Advertisement
ಪುರಭವನದ ಬಳಿ ಅಂಡರ್‌ಪಾಸ್ ಕಾಮಗಾರಿ ಆರಂಭವಾಗಿ ವರ್ಷ ಕಳೆದಿದೆ. ಕಾಮಗಾರಿ ಕುಂಟುತ್ತಾ ಸಾಗುತ್ತಿದೆ. ಇದೇ ರೀತಿಯಾಗಿ ಕಾಮಗಾರಿ ಮುಂದುವರಿದರೆ ಅದು ಪೂರ್ಣಗೊಳ್ಳಲು ಇನ್ನೂ ಕೆಲವು ತಿಂಗಳು ಬೇಕಾಗಬಹುದು. ಕಾಮಗಾರಿಯಿಂದಾಗಿ ಪುರಭವನ ಮುಂಭಾಗದಲ್ಲಿ ನಳನಳಿಸುತ್ತಿದ್ದ ಉದ್ಯಾನವನ ಕೂಡ ತನ್ನ ಸ್ವರೂಪವನ್ನು ಕಳೆದುಕೊಂಡು ಹಾಳುಕೊಂಪೆಯಂತಾಗಿದೆ. ಇದೇ ಕಾಮಗಾರಿ ಯಿಂದಾಗಿ ಲೇಡಿಗೋಶನ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿದೆ. ಕ್ಲಾಕ್‌ಟವರ್‌ನಿಂದ ಎ.ಬಿ. ಶೆಟ್ಟಿ ವೃತ್ತದವರೆಗಿನ ರಸ್ತೆಯನ್ನು ಏಕಮುಖ ಸಂಚಾರ ಮಾಡಿರುವುದರಿಂದ ಲೇಡಿಗೋಶನ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಿದೆ. ಆಗಾಗ ಟ್ರಾಫಿಕ್ ಜಾಮ್ ತಲೆದೋರುತ್ತಿದೆ. ಪಕ್ಕದಲ್ಲೇ ಮಾರುಕಟ್ಟೆ ರಸ್ತೆಯನ್ನು ಕಾಮಗಾರಿಗೆ ಅಗೆದು ಹಾಕಲಾಗಿದೆ. ರಾವ್ ಆ್ಯಂಡ್ ರಾವ್ ಸರ್ಕಲ್‌ನಿಂದ ಕ್ಲಾಕ್‌ಟವರ್‌ವರೆಗೆ ಫುಟ್‌ಪಾತ್ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿದ್ದು, ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸಿದೆ. ಮಾರ್ಗನ್ಸ್‌ಗೆಟ್, ಮಂಗಳಾದೇವಿ ರಸ್ತೆಯನ್ನು ಸ್ಮಾರ್ಟ್‌ಸಿಟಿ ಕಾಮಗಾರಿಗೆಂದು ಅಗೆಯಲಾಗಿದೆ.
Related Articles
Advertisement
ಇನ್ನೊಂದು ಸಮಸ್ಯೆಯೆಂದರೆ ಕಾಮಗಾರಿ ಪೂರ್ಣಗೊಂಡ ಬೆನ್ನಲ್ಲೇ ಮತ್ತೆ ಆ ರಸ್ತೆಯನ್ನು ಅಗೆಯುವುದು ಬಹುತೇಕ ಕಡೆಗಳಲ್ಲಿ ಕಂಡುಬರುತ್ತಿದೆ. ಇದರಿಂದ ಮತ್ತೆ ಸಂಚಾರಕ್ಕೆ ಅಡಚಣೆಗಳಾಗುತ್ತದೆ. ಆದುದರಿಂದ ಕಾಮಗಾರಿ ನಡೆಯುವ ಸಂದರ್ಭದಲ್ಲೇ ಆ ರಸ್ತೆಗೆ ಸಂಬಂಧಪಟ್ಟಂತೆ ಎಲ್ಲ ಕೆಲಸಗಳನ್ನು ಪೂರ್ತಿಗೊಳಿಸುವ ನಿಟ್ಟಿನಲ್ಲಿ ಸ್ಮಾರ್ಟ್‌ಸಿಟಿ ಕಂಪೆನಿ ಹಾಗೂ ಪಾಲಿಕೆ ನಿಗಾ ವಹಿಸುವುದು ಅಗತ್ಯ.
-ಸಂ.