Advertisement

ಅಭಿವೃದ್ಧಿಗೆ ಶಾಂತ ಚಳವಳಿಯೇ ಸಾಧನ

04:49 PM Sep 09, 2018 | Team Udayavani |

ರಾಯಚೂರು: ಅಭಿವೃದ್ಧಿ ಸಾಧಿಸಬೇಕಾದರೆ ಸರ್ಕಾರದೊಡನೆ ಸಂಘರ್ಷಕ್ಕಿಳಿಯುವ ಅಗತ್ಯವಿಲ್ಲ. ಶಾಂತ ಚಳವಳಿ ಮೂಲಕ ನಡೆಸುವ ಹೋರಾಟಗಳು ಪ್ರಗತಿಯ ಸಾಧನವಾಗಬಹುದು ಎಂದು ಹಿರಿಯ ಚಿಂತಕ ಪ್ರಸನ್ನ ಹೇಳಿದರು.

Advertisement

ಕನ್ನಡ ಸಾಹಿತ್ಯ ಪರಿಷತ್‌ನಿಂದ “ಉತ್ತರ ಕರ್ನಾಟಕದ ಅಭಿವೃದ್ಧಿ ಹೇಗಿರಬೇಕು’ ಎಂಬ ವಿಚಾರ ಕುರಿತು ಶುಕ್ರವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಂಕ್ರಿಟ್‌ ಕಟ್ಟಡ, ರಸ್ತೆಗಳಿಂದಲೇ ಅಭಿವೃದ್ಧಿ ಎಂಬ ಕಲ್ಪನೆಗೆ ಬಿದ್ದು ಅಭಿವೃದ್ಧಿ ದೃಷ್ಟಿಕೋನ ಸಂಕುಚಿತಗೊಳ್ಳುತ್ತಿದೆ. ಗುಡಿ ಕೈಗಾರಿಕೆ, ಕುಲಕಸುಬುಗಳೇ ಇಂದು ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಬೇಕು. ಪ್ರಗತಿಗೂ, ಜನರ ಭಾವನೆಗಳಿಗೂ
ಸಂಬಂಧ ಇಲ್ಲದಿದ್ದರೆ ಅದು ಅಭಿವೃದ್ಧಿ ಎನಿಸಿಕೊಳ್ಳುವುದಿಲ್ಲ. ಇಂದು ಕಾಂಕ್ರಿಟ್‌ ಕಟ್ಟಡಗಳು, ಫ್ಲೆ ಓವರ್‌ಗಳ ನಿರ್ಮಾಣವೇ ಅಭಿವೃದ್ಧಿ ಎನಿಸಿಕೊಳ್ಳುತ್ತಿರುವುದು ವಿಪರ್ಯಾಸ ಎಂದರು.

ಕೆಲ ವರ್ಗದವರು ತಾಂತ್ರಿಕ, ಯಾಂತ್ರಿಕ ಅಭಿವೃದ್ಧಿಯನ್ನೇ ದೊಡ್ಡದಾಗಿ ಬಿಂಬಿಸುತ್ತಿವೆ. ಎಲ್ಲರೂ ಅವರೊಟ್ಟಿಗೆ ಬರಲಿ
ಎಂದು ಹಂಬಲಿಸುತ್ತಿದ್ದಾರೆ. ಆದರೆ, ಅದನ್ನೇ ಯಾಕೆ ಅಭಿವೃದ್ಧಿ ಎಂದುಕೊಳ್ಳುತ್ತಿರಿ. ನಿಮ್ಮ ಹಳ್ಳಿ, ಗ್ರಾಮಗಳಲ್ಲಿನ ವೃತ್ತಿಗಳನ್ನೇ ಯಾಕೆ ವಿಸ್ತರಿಸುತ್ತಿಲ್ಲ. ಎಲ್ಲರೊಂದಿಗೆ ಓಡುವುದೇ ಸಾಧನೆಯಲ್ಲ. ಯಾರೋ ನಮ್ಮನ್ನು ಕರೆದರೆ ನಾವೇಕೆ ಹೋಗಬೇಕು. ನಮ್ಮ ಸ್ವಂತಿಕೆಯಲ್ಲಿ ಬಾಳಬೇಕು ಎಂದರು.

12ನೇ ಶತಮಾನದಲ್ಲಿ ಬಸವಣ್ಣ ಕಾಯಕ ಪ್ರಜ್ಞೆ ಮೂಡಿಸಿದ್ದರು. ಅವರೊಬ್ಬ ಅಸಾಧಾರಣ ಅಭಿವೃದ್ಧಿಯ ಹರಿಕಾರರು. ಕಾಯಕ ಮತ್ತು ಅಧ್ಯಾತ್ಮದ ಜತೆಗೆ ಸ್ವಾವಲಂಬಿ ಬದುಕು ರೂಪಿಸಿದ್ದರು. ಹೀಗಾಗಿಯೇ ಬಿಜ್ಜಳನ ರಾಜ್ಯ ಸುಭಿಕ್ಷೆಯಾಗಿತ್ತು. ಗಾಂಧೀಜಿ ಕೂಡ ಅದೇ ಸಿದ್ಧಾಂತ ಅನುಸರಿಸಿದ್ದರು. ನಾವು ನಮ್ಮ ಜವಾಬ್ದಾರಿ ಮರೆತು ಕೇವಲ ಸರ್ಕಾರದ ಕಡೆ ನೋಡುತ್ತೇವೆ. ಜನರ ತಲಾದಾಯ ಹೆಚ್ಚಾಗಿದೆ. ಅದರ ಜತೆಗೆ ಬಡವ ಬಲ್ಲಿದರ ನಡುವಿನ ಅಂತರವೂ ಹೆಚ್ಚಾಗಿದೆ. ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿಟ್ಟುಕೊಂಡು ಸಾಮಾಜಿಕ, ಸಾಂಸ್ಕೃತಿಕ ಚಳವಳಿ ಆರಂಭಿಸಬೇಕಿದೆ ಎಂದರು.

ಹೈ-ಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ| ರಜಾಕ್‌ ಉಸ್ತಾದ್‌ ಮಾತನಾಡಿ, ಎಚ್‌ಕೆಆರ್‌ಡಿಬಿಗೆ ನಾಲ್ಕು ವರ್ಷಗಳಲ್ಲಿ 4,300 ಕೋಟಿ ರೂ. ಅನುದಾನ ಬಂದಿದೆ. ಅದರಲ್ಲಿ 2 ಸಾವಿರ ಕೋಟಿ ರೂ. ರಸ್ತೆ ನಿರ್ಮಾಣಕ್ಕೆ ಖರ್ಚು ಮಾಡಿದರೆ, 300 ಕೋಟಿ ರೂ. ಕುರ್ಚಿಗಳ ಖರೀದಿಗೆ ಬಳಸಲಾಗಿದೆ. ಅಭಿವೃದ್ಧಿಗೆ ಸಾರ್ವಜನಿಕರ ಸಹಭಾಗಿತ್ವವೂ ಮುಖ್ಯ. ನೀವು ಮಾಡಿ ಎಂದು ಸಲಹೆ ನೀಡುವವರೇ ಹೆಚ್ಚಾಗಿದ್ದಾರೆ. ಯುವಕರಿಗೆ ತಮ್ಮ ಶ್ರಮ ಯಾವ ಉದ್ದೇಶಕ್ಕೆ ಬಳಕೆಯಾಗುತ್ತಿದೆ ಎನ್ನುವ ಪ್ರಜ್ಞೆ ಇರಬೇಕು. ಯಾರಿಗೆ ಅನಿವಾರ್ಯತೆ ಸೃಷ್ಟಿಯಾಗುತ್ತದೆಯೋ ಅವರು ಮಾತ್ರ ಹೋರಾಟ, ಚಳವಳಿಗೆ ಬರುತ್ತಾರೆ. ಆದರೆ, ಸಮಗ್ರ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಲೇಬೇಕು ಎಂದರು.

Advertisement

ಕಸಾಪ ಜಿಲ್ಲಾಧ್ಯಕ್ಷ ಡಾ| ಬಸವಪ್ರಭು ಪಾಟೀಲ ಬೆಟ್ಟದೂರು, ಕಾಲೇಜಿನ ಪ್ರಾಚಾರ್ಯ ಡಾ| ದಸ್ತಗಿರಸಾಬ್‌ ದಿನ್ನಿ, ಸಾಹಿತಿ ಬಾಬು ಭಂಡಾರಿಗಲ್‌, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಸವರಾಜ ನಾಗಡದಿನ್ನಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next