ಸುಳ್ಯ: ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬಾಳಿಲ ಗ್ರಾಮದ ಕಾಂಚೋಡು ಕೆರೆಯ ಅಭಿವೃದ್ಧಿ ಕಾರ್ಯ ನಡೆಸಲಾಗಿದ್ದು, ಮಹಿಳಾ ಕಾಯಕೋತ್ಸವದಲ್ಲಿ ನಡೆದ ಅಭಿವೃದ್ಧಿ ಕಾರ್ಯದಲ್ಲಿ ಮುಪ್ಪೇರ್ಯದ ಸುಕೃತಿ ಮಹಿಳಾ ಕಾಯಕೋತ್ಸವ ತಂಡ ಕೆಲಸ ನಿರ್ವಹಿಸಿದ್ದಾರೆ. ಹೂಳುತುಂಬಿದ ಸ್ಥಿತಿಯಲ್ಲಿದ್ದ ಕಾಂಚೋಡು ಕೆರೆಗೆ ಮರುಜೀವ ನೀಡುವ ಕಾರ್ಯ ಇದೀಗ ನಡೆದಿದೆ.
ಸುಮಾರು 0.23 ಎಕ್ರೆ ವಿಸ್ತೀರ್ಣ ಹೊಂದಿರುವ ಈ ಕೆರೆಯು ವಿವಿಧ ಕಾರಣಗಳಿಂದ ಹೂಳು ತುಂಬಿ ನೀರಿನ ಮೂಲ ಬತ್ತುವ ಸ್ಥಿತಿಯಲ್ಲಿತ್ತು. ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಸ್ಥಾನ ಹಾಗೂ ಅಲ್ಲಿನ ತೋಟ, ಸ್ಥಳೀಯ ಕುಟುಂಬಗಳಿಗೆ ಕುಡಿಯುವ ನೀರಿನ ಬಳಕೆಗೆ ಈ ಕೆರೆ ಬಳಕೆಯಾಗುತ್ತಿತ್ತು ಎನ್ನುತ್ತಾರೆ ಸ್ಥಳೀಯರು. ನರೇಗಾ ಯೋಜನೆಯಡಿ ಸುಕೃತಿ ಮಹಿಳಾ ಕಾಯಕೋತ್ಸವ ತಂಡ ಯೋಜನೆಯನ್ನು ಕಾರ್ಯ ರೂಪಕ್ಕಿಳಿಸಿ ಹಾರೆ, ಪಿಕ್ಕಾಸು ಹಿಡಿದು ಕೆಲಸ ನಿರ್ವಹಿಸಿದೆ. ಸುಮಾರು 12-15 ಮಂದಿ ಮಹಿಳೆಯರು ದುಡಿದಿದ್ದಾರೆ.
ಹರಿಣಾಕ್ಷಿ ಬರೆಮೇಲು, ತ್ರಿವೇಣಿ ವಿಶ್ವೇಶ್ವರ, ವಿದ್ಯಾ ಬಿ.ಎಲ್., ಸುಲೋಚನಾ, ಜಾಹ್ನವಿ ಕಾಂಚೋಡು, ಪುಷ್ಪಲತಾ ಬಿ.ಎನ್., ಸರೋಜ ರೈ, ನಳಿನಿ ಬಿ., ಶೀಲಾವತಿ ಬಿ., ನಯನಾ, ವಿಜಯ, ಮಂಜುಳಾ ಎಸ್., ಸೀತಾಲಕ್ಷ್ಮೀ, ಜಯಶ್ರೀ, ಪ್ರೇಮಲತಾ, ಪುಷ್ಪಲತಾ ಎಂ., ಲಲಿತಾ ಸಿ. ತಂಡದಲ್ಲಿದ್ದ ಸದಸ್ಯರು. ದೊಡ್ಡ ಕೆರೆಯೂ ಅಭಿವೃದ್ಧಿ ಇದೇ ಕೆರೆಯ ಪಕ್ಕದಲ್ಲಿ ಇನ್ನೊಂದು ದೊಡ್ಡ ಕೆರೆಯಿದ್ದು ಕೃಷಿ ಸಹಿತ ಇತರ ಉಪಯೋಗಕ್ಕೆ ನೀರು ಸರಬರಾಜಾಗುತ್ತಿದೆ. ಹೂಳು ತುಂಬಿರುವ ಈ ಕೆರೆಯನ್ನೂ ಖಾತರಿ ಯೋಜನೆಯಡಿ ಅಭಿವೃದ್ಧಿ ಪಡಿಸುವ ಕಾರ್ಯ ಆರಂಭವಾಗಿದೆ.
ಕಾರ್ಯ ಸಾಗುತ್ತಿದೆ
ಹೂಳು ತುಂಬಿದ ಕಾಂಚೋಡು ಕೆರೆಯನ್ನು ಮಹಿಳಾ ತಂಡದ ಮುಖಾಂತರ ನರೇಗಾ ಯೋಜನೆಯಡಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಯಿತು. ಇದೀಗ ಸಣ್ಣ ಕೆರೆಯ ಹೂಳು ತೆಗೆದು ಶುಭ್ರವಾಗಿದ್ದು ಇದರ ಸನಿಹದ ದೊಡ್ಡ ಕೆರೆಯ ಹೂಳೆತ್ತುವಿಕೆಯ ಕಾರ್ಯ ಸಾಗುತ್ತಿದೆ.
–ಹೂವಪ್ಪ ಗೌಡ, ಪಿಡಿಒ, ಬಾಳಿಲ ಗ್ರಾ.ಪಂ.
ಯಶಸ್ಸು ಲಭಿಸಿದೆ
ತೋಡಿನ ಹೂಳೆತ್ತುವಿಕೆ, ಅಡಿಕೆ ಗುಂಡಿ ತೆಗೆದು ಅನುಭವ ಹೊಂದಿದ್ದ ನಮ್ಮ ಮಹಿಳಾ ತಂಡ ಕೆರೆಯ ಹೂಳೆತ್ತುವಿಕೆಯ ಕೆಲಸದಲ್ಲಿ ತೊಡಗಿಕೊಂಡದ್ದು ಇದೇ ಮೊದಲು. ಪ್ರಾರಂಭದಲ್ಲಿ ಕೆಲಸ ತುಸು ತ್ರಾಸದಾಯಕ ವಾದರೂ ತಂಡದ ಮಹಿಳೆಯರೆಲ್ಲರೂ ಖುಷಿಯಿಂದಲೇ ತೊಡಗಿಸಿಕೊಂಡ ಪರಿಣಾಮ ಯಶಸ್ಸು ಗಳಿಸುವಂತಾಯಿತು.
–ಹರಿಣಾಕ್ಷಿ ಬಿ., ತಂಡದ ಸದಸ್ಯ