ದೇವನಹಳ್ಳಿ: ಗ್ರಾಮೀಣ ರಸ್ತೆಗಳು ಚೆನ್ನಾಗಿದ್ದರೆ ಮಾತ್ರ ಗ್ರಾಮಗಳು ಅಭಿವೃದ್ಧಿ ಸಾಧ್ಯ. ರಸ್ತೆಗಳ ಅಭಿವೃದ್ಧಿಗೆ ಇನ್ನು ಹೆಚ್ಚಿನ ಅನುದಾನ ತರಲಾಗುವುದು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು. ತಾಲೂಕಿನ ಚನ್ನರಾಯ ಪಟ್ಟಣ ಹೋಬಳಿ ಹ್ಯಾಡಾಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಹಲವು ಕಾಮಗಾರಿಗಳಿಗೆ ಚಾಲನೆ: ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು. ಹ್ಯಾಡಾಳ, ವರದೇನಹಳ್ಳಿ, ಬಾಳೇಪುರ, ಬಿದಲಪುರ, ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುತ್ತಿದೆ. ಚನ್ನರಾಯ ಪಟ್ಟಣದಲ್ಲಿ ಶಾಸಕರ ಅನುದಾನದಲ್ಲಿ ಬಸ್ ತಂಗುದಾಣ, ನಿರ್ಮಾಣ ಹಾಗೂ ಜೊನ್ನಹಳ್ಳಿಯ ಹತ್ತಿರ ಬಸ್ ತಂಗುದಾಣ, ದೊಡ್ಡ ಕುರುಬರ ಹಳ್ಳಿ, ಕಗ್ಗಲ ಹಳ್ಳಿ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆ, ಶಾಸಕರ ಅನುದಾನದಲ್ಲಿ ನಲ್ಲೂರು ಮಾರುತಿ ಪ್ರೌಡಶಾಲೆಗೆ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.
ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಿ: ಗ್ರಾಮೀಣರ ಸಂಚಾರ ಹಾಗೂ ಕೃಷಿ ಉತ್ಪನ್ನಗಳ ಸಾಗಣೆ ಸುಗಮವಾಗಿರಲಿ ಎಂದು ರಸ್ತೆ ಅಭಿವೃದ್ಧಿಗೊಳಿಸಲಾಗುತ್ತಿದೆ. ಕಾಮಗಾರಿ ಗುಣಮಟ್ಟದಲ್ಲಿ ರಾಜೀ ಇಲ್ಲ. ಸ್ಥಳೀಯರು ಎದುರಿಗಿದ್ದು, ಗುಣಮಟ್ಟದ ಕೆಲಸ ಮಾಡಿಸಿಕೊಳ್ಳಬೇಕು. ಸಿಮೆಂಟ್ ಹಾಗೂ ಇತರೆ ಸಾಮಾಗ್ರಿಗಳನ್ನು ಸ್ಥಳೀಯರು ಪರಿಶೀಲಿಸಬೇಕು.
ಇದರಿಂದ ಸರ್ಕಾರದ ಅನುದಾನದ ಬಳಕೆ ಉಪಯುಕ್ತವಾಗುತ್ತದೆ. ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದಾಗ ಗ್ರಾಮಸ್ಥರು ಕಾಮಗಾರಿಯ ಬಗ್ಗೆ ಗುತ್ತಿಗೆ ದಾರರನ್ನು ಪ್ರಶ್ನಿಸಬೇಕು. ರಸ್ತೆಯಲ್ಲಿ ನೀರು ನಿಲ್ಲದಂತೆ ಇಳಿಜಾರು ಇರುವಂತೆ ನೋಡಿಕೊಳ್ಳಬೇಕು. ಮೈತ್ರಿ ಸರ್ಕಾರದಲ್ಲಿ ಹೆಚ್ಚಿನ ಅನುದಾನ ತರಲು ಶ್ರಮಿಸಲಾಗುತ್ತಿದೆ ಎಂದು ಹೇಳಿದರು.
ಮೇವಿನ ಕೊರೆತೆಯಾಗಬಾರದು: ಮೇವಿನ ಕೊರತೆ ಆಗದಂತೆ ಪಶು ಪಾಲನೆ ಇಲಾಖೆಯಿಂದ 120 ಟನ್‌ಮೇವು ಬಂದಿದ್ದು, ಇನ್ನೂ 100 ಟನ್ ಬರಲಿದೆ. ಮೇವಿನ ಸಮಸ್ಯೆ ಇರುವಲ್ಲಿಗೆ ಪೂರೈಕೆಯಾಗುವಂತೆ ನೋಡಿಕೊಳ್ಳಲಾಗುವುದು. ಬರಗಾಲ ಇದ್ದರೂ ಟ್ಯಾಂಕರ್ ಮತ್ತು ಖಾಸಗಿ ಬೋರ್‌ವೆಲ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಜಿಪಂ ಸದಸ್ಯ ಲಕ್ಷ್ಮೀ ನಾರಾಯಣ್, ಗ್ರಾಪಂ ಅಧ್ಯಕ್ಷೆ ಮಂಜುಳಾ, ಪಿಕಾಡ್ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಮಾಜಿ ಅಧ್ಯಕ್ಷ ಆರ್ ಮುನೇಗೌಡ, ಚನ್ನರಾಯ ಪಟ್ಟಣ ಹೋಬಳಿ ಜೆಡಿಎಸ್ ಅಧ್ಯಕ್ಷ ಮುನಿರಾಜು, ತಾಪಂ ಸದಸ್ಯ ವೆಂಕಟೇಶ್, ಚನ್ನರಾಯ ಪಟ್ಟಣ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷ ಶಿವಕುಮಾರ್, ಎಪಿಎಮ್‌ಸಿ ನಿರ್ದೇಶಕ ಜಯರಾಮೇಗೌಡ, ಗ್ರಾಪಂ ಸದಸ್ಯರು, ಮುಖಂಡರು ಇದ್ದರು.