾಡುತ್ತಲೇ ಬಂದ ಚಿತ್ರ. ಕ್ಲಾಸ್‌ ಸಿನಿಮಾಗಳನ್ನು ಮಾಡುತ್ತಾ ಬಂದಿರುವ ಜಯತೀರ್ಥ ಮೊದಲ ಬಾರಿಗೆ ಔಟ್‌ ಅಂಡ್‌ ಔಟ್‌ ಮಾಸ್‌ ಕಂಟೆಂಟ್‌ ನೊಂದಿಗೆ ನಿರ್ದೇಶಿಸಿರುವ ಚಿತ್ರವಿದು. ಈ ಚಿತ್ರದಲ್ಲಿ ಧನ್ವೀರ್‌ ನಾಯಕರಾಗಿ ನಟಿಸಿದ್ದು, ಅವರ ರೆಟ್ರೋ ಲುಕ್‌ ಗಮನ ಸೆಳೆಯುತ್ತಿದೆ. ಇಂದು ಬಿಡುಗಡೆಯಾಗುತ್ತಿರುವ ಈ ಚಿತ್ರದ ಮೇಲೆ ಧನ್ವೀರ್‌ ಭರ್ಜರಿ ನಿರೀಕ್ಷೆ ಇಟ್ಟಿದ್ದು, ಆ ಚಿತ್ರದ ಕುರಿತಾದ ಒಂದಷ್ಟು ಪ್ರಶ್ನೆಗಳಿಗೆ ಉತ್ತರವಾಗಿದ್ದಾರೆ.

Advertisement

ನಿಮ್ಮ ಮೂರನೇ ಸಿನಿಮಾಕೈವಬಿಡುಗಡೆಯಾಗುತ್ತಿದೆ. ಸಂದರ್ಭ ಹೇಗಿದೆ?

ಎಷ್ಟೇ ಸಿನಿಮಾ ಮಾಡಿದ ನಟನಿಗಾದರೂ ತನ್ನ ಹೊಸ ಸಿನಿಮಾ ಬಿಡುಗಡೆ ಸಮಯದಲ್ಲಿ ಸಣ್ಣ ಒಂದು ಭಯ, ಜನ ಹೇಗೆ ಸ್ವೀಕರಿಸುತ್ತಾರೆ ಎಂಬ ಕಾತರ ಇದ್ದೇ ಇರುತ್ತದೆ. ನನಗೂ ಈಗ ಅದೇ ಫೀಲಿಂಗ್‌ ಇದೆ. ಈಗಾಗಲೇ ಚಿತ್ರದ ಟೀಸರ್‌, ಟ್ರೇಲರ್‌, ಹಾಡು ಹಿಟ್‌ ಆಗಿದೆ. ಹಾಗಾಗಿ, ಪ್ರೇಕ್ಷಕರು ಸಿನಿಮಾವನ್ನು ತುಂಬಾ ಖುಷಿಯಿಂದ ಸ್ವೀಕರಿಸುತ್ತಾರೆ ಎಂಬ ವಿಶ್ವಾಸವಿದೆ.

ಏನಿದುಕೈವ‘?

ಒಂದೇ ಮಾತಲ್ಲಿ ಹೇಳುವುದಾದರೆ “ಕೈವ’ ಒಂದು ಲವ್‌ಸ್ಟೋರಿ. ಹಾಗಂತ ಕಥೆ ಅಷ್ಟಕ್ಕೆ ಸೀಮಿತವಾಗಿಲ್ಲ, ಇಲ್ಲೊಂದು ರಕ್ತ ಸಿಕ್ತ ಅಧ್ಯಾಯವೂ ತೆರೆದುಕೊಳ್ಳುತ್ತದೆ. ಅದಕ್ಕೊಂದು ಗಟ್ಟಿ ಕಾರಣವಿದೆ. ಅದನ್ನು ಸಿನಿಮಾದಲ್ಲೇ ನೋಡಬೇಕು.

Advertisement

ಕೈವನೈಜ ಘಟನೆಯಾಧಾರಿತ ಸಿನಿಮಾ ಅಂತಾರೆ?

ಹೌದು, ನಮ್ಮ ನಿರ್ದೇಶಕ ಜಯತೀರ್ಥ ಅವರು ನೈಜ ಘಟನೆಯಾಧರಿಸಿ ಈ ಸಿನಿಮಾ ಮಾಡಿದ್ದಾರೆ. 80ರ ದಶಕದಲ್ಲಿ ನಡೆದ ಒಂದಷ್ಟು ನೈಜ ಅಂಶಗಳು ಈ ಸಿನಿಮಾದಲ್ಲಿವೆ. ಮೂಲ ಅಂಶವನ್ನಿಟ್ಟುಕೊಂಡು ಅದಕ್ಕೆ ಸಿನಿಮಾ ಟಚ್‌ ಕೊಟ್ಟಿದ್ದಾರೆ.

ನಿಮ್ಮ ಪಾತ್ರದ ಬಗ್ಗೆ ಹೇಳಿ?

ನನ್ನದು ತುಂಬಾ ಮುಗ್ಧ ಹುಡುಗನ ಪಾತ್ರ. ಹಾಗಂತ ಸಿನಿಮಾದುದ್ದಕ್ಕೂ ಅದೇ ಪಾತ್ರ ಸಾಗಿ ಬರುವುದಿಲ್ಲ. ಒಬ್ಬ ಮುಗ್ಧ ಹುಡುಗನ ತಾಳ್ಮೆಯ ಕಟ್ಟೆ ಹೊಡೆದಾಗ ಏನಾಗುತ್ತದೆ ಎಂಬುದು ಹೈಲೈಟ್‌. ಒಬ್ಬ ಪ್ರೇಮಿ ತನ್ನ ಪ್ರೀತಿಗಾಗಿ ಏನೆಲ್ಲಾ ಮಾಡುತ್ತಾನೆ ಎಂಬುದು ನನ್ನ ಪಾತ್ರದ ಹೈಲೈಟ್‌.

ರೆಟ್ರೋ ಲುಕ್‌, ಪಾತ್ರ ಸವಾಲೆನಿಸಿತೇ?

ಖಂಡಿತಾ ಇದು ಸವಾಲಿನ ಪಾತ್ರ. ಆದರೆ, ನಿರ್ದೇಶಕರು ಈ ಕಥೆ ಹೇಳಿದ ಕೂಡಲೇ ನಾನು ಖುಷಿಯಿಂದ ಒಪ್ಪಿಕೊಂಡೆ. ಏಕೆಂದರೆ ನಾನು ಇದುವರೆಗೆ ಮಾಡದಂತಹ ಪಾತ್ರವಿದು. ಈ ಕಥೆ ನನಗೆ ಸಿಗುವ ಮುಂಚೆ ಬೇರೆ ಬೇರೆ ನಟರ ಬಳಿ ಹೋಗಿದೆ. ಅಂತಿಮವಾಗಿ ನನ್ನ ಅದೃಷ್ಟಕ್ಕೆ ನನಗೆ ಸಿಕ್ಕಿತು. ನಿರ್ದೇಶಕ ಜಯತೀರ್ಥ ಅವರು ತುಂಬಾ ಸಾಫ್ಟ್ ಮತ್ತು ಕ್ಲಾಸ್‌ ಸಿನಿಮಾ ಮಾಡಿದವರು. ಆದರೆ, ಈ ಚಿತ್ರದಲ್ಲಿ ಅವರು ತಮ್ಮ ನಿರ್ದೇಶನದ ಮತ್ತೂಂದು ಶೈಲಿ ತೋರಿಸಿದ್ದಾರೆ.

ನಿಮ್ಮ ಫೆವರೇಟ್‌ ಸ್ಟಾರ್‌ ದರ್ಶನ್‌ ಅವರು ಸಿನಿಮಾ ನೋಡಿದ್ರಾ?

ಇಲ್ಲ, ಕೆಲವು ಶೋ ರೀಲ್‌ಗಳನ್ನು ನೋಡಿದ್ದಾರೆ. ಆರಂಭದಲ್ಲಿ ಶೋ ರೀಲ್‌ ನೋಡಿದ ಅವರು ಅದೊಂದು ದಿನ ಕರೆ ಮಾಡಿ, “ಇಷ್ಟೊಳ್ಳೆಯ ಕಂಟೆಂಟ್‌ ಅನ್ನು ಇಟ್ಟುಕೊಂಡು ಯಾಕೆ ರಿಲೀಸ್‌ ಮಾಡ್ತಿಲ್ಲ ನೀವು. ಮೊದಲು ಸಿನಿಮಾ ರಿಲೀಸ್‌ ಮಾಡುವ ಬಗ್ಗೆ ಗಮನ ಹರಿಸಿ’ ಎಂದರು. ಅಲ್ಲಿಂದ ಸಿನಿಮಾ ಬಿಡುಗಡೆ ಪ್ರಕ್ರಿಯೆ ಆರಂಭವಾಯಿತು. ಸಿನಿಮಾವನ್ನು ಕೂಡಾ ಅವರಿಗೆ ತೋರಿಸುತ್ತೇವೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next