Advertisement

ಭಕ್ತರ ಗಮನಕ್ಕೆ: ಧರ್ಮಸ್ಥಳ,ಕಟೀಲು,ಕುಕ್ಕೆ ದೇವಸ್ಥಾನ ವಾರಾಂತ್ಯ ಬಂದ್; ಡಿಸಿ ಆದೇಶದಲ್ಲೇನಿದೆ

05:08 PM Aug 04, 2021 | Nagendra Trasi |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಸರ್ಕಾರದ ನಿರ್ದೇಶನದಂತೆ ಎಲ್ಲಾ ಅವಶ್ಯಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿದ ನಂತರವೂ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆ ಆಗುತ್ತಿದ್ದು, ಈ ಹಂತದಲ್ಲಿಯೇ ಕಠಿನ ನಿರ್ಬಂಧ ಅನುಷ್ಠಾನಗೊಳಿಸದೇ ಇದ್ದಲ್ಲಿ ಸಂಭಾವ್ಯ 3ನೇ ಅಲೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಕಷ್ಟಸಾಧ್ಯವಾಗಲಿದೆ.

Advertisement

ಈ ಹಿನ್ನೆಲೆಯಲ್ಲಿ ಪ್ರಸ್ತುತ ವಿದ್ಯಮಾನಗಳನ್ನು ಅವಲೋಕಿಸಿ ಪ್ರತಿಷ್ಠಿತ ದೇವಾಲಯಗಳಾದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು, ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೊರ ರಾಜ್ಯಗಳಿಂದ ಹಾಗೂ ಹೊರ ಜಿಲ್ಲೆಗಳಿಂದ ಭಕ್ತಾದಿಗಳು ಬರುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನೂತನ ನಿರ್ಬಂಧಗಳನ್ನು ಹೊರಡಿಸಿರುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಮಾರ್ಗಸೂಚಿಯಲ್ಲಿ ಏನಿದೆ?

*ದಿನಾಂಕ 5-05-2021 ರಿಂದ 15-08-21ರವರೆಗೆ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಕಟೀಲು, ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳು ಭಕ್ತಾದಿಗಳಿಗೆ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ತೆರೆದಿರುತ್ತದೆ. ಈ ಸಂದರ್ಭದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ, ಅಗತ್ಯ ಕೋವಿಡ್ ನಿಯಂತ್ರಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಭಕ್ತಾದಿಗಳಿಗೆ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ತೀರ್ಥ ಪ್ರಸಾದ, ಸೇವೆಗಳು, ಅನ್ನಸಂತರ್ಪಣೆಗೆ ಅವಕಾಶವಿಲ್ಲ.

*ವಾರಾಂತ್ಯದಲ್ಲಿ (ಶನಿವಾರ-ಭಾನುವಾರ) ಭಕ್ತಾಧಿಗಳ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಹಾಗೂ ವಸತಿ ಗೃಹಗಳಲ್ಲಿ ತಂಗುವುದಾಗಲಿ ಅಥವಾ ದೇವರ ದರ್ಶನಕ್ಕೆ ಅವಕಾಶವಿಲ್ಲ.

Advertisement

* ಶನಿವಾರ ಮತ್ತು ಭಾನುವಾರಗಳಂದು ಎಲ್ಲಾ ರೀತಿಯ ಉತ್ಸವ/ಸೇವೆಗಳು, ತೀರ್ಥ, ಪ್ರಸಾದ, ಮುಡಿ ಸೇವೆ ವಸತಿಗಳನ್ನು ನಿರ್ಬಂಧಿಸಿ, ಅರ್ಚಕರುಗಳಿಂದ ಸಾಂಪ್ರದಾಯಿಕ ಪೂಜೆಗೆ ಮಾತ್ರ ಅವಕಾಶ ಕಲ್ಪಿಸಿದೆ.

* ವಾರಾಂತ್ಯದ ದಿನಗಳನ್ನು ಹೊರತುಪಡಿಸಿ (ಶನಿವಾರ, ಭಾನುವಾರ) ಉಳಿದ ದಿನಗಳಲ್ಲಿ ವಸತಿ ಗೃಹಗಳಲ್ಲಿ ತಂಗಲು ಬಯಸುವವರು 72 ಗಂಟೆಯೊಳಗೆ ಆರ್ ಟಿ ಪಿಸಿಆರ್ ಟೆಸ್ಟ್ ಮಾಡಿಸಿ, ನೆಗೆಟಿವ್ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರತಕ್ಕದ್ದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಹಾಗೂ ಕೋವಿಡ್ ಶಿಷ್ಟಾಚಾರ ನಿಯಮ ಪಾಲಿಸುವ ದೃಷ್ಟಿಯಿಂದ ಕೊಠಡಿಗಳಲ್ಲಿ ಕಡ್ಡಾಯವಾಗಿ ಹೆಚ್ಚುವರಿ ವ್ಯಕ್ತಿಗಳು ತಂಗಲು ಅವಕಾಶವಿರುವುದಿಲ್ಲ.

*ಎಲ್ಲಾ ಕೊಠಡಿಗಳನ್ನು ವಾಸ್ತವ್ಯಕ್ಕೆ ಮುಂದೆ ಸ್ಯಾನಿಟೈಸ್ ಮಾಡತಕ್ಕದ್ದು ಹಾಗೂ ಭಕ್ತಾದಿಗಳು ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸುವುದು.

Advertisement

Udayavani is now on Telegram. Click here to join our channel and stay updated with the latest news.

Next