ಕಾರವಾರ/ಶಿರಸಿ: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಶಾಲಾ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ ಎಂದು ಶಿರಸಿ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದೇವರಾಜ ಹಿತ್ತಲಕೊಪ್ಪ ಹೇಳಿದರು.
ಶಿರಸಿ ತಾಲೂಕಿನಲ್ಲಿ ಉದ್ಯೋಗ ಖಾತ್ರಿಯಡಿ ಕೈಗೊಂಡ ಶಾಲಾ ಅಭಿವೃದ್ಧಿ ಕಾರ್ಯ ವೀಕ್ಷಿಸಿ ಅವರು ಮಾಹಿತಿ ನೀಡಿದರು. ಉದ್ಯೋಗ ಖಾತ್ರಿ ಕಾಮಗಾರಿಗಳಲ್ಲಿ ಶಾಲಾ ಶೌಚಾಲಯ, ಕಾಂಪೌಂಡ್, ಭೋಜನಾಲಯ, ಅಡುಗೆ ಕೋಣೆ, ಆಟದ ಮೈದಾನ ಇತ್ಯಾದಿ ಕಾಮಗಾರಿ ಕೈಗೊಳ್ಳಲು ಅವಕಾಶ ಇದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶದ ಜೊತೆಗೆ ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿ ಕೈಗೊಂಡು ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಮಾರ್ಪಡಿಸುವ ಗುರಿ ಇದೆ. ಶಾಲಾ ಸಮಗ್ರ ಅಭಿವೃದ್ಧಿಯಡಿ ಶಾಲಾ ಕಾಂಪೌಂಡ್ ನಿರ್ಮಾಣಕ್ಕೆ 3,20,000 ರೂ. ಅಂದಾಜು ವೆಚ್ಚ, ಶಾಲಾ ಪಿಂಕ್ ಶೌಚಾಲಯಕ್ಕೆ 6,00,000 ರೂ, ಶಾಲಾ ಶೌಚಾಲಯಕ್ಕೆ 5,00,000 ರೂ, ಭೋಜನಾಲಯಕ್ಕೆ 13,00,000 ರೂ, ಅಡುಗೆ ಕೋಣೆಗೆ 6,20,000 ರೂ, ಬಾಸ್ಕೆಟ್ ಬಾಲ್ ಮೈದಾನಕ್ಕೆ 9,50,000 ರೂ, ಸಮಗ್ರ ಅಭಿವೃದ್ಧಿಯ ಒಟ್ಟು ಮೊತ್ತ 42,90,000 ರೂ. ವ್ಯಯಿಸಲು ಅವಕಾಶವಿದೆ ಎಂದರು.
ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಶಾಲಾ ಸಮಗ್ರ ಅಭಿವೃದ್ಧಿಯ ಆಶಯದಡಿ ಗ್ರಾಮೀಣ ಪ್ರದೇಶಗಳಲ್ಲಿನ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಶಿರಸಿ ತಾಲೂಕಿನಲ್ಲಿ ಶಾಲೆಗೆ ಸಂಬಂಧಿಸಿದಂತೆ 25 ಕಾಮಗಾರಿಗಳು ಕ್ರಿಯಾಯೋಜನೆಯಲ್ಲಿ ಮಂಜೂರಾಗಿದೆ. 2021-22 ರಲ್ಲಿ ಕೆಲವು ಶಾಲೆಗಳಲ್ಲಿ ಕೈಗೊಂಡ ಕಾಮಗಾರಿಗಳು ಪೂರ್ಣಗೊಂಡಿವೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿಯೂ ಕಾಮಗಾರಿ ಕೈಗೊಳ್ಳುವ ಗುರಿಯಿದೆ ಎಂದು ತಿಳಿಸಿದರು.
ನಮ್ಮ ಶಾಲೆಯಲ್ಲಿ ಬಿಸಿಯೂಟಕ್ಕಾಗಿ ಕೈತೋಟ ಮಾಡಿ ಸುತ್ತಲೂ ಮುಳ್ಳಿನ ಬೇಲಿ ಹಾಕಿದ್ದರೂ ಪ್ರಯೋಜನವಾಗಿರಲಿಲ್ಲ. ಜೊತೆಗೆ ಒಂದೇ ಶೌಚಾಲಯವಿದ್ದ ಕಾರಣ ಮಕ್ಕಳಿಗೆ ತೊಂದರೆಯಾಗುತ್ತಿತ್ತು. ಇನ್ನು ಮಳೆಗಾಲದಲ್ಲಿ ಶಾಲಾ ಆಟದ ಮೈದಾನದ ಪಾಡು ಹೇಳತೀರದು. ಹೀಗಾಗಿ ಉದ್ಯೋಗ ಖಾತ್ರಿಯಲ್ಲಿ ಸುಸಜ್ಜಿತ ಕಾಂಪೌಂಡ್, ಶೌಚಾಲಯ ಜೊತೆಗೆ ಬಾಸ್ಕೆಟ್ ಬಾಲ್ ಮೈದಾನ ಕೂಡಾ ನಿರ್ಮಿಸುತ್ತಿರುವುದು ತುಂಬಾ ಖುಷಿ ಸಂಗತಿಯಾಗಿದೆ ಎಂದು ಜಡ್ಡಿಗದ್ದೆ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಆರ್. ಹೆಗಡೆ ಹೇಳಿದರು.
ಶಾಲಾ ಸಮಗ್ರ ಅಭಿವೃದ್ಧಿ ಯೋಜನೆಯಡಿ ಶಿರಸಿ ತಾಲೂಕಿನಲ್ಲಿ 4 ಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು ಕೊಡ್ನಗದ್ದೆ, ಇಸಳೂರು, ಬಂಡಲ, ಹುತ್ತಗಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ಕಾರಿ ಪ್ರೌಢ ಶಾಲೆಗಳ ಅಭಿವೃದ್ಧàಗಾಗಿ ನರೇಗಾ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ತಾ.ಪಂ. ಐಇಸಿ ಸಂಯೋಜಕಿ ಪೂರ್ಣಿಮಾ ಗೌಡ ಇದ್ದರು.