Advertisement

ಧೈರ್ಯಂ ಸರ್ವತ್ರ ಸಾಧನಂ

11:16 AM May 12, 2022 | Team Udayavani |

ನಮ್ಮ ಸುಧಾರಣೆಯು ನಮ್ಮಿಂದಲೇ ಆಗಬೇಕು. ಜಗತ್ತಿನ ಮಹಾನ್‌ ಸಾಧಕರೆಲ್ಲ ಮೊದಲು ತಮ್ಮನ್ನು ತಾವು ಸುಧಾರಿಸಿಕೊಂಡು ಅನಂತರ ಮತ್ತೂಬ್ಬರಿಗೆ ಸ್ಫೂರ್ತಿದಾಯಕವಾಗಿ ಬದುಕಿದವರು. ಪ್ರತಿಯೊಬ್ಬ ವ್ಯಕ್ತಿಯು ಆತ ಏನೇ ಆಗಿರಲಿ ತನ್ನಲ್ಲೇ ಅನೇಕ ಸುಧಾರಣೆಗಳನ್ನು ತಂದುಕೊಳ್ಳುವ ಆವಶ್ಯಕತೆ ಮತ್ತು ಅವಕಾಶ ಇದ್ದೇ ಇರುತ್ತದೆ. ಇದು ವ್ಯಕ್ತಿತ್ವದಿಂದ ಮಾತ್ರ ಸಾಧ್ಯ. ದಾಸರ ವಾಣಿಯಂತೆ “ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ’ ಎಂಬ ಮಾತು ಸತ್ಯ. ಮನುಷ್ಯನು ತನಗೆ ಗೊತ್ತಿಲ್ಲದ ವಿಷಯಗಳನ್ನು ಗೊತ್ತಿಲ್ಲವೆಂದೂ ತನ್ನ ದೌರ್ಬಲ್ಯಗಳನ್ನು ಅರಿತುಕೊಳ್ಳುವುದು ಅವಮಾನ ಎಂದು ಯಾವತ್ತೂ ಭಾವಿಸಬಾರದು. ಹಾಗೇನಾದರೂ ಭಾವಿಸಿಕೊಂಡರೆ ಅದು ನಮಗೆ ಕೇಳು ಬಯಸಿದಂತೆ. ನಮ್ಮ ಕೆಡುಕನ್ನು ಮತ್ತು ನಮ್ಮ ಒಳಿತನ್ನು ನಾವೇ ತಂದುಕೊಂಡ ಹಾಗೆ ಆಗುತ್ತದೆ. ಇದನ್ನೇ ತಿಳಿದವರು, ಇತರರನ್ನು ಅರಿತವನು ಜಾಣ, ತನ್ನನ್ನು ತಾನೇ ಅರಿತವನು ಜ್ಞಾನಿ ಎಂದು ಹೇಳುತ್ತಾರೆ.

Advertisement

ಒಮ್ಮೆ ದಾರಿಯಲ್ಲಿ ಹೋಗುತ್ತಿದ್ದ ಪ್ರವಾಸಿಗನೊಬ್ಬ ಶಿಲ್ಪಿಯನ್ನು ಕುರಿತು, ಕಲ್ಲಿನಿಂದ ಇಷ್ಟೊಂದು ಸುಂದರ ಮೂರ್ತಿಗಳನ್ನು ನೀನು ಹೇಗೆ ಕೆತ್ತನೆ ಮಾಡುವೆ ಎಂದು ಪ್ರಶ್ನಿಸಿದನು. ಆಗ ಶಿಲ್ಪಿಯು ನಾನಾಗಿಯೇ ಹೊಸತಾಗಿ ಮೂರ್ತಿಗಳನ್ನೇನು ಕೆತ್ತಲಿಲ್ಲ, ಬದಲಿಗೆ ಆ ಮೂರ್ತಿಯು ಕಲ್ಲಿನಲ್ಲಿ ಮೊದಲೇ ಇತ್ತು. ನಾನು ಈ ಮೂರ್ತಿಯನ್ನು ಆವರಿಸಿಕೊಂಡಿದ್ದ ಬೇಡವಾದ ಮತ್ತು ಅನಗತ್ಯ ಕಲ್ಲುಗಳನ್ನು ಕೆತ್ತಿ ತೆಗೆದು ಹಾಕಿದ್ದೇನೆ. ಅದರಿಂದಾಗಿ ಈ ಸುಂದರವಾದ ಮೂರ್ತಿಯು ಹೊರಬಂದಿದೆ ಎಂದು ಹೇಳಿದನು.

ನಾಳೆಯ ದಿನ ನಮಗೆ ಏನಾಗುವುದು ಎಂದು ಯಾರಿಗೂ ತಿಳಿದಿರುವುದಿಲ್ಲ. ಆದರೆ ಪ್ರತಿಯೊಬ್ಬರೂ ನಾಳೆ ನನಗೆ ಒಳಿತಾಗುತ್ತದೆ ಎಂಬ ವಿಶ್ವಾಸದಲ್ಲೇ ಬದುಕುತ್ತಿರುತ್ತಾರೆ. ಆ ರೀತಿಯ ಒಂದು ವಿಶ್ವಾಸವೇ ಮನುಷ್ಯನ ಅಥವಾ ಚರಾಚರ ಜೀವಿಗಳ ಮುಂದಿನ ಬದುಕಿಗೆ ಜೀವಧಾತು. ಒಳಿತು ಮತ್ತು ಕೆಡುಕುಗಳು ಎರಡೂ ಬಾಳಿನಲ್ಲಿ ಆಗಿಂದಾಗ್ಗೆ ಬಂದೇ ಬರುತ್ತವೆ. ಕಾಳಿದಾಸನ ಮೇಘದೂತದಲ್ಲಿ ಯಕ್ಷನು ಮೋಡದ ಮೂಲಕ ಯಕ್ಷಿಗೆ ಕಳುಹಿಸುವ ಸಂದೇಶದಲ್ಲಿ “ಕಸ್ಯಾತ್ಯಂತಂ ಸುಖ ಮುಪನತಂ ದುಖಃಮೇಮೇಕಾಂತತೋ ವಾ ನೀಚೈರ್ಗಚುತ್ಯುಪರಿ ಚ ದಶಾ ಚಕ್ರನೆಮಿಕ್ರಮೇಣ” ಎಂಬ ಮಾರ್ಮಿಕವಾದ ಮಾತನ್ನು ಹೇಳುತ್ತಾನೆ. ಯಾರಿಗೆ ತಾನೆ ಕೇವಲ ಅತ್ಯಂತ ಸುಖವಾಗಲಿ ಅಥವಾ ಅತ್ಯಂತ ದುಃಖವಾಗಲಿ ಉಂಟಾಗುತ್ತದೆ? ಪ್ರತೀ ಬಾರಿಯೂ ಅವುಗಳು ಚಕ್ರದಂತೆ ತಿರುಗುತ್ತಲೇ ಇರುತ್ತವೆ. ಒಮ್ಮೆ ದುಃಖ ದೊರೆತರೆ ಇನ್ನೊಮ್ಮೆ ಸುಖ ದೊರೆಯುತ್ತದೆ. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಸಮಾಧಾನ ವಾಗಿ ಇರಬೇಕು, ನೋಡುತ್ತಿದ್ದಂತೆ ದುಃಖದ ಕಾಲ ಕಳೆದು ಬಿಡುತ್ತದೆ ಎಂಬುದು ಅದರ ತಾತ್ಪರ್ಯ.

ಯಾರು ತಮ್ಮ ಆಪತ್ತಿನ ಸಂದರ್ಭದಲ್ಲಿ ತನ್ನ ಮೂಲ ಸ್ವರೂಪವನ್ನು ಬಿಡುವುದಿಲ್ಲವೋ ಅಂಥವನೇ ಧನ್ಯ. ಸೂರ್ಯನ ಕಿರಣಗಳ ಪ್ರಭಾವಕ್ಕೆ ಒಳಗಾಗುವ ಮಂಜುಗಡ್ಡೆಯು ಕರಗಿ ತನ್ನ ಸ್ವರೂಪವನ್ನು ಕಳೆದುಕೊಳ್ಳಬಹುದು. ಆದರೆ ಅದು ತನ್ನ ಶೈತ್ಯ ಗುಣವನ್ನು ಬಿಡುವುದಿಲ್ಲ. ಅದೇ ರೀತಿ ಪ್ರತಿಯೊಬ್ಬನೂ ಆಪತ್ತಿನಿಂದ ತಕ್ಕಮಟ್ಟಿಗೆ ವಿಚಲಿತರಾದರೂ ಆಪತ್ತಿನಿಂದ ಪೂರ್ತಿಯಾಗಿ ಧೈರ್ಯಗುಂದದೆ ಅದರಿಂದ ಪಾರಾಗುವ ಚಿಂತನೆಯನ್ನು ಪ್ರತೀ ಕ್ಷಣವೂ ನಡೆಸುತ್ತಾ ಇರಬೇಕು. ಇದಕ್ಕೆ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಬರುವ ಪ್ರಧಾನ ಘಟನೆಗಳೇ ಉತ್ತಮ ಉದಾಹರಣೆಗಳಾಗಿವೆ. ರಾಮಾಯಣದ ರಾಮನಾಗಲೀ ಮಹಾಭಾರತದ ಪಾಂಡವರು ಆಗಲೀ ತಮಗೆ ಬಂದೊದಗಿದ ಆಪತ್ತನ್ನು ಎದುರಿಸುತ್ತಾ ವಿನಯ ಮತ್ತು ವಿವೇಕದಿಂದ ಯೋಚಿಸಿ ಕಾರ್ಯಪ್ರವೃತ್ತರಾಗಿ ಆ ಆಪತ್ತುಗಳಿಂದ ಪಾರಾದರು.

ಸುಖ ಮತ್ತು ದುಃಖಗಳಿಂದ ಕದಲದಂತಹ ಮನಃಸ್ಥಿತಿ ಯಾದ ಇಂತಹ ಧೈರ್ಯವೊಂದೇ ಎಲ್ಲ ಒಳಿತಿಗೂ ಸಾಧಕವಾಗುತ್ತದೆ. ವ್ಯಕ್ತಿಯ ಸಕಲ ರೀತಿಯ ಏಳಿಗೆಗೂ ಪ್ರಾಥಮಿಕ ಸಾಧನವಾಗಿ ಬೇಕಾಗಿರುವುದು ಧೈರ್ಯವೇ.

Advertisement
Advertisement

Udayavani is now on Telegram. Click here to join our channel and stay updated with the latest news.

Next