ಸಿನಿಮಾ ರಂಗಕ್ಕೆ ಬರುವ ಪ್ರತಿಯೊಬ್ಬ ಕಲಾವಿದನು ಹೊಸದೇನೋ ಮಾಡಬೇಕೆಂಬ ಆಸೆ, ತುಡಿತದೊಂದಿಗೆ ಬಂದಿರುತ್ತಾನೆ. ಆದರೆ, ಚಿತ್ರರಂಗದ ವ್ಯವಸ್ಥೆ ಮಾತ್ರ ಆತನ ತುಡಿತ, ಆಸೆಗಳನ್ನು ಬದಿಗೊತ್ತಿ, ಪಾಲಿಗೆ ಬಂದಿದ್ದೇ ಪಂಚಾಮೃತ ಎಂದು ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪುವಂತೆ ಮಾಡುತ್ತದೆ. ಆದರೆ, ಕೆಲವು ನಟರು ಮಾತ್ರ ಕಮರ್ಷಿಯಲ್ ಆಗಿ ಹಾಗೂ ತಮ್ಮ ಇತರ ಆಶಯಗಳಿಗಾಗಿ ಕೆಲವು ಪಾತ್ರಗಳನ್ನು ಒಪ್ಪಿಕೊಂಡರೂ, ಅವರ ಮನಸ್ಸಿನಲ್ಲಿನ ತುಡಿತ ಮಾತ್ರ ಹಾಗೇ ಇರುತ್ತದೆ. ಅಂತಹ ನಟರಲ್ಲಿ ಧನಂಜಯ್ ಕೂಡಾ ಒಬ್ಬರು.
ಹೊಸದೇನನ್ನೋ ಮಾಡಬೇಕೆಂಬ ಬಯಕೆ ಧನಂಜಯ್ ಅವರಲ್ಲಿ ಸದಾ ಇದೆ. ಈ ಹಾದಿಯಲ್ಲಿ ಪ್ರಯತ್ನಿಸುತ್ತಲೇ ಇದ್ದಾರೆ. ಕೆಲವೊಮ್ಮೆ ಅದು ಕೈ ಹಿಡಿದಿದೆ, ಇನ್ನು ಕೆಲವೊಮ್ಮೆ ನಿರೀಕ್ಷಿತ ಪ್ರತಿಫಲ ನೀಡಿಲ್ಲ. ಈಗ ನಟ ಧನಂಜಯ್ ಮತ್ತೂಂದು ಕನಸು ಕಾಣುತ್ತಿದ್ದಾರೆ. ಅದು “ನಾಡಪ್ರಭು ಕೆಂಪೇಗೌಡ’ರ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಇದು ಧನಂಜಯ್ ನಟನೆಯ ಹೊಸ ಸಿನಿಮಾ.
ಹೀಗೊಂದು ಸಿನಿಮಾದ ಹೆಸರು ಅನೇಕ ದಿನಗಳಿಂದ ಕೇಳಿಬರುತ್ತಿತ್ತು. ಈಗ ಚಿತ್ರೀಕರಣಕ್ಕೆ ತಂಡ ಅಣಿಯಾಗಿದೆ. ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ ಅವರು ಈ ಚಿತ್ರದ ನಿರ್ದೇಶಕರು. ಕೆಂಪೇಗೌಡ ಕುರಿತಾಗಿ ಸಿನಿಮಾ ಮಾಡಬೇಕೆಂಬುದು ನಾಗಾಭರಣ ಅವರ ಎರಡು ದಶಕಗಳ ಕನಸು ಈಗ ನನಸಾಗುತ್ತಿದೆ. ಅದಕ್ಕೆ ಧನಂಜಯ್ ಸಾಥ್ ನೀಡುತ್ತಿದ್ದಾರೆ.
“ನಾಡಪ್ರಭು ಕೆಂಪೇಗೌಡ’ ಚಿತ್ರಕ್ಕೆ “ಬೆಂಗಳೂರು ಕಾರಣಿಕ’ ಎಂಬ ಅಡಿಬರಹವಿದೆ. ಡಾ.ಎಂ. ಎನ್.ಶಿವರುದ್ರಪ್ಪ ಹಾಗೂ ಶುಭಂ ಗುಂಡಾಲ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ, ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ, ಶಶಿಧರ ಅಡಪ ನಿರ್ಮಾಣ ವಿನ್ಯಾಸ ಚಿತ್ರಕ್ಕಿದೆ.
ನಾಗಾರಭರಣ ಅವರು ಈ ಚಿತ್ರಕ್ಕಾಗಿ ಸಾಕಷ್ಟು ಸಂಶೋಧನೆ ಮಾಡಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ರಚಿಸಿದ್ದಾರೆ. ಶೀಘ್ರದಲ್ಲಿಯೇ ಸಿನಿಮಾ ಆರಂಭವಾಗಲಿದೆ.