ವಿಜಯಪುರ: 30 ವರ್ಷಗಳ ಹಿಂದೆ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರ ಆಶೀರ್ವಾದದಿಂದ ದೀಕ್ಷೆ ಸ್ವೀಕರಿಸಿ ಮಠವನ್ನು ಕಟ್ಟಿ ಬೆಳೆಸಿದ್ದೇನೆ. ಮಠದ ಉತ್ತರಾಧಿತ್ವಕ್ಕಾಗಿ ಸೂಕ್ತ ವಟುವನ್ನು ಆಯ್ಕೆ ಮಾಡಿ ಭಕ್ತರ ಮನತಣಿಸುವ ಕಾರ್ಯವಾಗಬೇಕಿದೆ. ಭಕ್ತರ ಸಹಕಾರವು ಶ್ರೀಮಠಕ್ಕೆ ದೊರೆತು ಶಿಕ್ಷಣ ಸಂಸ್ಥೆ, ಅನಾಥಾಲಯಗಳ ನಿರ್ಮಾಣ ಕಾರ್ಯವಾಗಬೇಕಿದೆ ಎಂದು ಶ್ರೀ ಬಸವಕಲ್ಯಾಣ ಮಠಾಧ್ಯಕ್ಷ ಶ್ರೀ ಮಹದೇವ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಮೇಲೂರು ರಸ್ತೆಯಲ್ಲಿರುವ ಶ್ರೀ ಬಸವಕಲ್ಯಾಣ ಮಠದ ಸಭಾಂಗಣದಲ್ಲಿ ಬಸವಲೋಕದ ವತಿಯಿಂದ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಚಿಂತನಗೋಷ್ಠಿ, ನೂತನ ಉತ್ತರಾಧಿಕಾರಿ ನೇಮಕ ಕುರಿತಂತೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಉತ್ತಾರಾಧಿಕಾರಿ ವಟು ನವೀನ್‌ದೇವರು ಮಾತನಾಡಿ, ವೀರಶೈವ ಧರ್ಮದ ಆಚರಣೆಗಳು ಯುವಪೀಳಿಗೆಗೆ ಪ್ರಸಾರವಾಗಬೇಕು. ಜಾತ್ಯಾತೀತವಾಗಿ ಸಮಾಜೋಪಯೋಗಿ ಕಲ್ಯಾಣ ಕಾರ್ಯಗಳ ಏಳಿಗೆಗೆ ಕಾರ್ಯಯೋಜನೆ ರೂಪಿಸಿ ಗುರುಗಳ ಮಾರ್ಗದರ್ಶನದಲ್ಲಿ ನಡೆಯಬೇಕಿದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಸಮಾಜದ ಏಳಿಗೆಯಲ್ಲಿ ಮಠಮಾನ್ಯಗಳ ಕಾರ್ಯವು ಶ್ಲಾಘನೀಯವಾದುದು.
ಬಡವರು, ನೊಂದವರು, ನಿರ್ಗತಿಕರಿಗೆ ಅಸನವಸನಗಳ ದಾಸೋಹವನ್ನಿತ್ತು ಸರ್ಕಾರಗಳು ಮಾಡುವ ಕಾರ್ಯಗಳಿಗೆ ಮಿಗಿಲಾಗಿ ಮಠಗಳು ಕಾರ್ಯನಿರ್ವಹಿಸುತ್ತಿವೆ. ಧರ್ಮಪ್ರಚಾರ, ಶೈಕ್ಷಣಿಕ ಮತ್ತು ಸಾಮಾಜಿಕ ಏಳಿಗೆಯು ಮಠಗಳ ಗುರುಗಳ ಕಾಣಿಕೆಯಂತಾಗಬೇಕು ಎಂದು ತಿಳಿಸಿದರು.
ಅಕ್ಕ ಬಳಗ ಸೇವಾಟ್ರಸ್ಟ್‌ನ ಉಪಾಧ್ಯಕ್ಷೆ ಕಾಮಾಕ್ಷಮ್ಮ, ರಾಷ್ಟ್ರೀಯ ಯುವ ಯೋಜನೆಯ ರಾಜ್ಯ ಸಂಯೋಜಕ ವಿ.ಪ್ರಶಾಂತ್, ಬಸವರಾಜು, ವಿ.ಎಂ.ಕಿಶೋರ್‌ಕುಮಾರ್ ಮತ್ತಿತರರು ಮಾತನಾಡಿದರು. ಶ್ರೀಮಠದ ಕಾರ್ಯದರ್ಶಿ ಜಯಕುಮಾರ್, ನಿವೃತ್ತಶಿಕ್ಷಕಿ ಸಂಪಂಗಮ್ಮ, ದ್ರಾûಾಯಿಣಮ್ಮ, ಶಿವಸ್ವಾಮಿ, ಹೊಸಹುಡ್ಯ, ಕೊಳ್ಳೆಗಾಲ, ವಿಜಯಪುರ ಮತ್ತಿತರ ಗ್ರಾಮಗಳ ಭಕ್ತರಿದ್ದರು.