Advertisement

ಧನ್ನೂರ ಪಬ್ಲಿಕ್‌ ಶಾಲೆಗೆ ಹೈಟೆಕ್‌ ರೂಪ : ಕೆಪಿಎಸ್‌ ಶಾಲೆ ಅಭಿವೃದ್ಧಿಗೆ 2 ಕೋಟಿ

02:14 PM Dec 22, 2020 | sudhir |

ಬಾಗಲಕೋಟೆ: ಜಿಲ್ಲೆಯ ಹುನಗುಂದ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ಧನ್ನೂರಿನ ಹಳ್ಳಿ ಶಾಲೆಗೆ ಹೈಟೆಕ್‌ ರೂಪ ನೀಡಲು ಶಾಸಕ ದೊಡ್ಡನಗೌಡ ಪಾಟೀಲ ಮುಂದಾಗಿದ್ದಾರೆ. ಸರ್ಕಾರಿ ಶಾಲೆಯೊಂದಕ್ಕೆ ಬರೋಬ್ಬರಿ 2 ಕೋಟಿ ಅನುದಾನ ನೀಡಿದ್ದು, ಇಡೀ ಶಾಲೆಯನ್ನು ಸಮಗ್ರ ಅಭಿವೃದ್ಧಿಪಡಿಸಲು ಯೋಜನೆ ಸಿದ್ಧಪಡಿಸಿದ್ದಾರೆ.

Advertisement

ಹೌದು, ಸರ್ಕಾರ, ಆಯಾ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಶಾಸಕರ ದತ್ತು ಶಾಲೆ ಯೋಜನೆ ಆರಂಭಿಸಿದ್ದು, ಶಾಸಕ ದೊಡ್ಡನಗೌಡರು, ದತ್ತು ಪಡೆದಿರುವ ತಮ್ಮ ಮತಕ್ಷೇತ್ರ ವ್ಯಾಪ್ತಿಯ ಧನ್ನೂರಿನ ಕರ್ನಾಟಕ ಪಬ್ಲಿಕ್‌ ಸ್ಕೂಲ್‌-2 ಕೋಟಿ, ಇಳಕಲ್ಲದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲೆ ವಿಭಾಗ-85 ಲಕ್ಷ ಹಾಗೂ ಇಳಕಲ್ಲದ ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ-90 ಲಕ್ಷ ಅನುದಾನ ನೀಡಿದ್ದಾರೆ.

ಹಳ್ಳಿ ಶಾಲೆ ಹೈಟೆಕ್‌ಗೆ ನಿರ್ಧಾರ: ಹುನಗುಂದ ತಾಲೂಕಿನ ಧನ್ನೂರ ಕರ್ನಾಟಕ ಪಬ್ಲಿಕ್‌ ಶಾಲೆಗೆ ವಿಚಿತ್ರ ಸಮಸ್ಯೆ ಇದೆ. ಇಲ್ಲಿನ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿಭಾಗ ಸೇರಿ ಕೆಪಿಎಸ್‌ ಶಾಲೆ ರಚಿಸಲಾಗಿದೆ. ಈಗ ಎಲ್‌ ಕೆಜಿ ಕೂಡ ಇಲ್ಲಿ ಆರಂಭಗೊಂಡಿದೆ.

ಪ್ರಾಥಮಿಕ ಶಾಲೆ, ಧನ್ನೂರ ಪುನರ್‌ ವಸತಿ ಕೇಂದ್ರದಲ್ಲಿದ್ದರೆ, ಉಳಿದ ಪ್ರೌಢ ಶಾಲೆ ಮತ್ತು ಕಾಲೇಜು ವಿಭಾಗ ಧನ್ನೂರ ಮೂಲ ಗ್ರಾಮ ಮತ್ತು ಪುನರ್‌ ವಸತಿ ಕೇಂದ್ರದ ಮಧ್ಯೆ ಇದೆ. ಸರ್ಕಾರದ ನಿಯಮಾವಳಿ ಪ್ರಕಾರ ಕೆಪಿಎಸ್‌ ಶಾಲೆಗೆ ಕನಿಷ್ಠ 5 ಎಕರೆ
ಭೂಮಿ ಬೇಕು. ಧನ್ನೂರ ಈ ಶಾಲೆಗೆ ಕೇವಲ 2 ಎಕರೆ ಇದೆ. ಆಟದ ಮೈದಾನ, 656 ವಿದ್ಯಾರ್ಥಿಗಳ ಕಲಿಕೆಗೂ ಅನುಕೂಲವಾಗಲು ಕೊಠಡಿಗಳು ಇಲ್ಲ. ಹೀಗಾಗಿ ಆ ಕೊರತೆ ನೀಗಿಸುವ ಜತೆಗೆ ಸ್ಮಾಟ್‌ ಕ್ಲಾಸ್‌, ಶೌಚಾಲಯ, ಪ್ರಯೋಗಾಲಯ ನಿರ್ಮಾಣಗೊಳ್ಳಬೇಕಿದೆ.

Advertisement

ಧನ್ನೂರ ಶಾಲೆಯ ಸಮಸ್ಯೆ ಅರಿತ ಶಾಸಕ ದೊಡ್ಡನಗೌಡ ಪಾಟೀಲ, ಶಾಲಾ ದತ್ತು ಯೋಜನೆಯಡಿ ಎರಡು ಕೋಟಿ ಮೀಸಲಿಟ್ಟಿದ್ದು, ಅದರಲ್ಲಿ ಸ್ಮಾರ್ಟ್‌ ಕ್ಲಾಸ್‌, ಶೌಚಾಲಯ, ಗ್ರಂಥಾಲಯ, ಆಟದ ಮೈದಾನ ಅಭಿವೃದ್ಧಿ, ಕ್ರೀಡಾ ಉಪಕರಣ, ಕಾಂಪೌಂಡ್‌ ನಿರ್ಮಾಣ, ಗಣಕಯಂತ್ರ ಪ್ರಯೋಗಾಲಯ, ಗ್ರಂಥಾಲಯ ಕೊಠಡಿ, 10 ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಕ್ರಿಯಾ
ಯೋಜನೆ ರೂಪಿಸಿದ್ದಾರೆ. ಮುಖ್ಯವಾಗಿ ಶಾಲೆಗೆ ಬೇಕಿರುವ 2ರಿಂದ 3 ಎಕರೆ ಭೂಮಿ ಒದಗಿಸಲು ಕ್ರಿಯಾ ಯೋಜನೆಯಲ್ಲಿ ಅನುದಾನ ಹೊಂದಾಣಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಶಾಸಕರ ಮಾದರಿ ಶಾಲೆಗೆ ಶಿಕ್ಷಕರೇ ಇಲ್ಲ: ಶಾಸಕರು ದತ್ತು ಪಡೆದ ಮತ್ತೂಂದು ಪ್ರಮುಖ ಶಾಲೆಯಲ್ಲಿ ಇಳಕಲ್ಲ ನಗರದ ಸರ್ಕಾರಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯೂ ಒಂದು. ಇಲ್ಲಿ 1ರಿಂದ 8ನೇ ತರಗತಿ ವರೆಗೆ 338 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಮುಖ್ಯವಾಗಿ ಈ ಶಾಲೆಯ ಮುಖ್ಯೋಪಾಧ್ಯಾಯ, ಗಣಿತ, ಇಂಗ್ಲಿಷ್‌ ಹಾಗೂ ಸಾಮಾನ್ಯ
ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಆ ಹುದ್ದೆ ಭರ್ತಿ ಮಾಡಬೇಕಿದೆ. ಇಳಕಲ್ಲದ ಪ್ರಮುಖ ಶಾಲೆ ಇದಾಗಿದ್ದು, ಶಾಸಕರ ಮಾದರಿ ಶಾಲೆ, ಶಾಸಕರ ಶಾಲಾ ದತ್ತು ಯೋಜನೆಯಡಿ ಸಮಗ್ರ ಅಭಿವೃದ್ಧಿಯಾಗಬೇಕು.

ಸರ್ಕಾರಿ ಪಿಯು ಕಾಲೇಜ್‌: ಇಳಕಲ್ಲ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗವನ್ನೂ ದತ್ತು ಪಡೆದಿದ್ದು, ಇದು ಅತ್ಯಂತ ಹಳೆಯ ಕಟ್ಟಡವಾಗಿದೆ. ಹೀಗಾಗಿ ಇದರ ಸಂಪೂರ್ಣ ದುರಸ್ಥಿ ಅಗತ್ಯವಿದ್ದು, ಕಿಟಕಿ, ಬಾಗಿಲು ಕಿತ್ತು ಹೋಗಿವೆ. ಅವುಗಳ ದುರಸ್ತಿ ಜತೆಗೆ ಶಾಲೆಯ ಶಿಕ್ಷಕರ ಹುದ್ದೆ ಖಾಲಿಯಿವೆ. ಈ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದಿದ್ದು,
ಅವರು ದತ್ತು ಯೋಜನೆಯಡಿ ಶಾಲೆ ದತ್ತು ಪಡೆದಿದ್ದು, 85 ಲಕ್ಷ ಅನುದಾನ ನೀಡಲು ಮುಂದಾಗಿದ್ದಾರೆ. ಒಟ್ಟಾರೆ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲರು, ಮೂರು ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಒಟ್ಟು 3.75 ಕೋಟಿ ಅನುದಾನ ಬಳಕೆಗೆ ಮುಂದಾಗಿದ್ದಾರೆ.  ಆ ಮೂಲಕ ಸರ್ಕಾರಿ ಶಾಲೆಗಳ ಕಾಯಕಲ್ಪಕ್ಕೆ ಕ್ರಮ ಕೈಗೊಂಡಿದ್ದಾರೆ.

ಸರ್ಕಾರಿ ಶಾಲೆಗಳನ್ನು ಬಲವರ್ಧನೆ ಮಾಡಲು ನಮ್ಮ ಸರ್ಕಾರ ಮುಂದಾಗಿದೆ.
ಹುನಗುಂದ ಮತಕ್ಷೇತ್ರದ ಮೂರು ಶಾಲೆ ದತ್ತು ಪಡೆದು ಸಮಗ್ರ ಅಭಿವೃದ್ಧಿಪಡಿಸಲು ಯೋಜನೆ ಹಾಕಿಕೊಂಡಿದ್ದು, ಧನ್ನೂರ ಮತ್ತು ಇಳಕಲ್ಲ ನಗರದ ಎರಡು ಸರ್ಕಾರಿ ಶಾಲೆ ದತ್ತು ಪಡೆಯಲಾಗಿದೆ. ಅಲ್ಲಿನ ಬೇಡಿಕೆಗಳ ಪಟ್ಟಿ ಪಡೆದು, ಎಲ್ಲ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ.
– ದೊಡ್ಡನಗೌಡ ಪಾಟೀಲ, ಶಾಸಕ, ಹುನಗುಂದ

– ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next