Advertisement

ದಾನೇಶ್ವರಿ ಅತ್ಯಾಚಾರ, ಕೊಲೆಗೆಖಂಡನೆ: ಜಿಲ್ಲಾದ್ಯಂತ ಪ್ರತಿಭಟನೆ

01:25 PM Dec 22, 2017 | |

ಚಾಮರಾಜನಗರ: ವಿಜಯಪುರದ ವಿದ್ಯಾರ್ಥಿನಿ ದಾನೇಶ್ವರಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಹಾಗೂ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಬಹುಜನ ವಿದ್ಯಾರ್ಥಿ ಸಂಘ ಹಾಗೂ ಎಬಿವಿಪಿ ಆಶ್ರಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ನಗರದಲ್ಲಿ ಎರಡು ಪ್ರತ್ಯೇಕ ಪ್ರತಿಭಟನೆ ನಡೆಸಿದರು.

Advertisement

ನಗರದ ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಬಹುಜನ ವಿದ್ಯಾರ್ಥಿ ಸಂಘ ನೇತೃತ್ವದಲ್ಲಿ ಮೆರವಣಿಗೆ ಆರಂಭಿಸಿದ ವಿದ್ಯಾರ್ಥಿಗಳು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ರಚಿಸಿದರು. ಬಳಿಕ ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಮಾನವ ಸರಪಳಿ: ಇನ್ನೊಂದು ಪ್ರತಿಭಟನೆಯಲ್ಲಿ ಎಬಿವಿಪಿ ನೇತೃತ್ವದಲ್ಲಿ ಸೇವಾಭಾರತಿ ಕಾಲೇಜಿನಿಂದ ಭುವನೇಶ್ವರಿ
ವೃತ್ತಕ್ಕೆ ಬಂದು ಮಾನವ ಸರಪಳಿ ರಚಿಸಿದರು. ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನದಲ್ಲಿ ಧರಣಿ ನಡೆಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ಮೈಸೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಶಿವಕುಮಾರ್‌, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು, ಅತ್ಯಾಚಾರ, ಕೊಲೆ ಪ್ರಕರಣಗಳು ಹೆಚ್ಚುತ್ತಿದ್ದರೂ, ರಾಜ್ಯ ಸರ್ಕಾರ ಅದನ್ನು ನಿಯಂತ್ರಿಸುವಲ್ಲಿ ವಿಫ‌ಲವಾಗಿದೆ. ಅತ್ಯಾಚಾರ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ಬಹುಜನ ವಿದ್ಯಾರ್ಥಿ ಸಂಘದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿಲ್ಲಾ ಸಂಯೋಜಕ ಪರ್ವತ್‌ ರಾಜ್‌ ಮಾತನಾಡಿ, ದೆಹಲಿಯ ನಿರ್ಭಯಾ ಪ್ರಕರಣ ಕೃತ್ಯ ತಮ್ಮೆಲ್ಲರಿಂದ ಮಾಸುವ ಮುನ್ನವೇ ರಾಜ್ಯದ ವಿಜಯಪುರ ಜಿಲ್ಲೆಯ ದರ್ಗಾಬೈಲ್‌ ನ ಮಂಜುನಾಥ ನಗರದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ದಾನೇಶ್ವರಿ ಮೇಲೆ 6 ರಿಂದ 7 ಮಂದಿ ಸದಸ್ಯರು ಸಾಮೂಹಿಕವಾಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ. ಇವರನ್ನು ಗಲ್ಲುಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

Advertisement

ಆಗ್ರಹ: ಈ ಪ್ರಕರಣದಲ್ಲಿ ಅಲ್ಲಿನ ಎಸ್ಪಿ ಕುಲದೀಪ್‌ಕುಮಾರ್‌ ಜೈನ್‌ ಅವರು ಎಫ್ ಐಆರ್‌ ಮಾಡದೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಿದರು. ಈ ಪ್ರಕರಣದ ಪ್ರಮುಖ ಆರೋಪಿಯಾದ ಸಾಗರ್‌ ರಕ್ಷಣೆ ಮಾಡಲು ಪ್ರಕರಣ ತಿರುಚಿಸಿದ್ದಾರೆ ಆದರಿಂದ ಕುಲದೀಪ್‌ ಕುಮಾರ್‌ ಆರ್‌.ಜೈನ್‌ ಅವರನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು. 

ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ನಡೆದ ಸಂದರ್ಭಗಳಲ್ಲಿ ಸಂಸದ ಪ್ರತಾಪ್‌ಸಿಂಹ, ಶೋಭಾ ಕರಂದ್ಲಾಜೆ, ಅನಂತಕುಮಾರ್‌ ಹಾಗೂ ಸಂಘ-ಪರಿವಾರದವರು ಸ್ಥಳಕ್ಕೆ ಹೋಗಿ ಪ್ರತಿಭಟಿಸುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು. ರಾಜ್ಯ ಸರ್ಕಾರ ದಾನೇಶ್ವರಿ ಕುಟುಂಬಕ್ಕೆ ಪರಿಹಾರ ನೀಡಿದೆ. ಹಣವೇ ಪರಿಹಾರವಲ್ಲ ಪ್ರಕರಣದ ಆರೋಪಿಗಳಿಗೆ ಗಲ್ಲುಶಿಕ್ಷೆಯಾಗಬೇಕು ಎಂದು
ಅವರು ಒತ್ತಾಯಿಸಿದರು. 

“ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ’

ಗುಂಡ್ಲುಪೇಟೆ: ವಿಜಯಪುರದಲ್ಲಿ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಅಖೀಲ ಭಾರತ ವಿದ್ಯಾರ್ಥಿ ಪರಿಷತ್‌ನಿಂದ ಪ್ರತಿಭಟಿಸಲಾಯಿತು. ಪಟ್ಟಣದ ಜೆಎಸ್‌ಎಸ್‌ ಮಹಿಳಾ ಪದವಿ ಕಾಲೇಜು ಹಾಗೂ ದೊಡ್ಡಹುಂಡಿ ಭೋಗಪ್ಪ ಕಿರಿಯ ಕಾಲೇಜಿನ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದರು. ನಂತರ ತಾಲೂಕು ಕಚೇರಿ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಾ ಕಾರರನ್ನು ಉದ್ದೇಶಿಸಿ ಮಾತನಾಡಿದ ಎಬಿವಿಪಿ ಮುಖಂಡ ನಂದೀಶ್‌, ರಾಜ್ಯ ಸರ್ಕಾರವು ಹಿಂದೆ ನಡೆದ ಡಿ.ಕೆ.ರವಿ. ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆಯ ಪ್ರಕರಣಗಳನ್ನು ಮುಚ್ಚಿ ಹಾಕಿದಂತೆಯೇ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಇದರಿಂದ ರಾಜ್ಯದಲ್ಲಿ ಶ್ರೀಸಾಮಾನ್ಯರಿಗೆ ಹಾಗೂ ಮಹಿಳೆಯರಿಗೆ ರಕ್ಷಣೆಯಿಲ್ಲದಂತಾಗಿದೆ. ಗೂಂಡಾ ರಾಜ್ಯವಾಗುತ್ತಿದೆ ಎಂದು ಆರೋಪಿಸಿದರು.

ಅಲ್ಲದೆ, ಗೃಹ ಇಲಾಖೆಯು ನಿಷ್ಕ್ರಿಯವಾಗಿದ್ದು, ದುಷ್ಟರನ್ನು ಕಾಪಾಡುತ್ತಿದೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು. ನಂತರ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಉಪತಹಶೀಲ್ದಾರ್‌ ಮಹೇಶ್‌ಗೆ ಮನವಿ ಸಲ್ಲಿಸಿದರು. ಎಬಿವಿಪಿ ಅಧ್ಯಕ್ಷ ಚಂದ್ರು, ಕಾರ್ಯದರ್ಶಿ ಮಹದೇವ ಸ್ವಾಮಿ, ಸಹಕಾರ್ಯದರ್ಶಿ ಶಶಿಕಲಾ, ಮಹದೇವಸ್ವಾಮಿ ಹಾಗೂ ಸೇರಿದಂತೆ ವಿದ್ಯಾರ್ಥಿನಿಯರು ಹಾಜರಿದ್ದರು

ದಾನೇಶ್ವರಿ ಅತ್ಯಾಚಾರ ಖಂಡನೀಯ: ಬಿಎಸ್ಪಿ

ಗುಂಡ್ಲುಪೇಟೆ: ವಿಜಯಪುರದಲ್ಲಿನ ದಾನೇಶ್ವರಿ ಎಂಬ ಅಪ್ರಾಪ್ತ ದಲಿತ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಆತ್ಯಾಚಾರ ಮತ್ತು ಕೊಲೆ ಪ್ರಕರಣ ಅತ್ಯಂತ ನೋವಿನ ಸಂಗತಿ ಎಂದು ಬಹುಜನ ಸಮಾಜ ಪಾರ್ಟಿಯ ಟೌನ್‌ ಘಟಕದ ಅಧ್ಯಕ್ಷ ಎ.ರಮೇಶ್‌ ಹೇಳಿದರು. ಘಟನೆಗೆ ಕಾರಣರಾದ ಇಂತಹ ಕಾಮುಕರನ್ನು ಬಂಧಿಸಬೇಕು, ಬಂಧಿತ ಆರೋಪಿಗಳಿಗೆ ಬೇಲ್‌ ನೀಡಬಾರದು, ಯಾವ ಸಡಿಲತೆಯನ್ನು ನೀಡದೆ ಅವರೆಲ್ಲರಿಗೂ ಬೇಷರತ್‌ ಮರಣ ದಂಡನೆ ವಿಧಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next