ಹುಬ್ಬಳ್ಳಿ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿ ಸಂಭವಿಸಿದ್ದ ಇಂಡಿಗೋ ವಿಮಾನದ ಮುಂದಿನ ಟೈರ್ ಸ್ಫೋಟ ಘಟನೆಯನ್ನು ಡಿಜಿಸಿಎದವರು ಪರಿಶೀಲಿಸಿದ್ದು, ಈ ವಿಮಾನ ಯಾನಕ್ಕೆ ಸುರಕ್ಷಿತವಾಗಿದೆ ಎಂದು ಕ್ಲಿಯರೆನ್ಸ್ ನೀಡುವುದು ಬಾಕಿಯಿದ್ದು, ನಂತರವಷ್ಟೆ ಅದು ಹಾರಾಟ ನಡೆಸಲಿದೆ.
ಕಣ್ಣೂರಿನಿಂದ ಆಗಮಿಸಿದ್ದ ಇಂಡಿಗೋ ಎಟಿಆರ್ 6ಇ-7979 ವಿಮಾನದ ಟೈರ್ ಸ್ಫೋಟಗೊಂಡಿದ್ದು, ರನ್‌ವೇದಲ್ಲಿ ಚಕ್ರ ತೆರಚಿಕೊಂಡು ಹೋಗಿರುವ ಗುರುತು ಸಹ ಇದೆ. ಮಳೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಪೈಲಟ್‌ಗೆ ರನ್‌ವೇ ಸರಿಯಾಗಿ ಕಾಣಿಸಿರಲಿಕ್ಕಿಲ್ಲ. ಹೀಗಾಗಿ 700-800 ಮೀಟರ್ ಮುಂಚಿತವೇ ವಿಮಾನವನ್ನು ರನ್ ವೇಗೆ ಇಳಿಸಿರಬಹುದು.
ವಿಮಾನದ ಸಂಪೂರ್ಣ ಭಾರ ಮುಂದಿನ ಚಕ್ರದ ಮೇಲೆಯೇ ಬಿದ್ದಿದ್ದರಿಂದ ಟೈರ್ ಸ್ಫೋಟಗೊಂಡಿರಬಹುದು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿನ ಐಎಲ್‌ಎಸ್ ಸಮರ್ಪಕವಾಗಿ ಕಾರ್ಯ ನಿರ್ವಹಿಸದಿರುವುದು ಪದೇ ಪದೇ ಇಂತಹ ಘಟನೆಗಳು ನಡೆಯಲು ಕಾರಣವೆಂದು ಹೇಳಲಾಗುತ್ತಿದೆ.
ಇಂಡಿಗೋ ಕಂಪನಿಯ ತಂತ್ರಜ್ಞರು ಮಂಗಳವಾರ ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿ ವಿಮಾನದ ಸೊ#ಧೀಟಗೊಂಡಿದ್ದ ಟೈರ್ ಬದಲಿಸಿ ಹೊಸ ಟೈರ್ ಅಳವಡಿಸಿದ್ದಾರೆ. ಈಗ ಇಂಡಿಗೋದವರು ಈ ವಿಮಾನ ಹಾರಾಟ ನಡೆಸಲು ಡಿಜಿಸಿಎದಿಂದ ಯಾನಕ್ಕೆ ಸುರಕ್ಷಿತವೆಂಬ ಕ್ಲಿಯರೆನ್ಸ್ ಪಡೆಯುವುದು ಅವಶ್ಯವಾಗಿದೆ.
ಟೈರ್ ಸ್ಪೋಟಗೊಂಡ ವಿಮಾನವನ್ನು ರನ್‌ವೇದಿಂದ ಸೋಮವಾರ ರಾತ್ರಿಯೇ ತೆರವುಗೊಳಿಸಲಾಗಿದೆ. ಮಂಗಳವಾರ ಬೆಳಗ್ಗೆ ಎಂದಿನಂತೆ ವಿಮಾನಯಾನಗಳ ಸೇವೆ ಮುಂದುವರೆದಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರದೀಪ ಕುಮಾರ ಠಾಕ್ರೆ “ಉದಯವಾಣಿ’ಗೆ ತಿಳಿಸಿದರು.