“ದುನಿಯಾ’ ರಶ್ಮಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು ಬರೋಬ್ಬರಿ ಒಂದು ದಶಕ ಕಳೆದಿದೆ. ಈ ಹತ್ತು ವರ್ಷಗಳಲ್ಲಿ ರಶ್ಮಿ ಗೆಲುವಿಗಿಂತ ಸೋಲು ಕಂಡಿದ್ದೇ ಹೆಚ್ಚು. ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಲೇ ಬಂದ ರಶ್ಮಿ, ಆರಂಭದ ಬೆರಳೆಣಿಕೆ ವರ್ಷಗಳಲ್ಲಂತೂ ಸ್ವಲ್ಪ ಬಿಜಿ ಇದ್ದದ್ದು ನಿಜ. ಆದರೆ, ಅದೇನಾಯ್ತೋ ಏನೋ, ಇದ್ದಕ್ಕಿದ್ದಂತೆಯೇ ರಶ್ಮಿ ಗಾಂಧಿನಗರದಿಂದ ಸ್ವಲ್ಪ ದೂರ ಉಳಿದರು. ಹಾಗಂತ, ಚಿತ್ರರಂಗ ಬಿಡಲಿಲ್ಲ.
ಒಂದು ಗ್ಯಾಪ್ ಪಡೆದಿದ್ದ ರಶ್ಮಿಗೆ ಹಲವು ಕಥೆಗಳು ಹುಡುಕಿ ಹೋದವು. ಅತ್ತ ಸಿನಿಮಾ ಬಿಡಲಾಗದೆ, ಸುಮ್ಮನೆಯೂ ಇರಲಾರದೆ ಒಂದಷ್ಟು ಕಥೆಗಳನ್ನು ಕೇಳುತ್ತಾ ಹೋದರು. ಹಾಗೆ ಕೇಳಿದ ಕಥೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು, ಸದ್ದಿಲ್ಲದೆಯೇ ಆ ಚಿತ್ರವನ್ನೂ ಪೂರ್ಣಗೊಳಿಸಿದ್ದಾರೆ ರಶ್ಮಿ. ಹೌದು, “ದುನಿಯಾ’ ರಶ್ಮಿ ಸದ್ದಿಲ್ಲದೆಯೇ ಒಂದು ಸಿನಿಮಾ ಮುಗಿಸಿದ್ದಾರೆ. ಆ ಚಿತ್ರದ ಹೆಸರು “ಕಾರ್ನಿ’.
ಈ ಚಿತ್ರವನ್ನು ವಿನಿ (ವಿನೋದ್ ಕುಮಾರ್) ನಿರ್ದೇಶಿಸಿದ್ದಾರೆ. ಈ ಹಿಂದೆ “ಲೈಫ್ ಸೂಪರ್’ ನಿರ್ದೇಶಿಸಿದ್ದ ವಿನಿ, “ಕಾರ್ನಿ’ಗೆ ಕಥೆ, ಚಿತ್ರಕಥೆಯನ್ನೂ ಬರೆದಿದ್ದಾರೆ. ಅಂದಹಾಗೆ, ಇಲ್ಲಿ ರಶ್ಮಿಯೇ ಹೈಲೆಟ್. ಹಾಗಂತ ನಾಯಕರಿಲ್ಲವೆ ಅಂದುಕೊಳ್ಳುವಂತಿಲ್ಲ. ಚಿತ್ರದಲ್ಲಿ ನಿರಂತ್ ಎಂಬ ಹೊಸ ಹುಡುಗ ನೆಗೆಟಿವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಇಲ್ಲಿ ರಶ್ಮಿ ಅವರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಹೊಸಬರೇ.
ಎಲ್ಲಾ ಸರಿ, ಏನಿದು “ಕಾರ್ನಿ’? “ಇದೊಂದು ದೇವಿಯ ಪವರ್‌ಫುಲ್ ಆಯುಧದ ಹೆಸರು. ದುರ್ಗಾದೇವಿ ಕೈಯಲ್ಲಿರುವ ಆಯುಧಕ್ಕೆ “ಕಾರ್ನಿ’ ಎನ್ನಲಾಗುತ್ತದೆ. ಅದು ಬಾಣಕ್ಕಿಂತಲೂ ಹರಿತವಾದ ಆಯುಧ. ಇಲ್ಲಿ ರಶ್ಮಿ ಆ “ಕಾರ್ನಿ’ ಮೂಲಕ ಯಾರನ್ನು ಸಂಹರಿಸುತ್ತಾರೆ ಎಂಬುದು ಸಸ್ಪನ್ಸ್. ಇದು ಸಸ್ಪೆನ್ಸ್ ಥ್ರಿಲ್ಲರ್ ಕಥೆ. ಇದರೊಂದಿಗೆ ವಿಶೇಷ ತಾಂತ್ರಿಕತೆ ಸ್ಪರ್ಶ ಚಿತ್ರಕ್ಕಿದೆ. ಚಿಕ್ಕಮಗಳೂರು ಸುತ್ತಮುತ್ತ ಸಾಗುವ ಈ ಕಥೆ, ಬಹುತೇಕ ರಾತ್ರಿಯಲ್ಲೇ ನಡೆಯಲಿದೆ ಎಂಬುದು ನಿರ್ದೇಶಕರ ಮಾತು.
ರಶ್ಮಿಗೆ ಇಲ್ಲೊಂದು ಹೊಸಬಗೆಯ ಪಾತ್ರ ಸಿಕ್ಕಿದೆಯಂತೆ. ಆ ಬಗ್ಗೆ ಹೇಳಿಕೊಳ್ಳುವ ರಶ್ಮಿ, “ನಾನಿಲ್ಲಿ ಕಾದಂಬರಿಗಾರ್ತಿಯಾಗಿ ಕಾಣಿಸಿಕೊಂಡಿದ್ದೇನೆ. ನಾಲ್ವರು ಹುಡುಗಿಯರ ಜೊತೆಗೆ ನಾನು ಕೂಡ ಒಂದು ಕಡೆ ಪಯಣ ಬೆಳೆಸುತ್ತೇನೆ. ಅಲ್ಲಿ, ನನ್ನೊಂದಿಗಿನ ನಾಲ್ವರು ಹುಡುಗಿಯರು ಕಾಣೆಯಾಗುತ್ತಾರೆ. ಅವರೆಲ್ಲಾ ಹೇಗೆ ಮಿಸ್ ಆದರು ಎಂಬುದು ಸಸ್ಪೆನ್ಸ್. “ಕಾರ್ನಿ’ ವಿಶೇಷವೆಂದರೆ, 12 ರಾತ್ರಿ ಚಿತ್ರೀಕರಣವಾಗಿದ್ದು, ಸಂಜೆ 5 ರಿಂದ ಮುಂಜಾನೆ 6 ರವರೆಗೆ ಶೂಟಿಂಗ್ ಆಗಿದ್ದು ವಿಶೇಷ’ ಎನ್ನುತ್ತಾರೆ ರಶ್ಮಿ.
ಕನ್ನಡದಲ್ಲಿ ಸಾಕಷ್ಟು ಮರ್ಡರ್ ಮಿಸ್ಟ್ರಿ, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಬಂದಿವೆ. ಆ ಜಾನರ್ ಸಿನಿಮಾ ಇದಾಗಿದ್ದರೂ, ತಾಂತ್ರಿಕತೆಯಲ್ಲಿ ಹೊಸತನವಿದೆ. ಪೋಸ್ಟರ್ ವಿನ್ಯಾಸದಿಂದ ಹಿಡಿದು, ಚಿತ್ರದ ಮೇಕಿಂಗ್, ಹಿನ್ನೆಲೆ ಸಂಗೀತ ಕೆಲಸ ಹಾಲಿವುಡ್ ಚಿತ್ರವನ್ನು ನೆನಪಿಸುವಂತೆ ಮಾಡುವ ಪ್ರಯತ್ನ ಆಗುತ್ತಿದೆ ಎನ್ನುವುದು ಚಿತ್ರತಂಡ ಮಾತು. ಸದ್ಯಕ್ಕೆ ಟ್ರೇಲರ್ ರೆಡಿಯಾಗುತ್ತಿದ್ದು, ಇಷ್ಟರಲ್ಲೇ ಬಿಡುಗಡೆ ಮಾಡುವ ಯೋಚನೆ ತಂಡಕ್ಕಿದೆ. ಗೋಕುಲ್ ಎಂಟರ್‌ಟೈನರ್ ಬ್ಯಾನರ್‌ನಲ್ಲಿ ಗೋವಿಂದರಾಜ್ ಈ ಚಿತ್ರ ನಿರ್ಮಿಸಿದ್ದಾರೆ. ಅರಿಂದಮ್ ಗೋಸಾಮಿ ಸಂಗೀತವಿದೆ. ಸೂರ್ಯೋದಯ ಅವರ ಛಾಯಗ್ರಹಣವಿದೆ.