ಹುನಗುಂದ: ಧನ್ನೂರ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಬೆಂಬಲಿಗರ ಪಾಲಾಗಿದ್ದು, ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಬಸಮ್ಮ ಮಾದರ ಹಾಗೂ ಉಪಾಧ್ಯಕ್ಷರಾಗಿ ಸಂಗಮ್ಮ ಶಿರಹಟ್ಟಿ ಆಯ್ಕೆಯಾಗಿದ್ದಾರೆ.
15 ಸದಸ್ಯ ಬಲದ ಧನ್ನೂರ ಗ್ರಾಮಪಂಚಾಯಿತಿನಲ್ಲಿ 8 ಕಾಂಗ್ರೆಸ್ ಬೆಂಬಲಿತ ಸದಸ್ಯರು, ನಾಲ್ವರು ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ ಮೂವರು ಎಸ್‌ಆರ್‌ಎನ್‌ಇ ಫೌಂಡೇಶನ್ ಬೆಂಬಲಿತ ಸದಸ್ಯರಿದ್ದಾರೆ. ಬಹುಮತ ಹೊಂದಿದ್ದ ಧನ್ನೂರ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಬಸಮ್ಮ ಮಾದರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಂಗಮ್ಮ ಶಿರಹಟ್ಟಿ ನಾಮಪತ್ರ ಸಲ್ಲಿಸಿದ್ದರು. ಎಸ್‌ಆರ್‌ಎನ್‌ಇ ಫೌಂಡೇಶನ್ ಬೆಂಬಲಿತ ಸದಸ್ಯರ ಬೆಂಬಲ ಪಡೆದ ಬಿಜೆಪಿ ಬೆಂಬಲಿಗರಾದ ಸಿದ್ರಾಮಪ್ಪ ಗೌಡರ ಅಧ್ಯಕ್ಷ ಹಾಗೂ ರುದ್ರಮ್ಮ ಹಿರೇಮಠ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಒಂದು ಮತ ಅಂತರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಬಸಮ್ಮ ಮಾದರ ಅಧ್ಯಕ್ಷರಾಗಿ ಹಾಗೂ ಸಂಗಮ್ಮ ಶಿರಹಟ್ಟಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸೋಲು ಅನುಭವಿಸಿದರು.ವಿಜಯೋತ್ಸವ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ತಾಪಂ ಮಾಜಿ ಅಧ್ಯಕ್ಷ ಶಂಕ್ರಪ್ಪನೇಗಲಿ, ಮುಖಂಡರಾದ ಬಾಲಪ್ಪಶಿರಹಟ್ಟಿ, ಸಂಗಮೇಶ ಹಾವರಗಿ,ಬಸವರಾಜ ನಾಡಗೌಡ್ರ, ಶಶಿಕಾಂತತಿಮ್ಮಾಪುರ, ಈರಸಂಗಪ್ಪ ಅಂಗಡಿ,ವಿಜಯಕುಮಾರ ಹುದ್ದಾರ, ಶಿವರುದ್ರಪ್ಪಬೇವೂರ, ಈರಪ್ಪ ಪಟ್ಟಣಶೆಟ್ಟಿ, ಸಂಗಪ್ಪ ಬಲಕುಂದಿ, ಸದಸ್ಯರಾದ ಸುರೇಶತಳವಾರ, ಮಹಾಂತೇಶ ಚಲವಾದಿ,ಮಹಾಂತೇಶ ಅಂಗಡಿ, ನಜೀರುದ್ದಿನ್ ಮುಲ್ಲಾ, ಚನ್ನಮ್ಮ ತಿಮ್ಮಾಪುರ, ಶಿವಗಂಗಾ ಸುಣಕಲ್ಲ ಇದ್ದರು.
ಇದನ್ನೂ ಓದಿ:ಮಂಗಳೂರು: ಎಸಿಬಿ ದಾಳಿ ಅಂತ್ಯ; ಕೋಟ್ಯಾಂತರ ರೂಪಾಯಿ ಆಸ್ತಿ ಪತ್ತೆ !
ಕಾಂಗ್ರೆಸ್ ಬೆಂಬಲಿತ ಸದಸ್ಯನ ಅಮಾಧಾನ: ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮೇಲಿನ ಅಭಿಮಾನ, ಗೌರವಕ್ಕೆ ಸತತ 25 ವರ್ಷಗಳಿಂದ ಪಕ್ಷದ ಸಂಘಟನೆ ಮತ್ತು ಮಾಜಿ ಶಾಸಕರ ಶ್ರೇಯೋಭಿವೃದ್ಧಿಗೆ ಶ್ರಮಿಸಿದರೂ ಸಹ ನನಗೆ ಅಧ್ಯಕ್ಷ ಸ್ಥಾನ ನೀಡಲಿಲ್ಲ. ಹೊಸಬರಿಗೆ ಮಣೆ ಹಾಕಿದ್ದು, ಪಕ್ಷ ನಿಷ್ಠೆ ತೋರಿದ ನಿಷ್ಠಾವಂತ ಕಾರ್ಯಕರ್ತರಿಗೆ ಕಾಂಗ್ರೆಸ್ ಪಕ್ಷದಲ್ಲಿ ಬೆಲೆ ಇಲ್ಲದಂತಾಗಿದೆ. ಅಧ್ಯಕ್ಷರ ಆಯ್ಕೆಯ ವಿಚಾರದಲ್ಲಿ ಅಸಮಾಧಾನ ಉಂಟಾಗಿದೆ ಎಂದು ಕಾಂಗ್ರೆಸ್ ಬೆಂಬಲಿತ ಗ್ರಾಪಂ ಸದಸ್ಯ ಸುರೇಶ ತಳವಾರ ಹೇಳಿದ್ದಾರೆ.