Advertisement

ಡಿಜಿಪಿ-ಡಿಐಜಿ ಬಹಿರಂಗ ವಾಕ್ಸಮರ

03:45 AM Jul 14, 2017 | Team Udayavani |

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ
ಜಯಲಲಿತಾ ಆಪೆ¤ ಶಶಿಕಲಾಗೆ “ವಿಐಪಿ’ ಆತಿಥ್ಯ ನೀಡಲು ಎರಡು ಕೋಟಿ ರೂ. ಲಂಚ ಪಡೆದಿರುವ ವರದಿ ಸಂಬಂಧ
ಡಿಜಿಪಿ ಸತ್ಯನಾರಾಯಣರಾವ್‌ ಹಾಗೂ ಡಿಐಜಿ ರೂಪಾ ಬಹಿರಂಗ ವಾಕ್ಸಮರಕ್ಕೆ ಇಳಿದಿದ್ದಾರೆ.

Advertisement

ನನ್ನ ವೃತ್ತಿ ಜೀವನದಲ್ಲಿ ಬಿಸ್ಕೆಟ್‌ ಕೂಡ ಮುಟ್ಟಿದವನಲ್ಲ. ಅಕ್ರಮದ ದಾಖಲೆ ಇದ್ದರೆ ಬಹಿರಂಗಪಡಿಸಲಿ ಎಂದು ಡಿಜಿಪಿ ಸತ್ಯನಾರಾಯಣರಾವ್‌ ಸವಾಲು ಹಾಕಿದ್ದರೆ, ನಾನು ದಾಖಲೆ ಸಮೇತವೇ ವರದಿ ಸಲ್ಲಿಸಿದ್ದೇನೆ, ಈ ಕುರಿತು ತನಿಖೆ ನಡೆಯಲಿ ಎಂದು ಡಿಐಜಿ ರೂಪಾ ಆರೋಪವನ್ನು ಸಮರ್ಥಿಸಿಕೊಂಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಪ್ರಕರಣ ತನಿಖೆಗೆ ಆದೇಶಿಸಿದ ನಂತರವೂ ಇಬ್ಬರೂ ಅಧಿಕಾರಿಗಳು ಮಾಧ್ಯಮದ ಮುಂದೆ ಆರೋಪ- ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಈ ಮಧ್ಯೆ, ಬೆಳಗಾವಿ ಸೇರಿ ವಿವಿಧ ಕಾರಾಗೃಹಗಳಲ್ಲಿ ಡಿಜಿಪಿ
ಸತ್ಯನಾರಾಯಣರಾವ್‌ ಪರ ಬೆಂಬಲ ವ್ಯಕ್ತಪಡಿಸಿ ಕೈದಿಗಳು ಪ್ರತಿಭಟನೆ ನಡೆಸಿ ರೂಪಾ ಅವರ ಆರೋಪ ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿದ್ದಾರೆ.

ಸತ್ಯನಾರಾಯಣರಾವ್‌ ಹೇಳಿದ್ದೇನು?: ಡಿಐಜಿ ರೂಪ ನೀಡಿರುವ ವರದಿಯಲ್ಲಿ ಉಲ್ಲೇಖವಾದ ಎರಡು ಕೋಟಿ ರೂ.
ಲಂಚ ಪಡೆದ ಆರೋಪ ನಿರಾಧಾರ. ನನ್ನ ವೃತ್ತಿ ಜೀವನದಲ್ಲಿ ಕೈದಿಗಳು ನೀಡಿದ ಬಿಸ್ಕೇಟ್‌ ಕೂಡ ಮುಟ್ಟಿದವನಲ್ಲ.
ಪ್ರಚಾರ ಪಡೆಯುವುದಕ್ಕೆ ಆರೋಪ ಮಾಡಬಾರದು. ಸೂಕ್ತ ದಾಖಲೆಗಳಿದ್ದರೆ ಬಹಿರಂಗ ಪಡಿಸಲಿ. ಇನ್ನು 18 ದಿನಗಳಲ್ಲಿ
ಸೇವೆಯಿಂದ ನಿವೃತ್ತಿಯಾಗಲಿದ್ದೇನೆ. ಈ ಸಂದರ್ಭದಲ್ಲಿ ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ವ್ಯವಸ್ಥಿತ ಸಂಚು ರೂಪಿಸಿದ್ದರೂ ಅಚ್ಚರಿಯಿಲ್ಲ. ಈ ವಿಚಾರದ ಬಗ್ಗೆ ರಾಜ್ಯ ಸರ್ಕಾರಕ್ಕೂ ವರದಿ ಸಲ್ಲಿಸಲಿದ್ದೇನೆ. ರಾಜ್ಯ ಸರ್ಕಾರದಿಂದ ನಡೆಯುವ ತನಿಖೆಯನ್ನು ಸ್ವಾಗತಿಸುತ್ತೇನೆ ಎಂದರು.

ಶಶಿಕಲಾರಿಗೆ ವಿಶೇಷ ಅಡುಗೆ ಮನೆ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಕಾರಾಗೃಹದ ಕ್ಯಾಂಟೀನ್‌ನಿಂದಲೇ ತಿಂಡಿ, ಊಟ
ನೀಡಲಾಗುತ್ತದೆ. ಈ ಹಿಂದೆ ವಿಶೇಷ ವ್ಯವಸ್ಥೆ ಕಲ್ಪಿಸುವಂತೆ ಮಾಡಿದ್ದ ಮನವಿ ಎರಡು ಬಾರಿ ನಾನೇ ತಿರಸ್ಕರಿಸಿದ್ದೇನೆ.
ಅಸಲಿಗೆ ರೂಪ ಅವರು ಶಶಿಕಲಾ ಇರುವ ಕೊಠಡಿಯ ಬಳಿ ಹೋಗಿಯೇ ಇಲ್ಲ. ಈ ಬಗ್ಗೆ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ.

Advertisement

ಅಲ್ಲದೆ ಕಾರಾಗೃಹದಲ್ಲಿ ವಿಡಿಯೋ ರೆಕಾರ್ಡಿಂಗ್‌ ಮಾಡಲು ಯಾರಿಗೂ ಅವಕಾಶವಿಲ್ಲ. ಅಧಿಕಾರಿ ಹೇಗೆ ವಿಡಿಯೋ
ಮಾಡಿಕೊಂಡಿರಲು ಸಾಧ್ಯ ಎಂದು ಪ್ರಶ್ನಿಸಿದರು.

ನಾನೇ ವರದಿ ನೀಡಿದ್ದೇನೆ: ಅಧಿಕಾರಿ ನೀಡಿರುವ ವರದಿಯಲ್ಲಿ ಉಲ್ಲೇಖವಾಗಿರುವಂತೆ ಮಹಿಳಾ ಕೈದಿಗಳಿಗೆ ಲೈಂಗಿಕ
ಕಿರುಕುಳದ ವಿಚಾರ ಇದುವರೆಗೂ ಗೊತ್ತಾಗಿಲ್ಲ. ಯಾರೂ ಈ ಬಗ್ಗೆ ದೂರು ನೀಡಿಲ್ಲ. ಮಾದಕದ್ರವ್ಯ ಸಾಗಣೆ ತಡೆಗಟ್ಟಲು ಕ್ರಮ ಹಾಗೂ ಕೈದಿಗಳನ್ನು ಆರೋಗ್ಯ ತಪಾಸಣೆಗೆ ಒಳಪಡಿಸುತ್ತಿರುತ್ತೇವೆ. ಕಾರಾಗೃಹದಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಯಾರೋ ಹೇಳಿದರೆಂಬ ಊಹೆಯ ಮೇಲೆ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದರು.

ಕ್ರಮ ಕೈಗೊಳ್ಳಬಹುದಿತ್ತಲ್ಲ: ಪರಪ್ಪನ ಅಗ್ರಹಾರದಲ್ಲಿ 4000 ಕೈದಿಗಳಿದ್ದಾರೆ. ಜೈಲು ಅಂದ ಮೇಲೆ ಮಾದಕ ದ್ರವ್ಯ ವ್ಯಸನಿಗಳು ಸೇರಿ ಕ್ರಿಮಿನಲ್‌ಗ‌ಳೇ ಇರುತ್ತಾರೆ. ಮಾದಕದ್ರವ್ಯ ಸಾಗಾಟ, ಜೈಲು ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ನಡೆಯುತ್ತಿರುತ್ತವೆ. ಅಧಿಕಾರಿ ಜೈಲು ವೀಕ್ಷಣೆಗೆ ತೆರಳಿದ್ದಾಗ ಅಕ್ರಮ ಚಟುವಟಿಕೆಗಳು ಕಂಡು ಬಂದಿದ್ದರೆ ತಪ್ಪಿತಸ್ಥರನ್ನು ಸಸ್ಪೆಂಡ್‌ ಮಾಡಬಹುದಿತ್ತಲ್ಲ, ಅವರಿಗೂ ಜವಾಬ್ದಾರಿಯಿದೆಯಲ್ಲವೇ? ಎಂದು ಪ್ರಶ್ನಿಸಿದರು.

ವರದಿ ದೊರೆತಿರಲಿಲ್ಲ: ರೂಪಾ ನೀಡಿರುವ ವರದಿ ಬುಧವಾರ ನನಗೆ ತಲುಪಿರಲಿಲ್ಲ. ಗುರುವಾರ ಕಚೇರಿಗೆ ಬಂದು ನೋಡಿದ ಬಳಿಕ ವರದಿಯ ಅಂಶಗಳನ್ನು ನೋಡಿದ್ದೇನೆ. ಅದರಲ್ಲಿ ನನ್ನ ವಿರುದ್ಧ ಮಾಡಿರುವ ಆರೋಪಕ್ಕೆ ಹೇಗೆ ಹಣ ಪಡೆದುಕೊಳ್ಳಲಾಗಿದೆ, ಯಾವ ರೀತಿಯ ನಡೆದಿದೆ ಎಂಬ ಸಾಕ್ಷ್ಯಗಳನ್ನೇ ನೀಡಿಲ್ಲ. ಊಹೆಯ ಮೇಲೆ ವರದಿ ನೀಡಿದ್ದಾರೆ. ಇದಕ್ಕೆ ಅವರೇ ಉತ್ತರ ನೀಡಲಿ ಎಂದು ಸವಾಲು ಹಾಕಿದರು.

ರೂಪಾ ಸಮರ್ಥನೆ: ಸತ್ಯನಾರಾಯಣರಾವ್‌ ಸವಾಲಿಗೆ ತನಿಖೆ ಆಗಲಿ ಎಂದು ಹೇಳಿರುವ ಡಿಐಜಿ ರೂಪ, ನಾನು
ಕೇಂದ್ರಕಾರಾಗೃಹಕ್ಕೆ ಭೇಟಿ ನೀಡಿದಾಗ ಕರೀಂಲಾಲ್‌ ತೆಲಗಿ ಅನಾಯಾಸವಾಗಿ ಓಡಾಡುತ್ತಿರುವುದು, ಶಶಿಕಲಾರಿಗೆ
ಪ್ರತ್ಯೇಕ ಅಡುಗೆಕೋಣೆ ವ್ಯವಸ್ಥೆ ಮಾಡಿಕೊಟ್ಟಿರುವುದನ್ನು ಕಣ್ಣಾರೆ ಕಂಡಿದ್ದೇನೆ. ಶಶಿಕಲಾರಿಗೆ ವಿಐಪಿ ಆತಿಥ್ಯ ನೀಡುವ
ಸಲುವಾಗಿ ಎರಡು ಕೋಟಿ ರೂ. ಲಂಚ ಪಡೆದುಕೊಂಡಿರುವ ಆರೋಪದ ಬಗ್ಗೆ ಖುದ್ದು ಡಿಜಿಪಿ ಅವರಿಗೆ ವರದಿ
ನೀಡಿದ್ದೇನೆ. ನಾನು ದಾಖಲೆ ಹಾಗೂ ಸಾಕ್ಷ್ಯ ಇಟ್ಟುಕೊಂಡೇ ವರದಿ ನೀಡಿದ್ದೇನೆಂದು ಸಮರ್ಥಿಸಿಕೊಂಡರು.

ಕಾರಾಗೃಹಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜೈಲು ಅಧಿಕಾರಿಗಳಿಂದ ವಿಡಿಯೋ ರೆಕಾರ್ಡ್‌ ಮಾಡಿಸಿದ್ದೆ. ಆದರೆ ಆ ವಿಡಿಯೋ ಇರುವ ಪೆನ್‌ಡ್ರೈವ್‌ ನನಗೆ ಎರಡು ದಿನಕ್ಕೆ ಕಳುಹಿಸಲಾಗಿತ್ತು. ಅದನ್ನೂ ನಾನು ಮತ್ತೆ ಪರಿಶೀಲನೆ ನಡೆಸಿಲ್ಲ. ಅದರಲ್ಲಿ ತೆಲಗಿಯ ಚಲನವಲನಗಳು ಹಾಗೂ ಕೈದಿಗಳ ಜೊತೆ ನಡೆಸಿದ ಸಂವಾದ ಅದರಲ್ಲಿತ್ತು. ಅಲ್ಲದೆ ಮುಂದಿನ ದಿನಗಳಲ್ಲಿ ವರದಿಯಲ್ಲಿ ಉಲ್ಲೇಖೀಸಿರುವ ಅಂಶಗಳ ಬಗೆಗಿನ ಸಿಸಿಟಿವಿ ಫ‌ೂಟೇಜ್‌ ಡಿಲೀಟ್‌ ಆಗಿದ್ದರೂ ಅಚ್ಚರಿಯಿಲ್ಲ. ಈ ಬಗ್ಗೆ ಸಾಕ್ಷ್ಯಾಧಾರಗಳೊಂದಿಗೆ ಇಲಾಖೆಯ ಉನ್ನತ ಅಧಿಕಾರಿಗಳಿಗೂ ವರದಿ ಕಳುಹಿಸಿಕೊಟ್ಟಿದ್ದೇನೆ ಎಂದು ತಿಳಿಸಿದರು.

ಡಿಐಜಿ ವಿರುದ್ಧ  ಪ್ರತಿಭಟನೆ
ಬೆಳಗಾವಿ/ಧಾರವಾಡ:
ಕೇಂದ್ರ ಕಾರಾಗೃಹ ಇಲಾಖೆ ಪೊಲೀಸ್‌ ಮಹಾನಿರ್ದೇಶಕ ಸತ್ಯನಾರಾ ಯಣರಾವ್‌ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿರುವ ಡಿಐಜಿ ಡಿ.ರೂಪಾ ಅವರ ವಿರುದ್ಧ ಬೆಳಗಾವಿಯ ಹಿಂಡಲಗಾ ಹಾಗೂ ಧಾರವಾಡದ
ಕೇಂದ್ರ ಕಾರಾಗೃಹದ ಸಿಬ್ಬಂದಿ ಹಾಗೂ ಕೈದಿಗಳು ಗುರುವಾರ ಏಕಾಏಕಿ ಪ್ರತಿಭಟನೆ ನಡೆಸಿದರು. ಒಂದು ಗಂಟೆಗೂ ಹೆಚ್ಚು ಕಾಲ ಜೈಲಿನೊಳಗೆ ಪ್ರತಿಭಟನೆ ನಡೆಸಿ, ಡಿ.ರೂಪಾ ಅವರು ಆರೋಪ ಮಾಡಿರುವುದನ್ನು ತೀವ್ರವಾಗಿ ಖಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next