Advertisement

ರಾಜ್ಯದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ದಾಖಲೆಯ ಅಭಿವೃದ್ಧಿ: ಸಚಿವ ಡಾ.ಕೆ.ಸುಧಾಕರ್

04:29 PM Jan 31, 2022 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಸ್ಪತ್ರೆಗಳ ನಿರ್ಮಾಣದಲ್ಲಿ ಮತ್ತು ಇಡೀ ಆರೋಗ್ಯ ಕ್ಷೇತ್ರದಲ್ಲಿ ದಾಖಲೆಯ ಅಭಿವೃದ್ಧಿಯಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

Advertisement

ಕೆ.ಆರ್.ಪುರ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಶಿಲಾನ್ಯಾಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿದರು.

ಬಳಿಕ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ಬಿಜೆಪಿ ಸರ್ಕಾರದ ಅತ್ಯುತ್ತಮ ಕೊಡುಗೆಯಾಗಿದೆ. ಕೋಲಾರ ಮತ್ತು ಬೆಂಗಳೂರು ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ತಾಯಿ ಮತ್ತು ಮಗುವಿನ ಆಸ್ಪತ್ರೆ ಇದಾಗಲಿದೆ. 80 ಕಿ.ಮೀ ಅಂತರದಲ್ಲಿ ತಾಯಿ ಮತ್ತು ಮಗುವಿನ ಆಸ್ಪತ್ರೆ ಇಲ್ಲ. ಇದನ್ನು ಗಮನಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಆಸ್ಪತ್ರೆ ಮಾಡಬೇಕು ಎಂದು ಮನವಿ ಮಾಡಿದ್ದೆ ಎಂದರು.

30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಸಚಿವರಾದ ಬೈರತಿ ಬಸವರಾಜ ಅವರು 20 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವಂತೆ ಕೋರಿದ್ದರು. ಇದಕ್ಕೆ ಮುಖ್ಯಮಂತ್ರಿಗಳು ಸ್ಥಳದಲ್ಲೇ ಒಪ್ಪಿಗೆ ಕೊಟ್ಟಿದ್ದಾರೆ. ಒಟ್ಟು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಆಸ್ಪತ್ರೆಯಲ್ಲಿ ಒಟ್ಟು 100 ಹಾಸಿಗೆಗಳು ಇರಲಿವೆ. ಈ ಪೈಕಿ 50 ಸಾಮಾನ್ಯ ಹಾಸಿಗೆಗಳಾದರೆ, ಉಳಿದ 50 ಹಾಸಿಗೆಗಳು ಐಸಿಯು, ವೆಂಟಿಲೇಟರ್ ಸೇರಿದಂತೆ ಆಧುನಿಕ ಸೌಲಭ್ಯ ಒಳಗೊಂಡಿರಲಿದೆ ಎಂದು ಹೇಳಿದರು.

ಆರೋಗ್ಯ ಇಲಾಖೆಯಲ್ಲಿ ಅಭಿವೃದ್ಧಿ: 75 ವರ್ಷಗಳಲ್ಲಿ ಕಾಣದೇ ಇರುವ ಅಭಿವೃದ್ಧಿ ಆರೋಗ್ಯ ಇಲಾಖೆಯಲ್ಲಿ ಆಗುತ್ತಿದೆ. ಈ ಹಿಂದೆ ಆಕ್ಸಿಜನ್ ಬೆಡ್ ಗಳು ಜಿಲ್ಲಾಸ್ಪತ್ರೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ಸೀಮಿತವಾಗಿತ್ತು. ಆದರೆ ಇವತ್ತು ಸಮುದಾಯ ಆರೋಗ್ಯ ಕೇಂದ್ರದಲ್ಲೂ ಈ ವ್ಯವಸ್ಥೆ ಇದೆ. ಶಿಶುಗಳ ಹಾಗೂ ತಾಯಂದಿರ ಸಾವು ಕಡಿಮೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಗುರಿಯತ್ತ ರಾಜ್ಯ ಸಾಗುತ್ತಿದೆ. ಬೆಂಗಳೂರು ನಗರಕ್ಕೆ ಮಾತ್ರ ಆರೋಗ್ಯ ಸೇವೆಗಳು ಸೀಮಿತವಾಗಿಲ್ಲ. ರಾಜ್ಯದ ಎಲ್ಲಾ ಮೂಲೆ ಮೂಲೆಗಳ ಜನರಿಗೂ ಆರೋಗ್ಯ ಸೇವೆ ಸಿಗಬೇಕು ಅನ್ನುವುದು ಸರ್ಕಾರದ ಗುರಿ ಎಂದು ಹೇಳಿದರು.

Advertisement

ಭವಿಷ್ಯದಲ್ಲಿ ಬೆಂಗಳೂರಿನ ಪೂರ್ವಭಾಗದಲ್ಲಿ ಪಿಪಿಪಿ ಮಾದರಿ ಮೂಲಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ನಿರ್ಮಿಸಲಾಗುತ್ತದೆ. ನೆಫ್ರೋ ಯುರಾಲಜಿ, ಹೃದಯ ಸಂಬಂಧಿ ಹಾಗೂ ಕ್ಯಾನ್ಸರ್ ಸಂಬಂಧಿ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ:ಚುನಾವಣೆ ಮುಂದೂಡಿ…ನೀವು ಮಂಗಳ ಗ್ರಹದಲ್ಲಿ ವಾಸಿಸುತ್ತಿದ್ದೀರಾ? ಕೈ ಮುಖಂಡ ಶರ್ಮಾಗೆ ಹೈಕೋರ್ಟ್

ಆರೋಗ್ಯ ಇಲಾಖೆಯನ್ನು ಬದಲಿಸಬೇಕು ಅನ್ನುವ ಕನಸು 15 ವರ್ಷಗಳಿಂದ ಇತ್ತು. ಈಗ ಅವಕಾಶ ಸಿಕ್ಕಿದೆ. ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟಕ್ಕೆ ಸಮನಾಗಿ ರಾಜ್ಯದ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಆಗಲಿದೆ. ಅನೇಕ ಜನರು ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಸೇವೆ ಸಿಗದೆ ಪರದಾಡುತ್ತಿದ್ದಾರೆ. ಇದಕ್ಕಾಗಿ ಎಮರ್ಜೆನ್ಸಿ ಆ್ಯಂಬುಲೆನ್ಸ್ ಸೇವೆ ಆರಂಭಿಸಲಾಗಿದೆ ಎಂದು ಹೇಳಿದರು.

ಕರ್ನಾಟಕ ನಂ. 1: ಕೋವಿಡ್ ಲಸಿಕಾಕರಣದಲ್ಲಿ ಕರ್ನಾಟಕ ದೊಡ್ಡ ರಾಜ್ಯಗಳ ಪೈಕಿ ಮೊದಲ ಸ್ಥಾನ ಪಡೆದಿದೆ. ಮೊದಲ ಡೋಸ್ 100%, ಎರಡನೇ ಡೋಸ್ 87% ಆಗಿದೆ. ಕರ್ನಾಟಕ ಲಸಿಕಾಕರಣ ವಿಚಾರದಲ್ಲಿ ಎಲ್ಲರಿಗೂ ಮಾದರಿ ಎಂದು ಸಚಿವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next