Advertisement

ಒಳನಾಡು ಜಲಸಾರಿಗೆ ಅಭಿವೃದ್ಧಿ ಮಂಗಳೂರಿನಲ್ಲೂ ಅವಕಾಶ 

12:17 PM Nov 04, 2018 | |

ಸಾಗರ ಜಲ ಮಾರ್ಗದ ಕುರಿತು ಚಿಂತನೆಗಳು ಹಲವಾರು ವರ್ಷಗಳಿಂದ ಇದ್ದರೂ ಸಾಕಾರ ಸ್ವರೂಪ ಪಡೆದುಕೊಂಡಿಲ್ಲ. ಆದರೆ ಇತ್ತೀಚೆಗೆ ರಾಷ್ಟ್ರೀಯ ಒಳನಾಡು ಜಲಮಾರ್ಗ ಸಾರಿಗೆ ಪ್ರಾಧಿಕಾರ ನಡೆಸಿರುವ ಯೋಜನೆಯ ಲಾಭ ಸ್ಮಾರ್ಟ್‌ ನಗರಿಯಾಗಿರುವ ಮಂಗಳೂರಿಗೂ ದೊರೆಯುವ ಸಾಧ್ಯತೆ ಹೆಚ್ಚಾಗಿಸಿದೆ. ಜಲ ಮಾರ್ಗರಚನೆಗೆ ನೇತ್ರಾವತಿ ನದಿಯನ್ನು ಗುರುತಿಸಿರುವುದು ಇಲ್ಲಿನ ಸಾರಿಗೆ ಜತೆಗೆ ಹಿನ್ನೀರು ಪ್ರವಾಸೋದ್ಯಮದ ಅಭಿವೃದ್ಧಿಗೂ ಪೂರಕವಾಗುವ ಸಾಧ್ಯತೆಯನ್ನು ಹೆಚ್ಚಿಸಿದೆ. 

Advertisement

ಮಂಗಳೂರು ಸಾಗರ ಜಲಮಾರ್ಗದ ಜತೆಗೆ ಒಳನಾಡು ಜಲಸಾರಿಗೆ ಅಭಿವೃದ್ಧಿಗೆ ಅಪೂರ್ವ ಅವಕಾಶಗಳನ್ನು ಹೊಂದಿದೆ. ಈ ಅವಕಾಶಗಳನ್ನು ಬಳಸಿಕೊಳ್ಳುವ ಕುರಿತು ಬಹಳಷ್ಟು ವರ್ಷಗಳಿಂದ ಚಿಂತನೆಗಳು ನಡೆಯುತ್ತಾ ಬಂದಿವೆಯಾದರೂ, ಇದು ಸಾಕಾರದ ಸ್ವರೂಪ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ.

ಈಗ ರಾಷ್ಟ್ರೀಯ ಒಳನಾಡು ಜಲಮಾರ್ಗ ಸಾರಿಗೆ ಪ್ರಾಧಿಕಾರ (ಐಡಬ್ಲೂéಎಐ) ಈ ನಿಟ್ಟಿನಲ್ಲಿ ಸಾಧ್ಯತೆಗಳನ್ನು ತೆರೆದಿಟ್ಟಿದೆ. ದೇಶದಲ್ಲಿ ಸಮುದ್ರ ಮಾರ್ಗದಲ್ಲಿ ಸಾರಿಗೆ ಮಾದರಿಯಲ್ಲೇ ಒಳನಾಡಿನ ಜಲಮಾರ್ಗಗಳಲ್ಲಿರುವ ಅವಕಾಶಗಳನ್ನು ಬಳಸಿ ಕ್ರಾಂತಿಕಾರಕ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿಯನ್ನು ಕೂಡ ಗುರುತಿಸಿದೆ. ಸಾರಿಗೆ ಜತೆಗೆ ಹಿನ್ನೀರು ಪ್ರವಾಸೋದ್ಯಮ ಅಭಿವೃದ್ಧಿಗೂ ಇದು ಪೂರಕವಾಗಲಿದೆ.

ಒಳನಾಡು ಜಲಮಾರ್ಗ ಪ್ರಾಧಿಕಾರ ತನ್ನ ಕಾಂತಿಕಾರಿ ಯೋಜನೆಯ ಸಾಕಾರದ ಮಹತ್ವದ ಹೆಜ್ಜೆಯಾಗಿ ಮೊದಲ ಬಾರಿಗೆ ಕೋಲ್ಕೊತಾ- ವಾರಣಾಸಿ ನಡುವನ ಜಲಮಾರ್ಗದಲ್ಲಿ ಸಾರಿಗೆ ಆರಂಭಿಸಿದೆ. ಪೆಪ್ಸಿ ಕಂಪೆನಿಯ 16 ಟ್ರಕ್‌ ಲೋಡ್‌ ಸರಕುಗಳನ್ನು ಹೊತ್ತುಕೊಂಡು ಎಂ.ವಿ.ಆರ್‌.ಎನ್‌. ಠಾಗೋರ್‌ ನೌಕೆಯು ಕೋಲ್ಕೊತ್ತಾದಿಂದ ವಾರಣಾಸಿಗೆ ತೆರಳಿದೆ.

ನೇತ್ರಾವತಿ ನದಿಯಲ್ಲಿ 78 ಕಿ.ಮೀ. ಜಲಮಾರ್ಗ
ದೇಶದಲ್ಲಿ 100 ಕ್ಕೂ ಹೆಚ್ಚು ನದಿಗಳನ್ನು ಜಲಮಾರ್ಗಗಳಾಗಿ ಪರಿವರ್ತಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ಕೇಂದ್ರ ಬಂದರು ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. ಕರ್ನಾಟಕದಲ್ಲಿ ನೇತ್ರಾವತಿ ನದಿಯಲ್ಲಿ 78.6 ಕಿ.ಮೀ., ಮಲಪ್ರಭಾದಲ್ಲಿ 94 ಕಿ.ಮೀ., ಶರಾವತಿ ನದಿಯಲ್ಲಿ 20 ಕಿ.ಮೀ., ಕಾವೇರಿ ನದಿಯಲ್ಲಿ 324 ಕಿ.ಮೀ., ಕಬಿನಿ ನದಿಯಲ್ಲಿ 23 ಕಿ.ಮೀ. ಘಟಪ್ರಭಾ ನದಿಯಲ್ಲಿ 112 ಕಿ.ಮೀ. ಹಾಗೂ ಭೀಮಾ ನದಿಯಲ್ಲಿ 139 ಕಿ.ಮೀ. ಜಲ ಮಾರ್ಗವನ್ನು ಗುರುತಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇತ್ರಾವತಿ ನದಿಗೆ ಪಾಣೆಮಂಗಳೂರು ಸೇತುವೆ ಹಾಗೂ ಫಲ್ಗುಣಿ ನದಿಗೆ ಕುಳೂರಿನಲ್ಲಿ ಸೇತುವೆ ನಿರ್ಮಾಣವಾಗುವ ಮೊದಲು ನದಿಗಳೇ ಪ್ರಮುಖ ಸಾರಿಗೆ ಮಾರ್ಗಗಳಾಗಿದ್ದವು. ಸಾಗರ ಮಾರ್ಗದಲ್ಲಿ ಮಂಗಳೂರಿನಿಂದ ಮುಂಬಯಿಗೆ ಹಡಗುಗಳ ಸಂಚಾರವಿತ್ತು. ಮಂಗಳೂರು ಹಳೆ ಬಂದರಿನಿಂದ ಪಾಣೆಮಂಗಳೂರಿಗೆ ದೋಣಿಗಳ ಮೂಲಕ ಸರಕು ಸಾಗಣೆ ನಡೆದು ಅಲ್ಲಿಂದ ಎತ್ತಿನ ಗಾಡಿಗಳ ಮೂಲಕ ಇತರೆಡೆಗಳಿಗೆ ಸಾಗಿಸಲಾಗುತ್ತಿತ್ತು. ಸೇತುವೆಗಳು ನಿರ್ಮಾಣವಾದ ಬಳಿಕ ಜಲಮಾರ್ಗ ಮುಚ್ಚಿ ಹೋಯಿತು.

Advertisement

ಲಕ್ಷ ದ್ವೀಪದೊಂದಿಗೆ ಶತಮಾನಗಳಿಂದ ವಾಣಿಜ್ಯವೂ ಸಹಿತ ನಿಕಟ ಸಂಬಂಧವನ್ನು ಮಂಗಳೂರು ಹೊಂದಿದೆ. ಮಂಗಳೂರಿನ ಹಳೆ ಬಂದರಿನಲ್ಲಿ ಲಕ್ಷದ್ವೀಪಕ್ಕೆ ಸರಕುಗಳನ್ನು ಸಾಗಿಸುವ ವಾಣಿಜ್ಯ ದಕ್ಕೆ ಇದೆ. ಇಲ್ಲಿ ಲಕ್ಷ ದ್ವೀಪದಿಂದ ಬರುವ ಸರಕು ನೌಕೆಗಳು ಲಂಗರು ಹಾಕಿ ಸರಕುಗಳನ್ನು ತುಂಬಿಸಿಕೊಂಡು ಹೋಗುತ್ತಿವೆ. ಮಂಜಿ ಎಂದು ಕರೆಯಲ್ಪಡುವ ನೌಕೆಗಳ ಮೂಲಕ ಅಲ್ಲಿಂದ ವ್ಯಾಪಾರಿಗಳು ಮಂಗಳೂರು ಹಳೆ ಬಂದರಿಗೆ ಆಗಮಿಸಿ ಇಲ್ಲಿಂದ ಲಕ್ಷದ್ವೀಪಕ್ಕೆ ದಿನಂಪ್ರತಿ ಕಟ್ಟಡ ಸಾಮಗ್ರಿಗಳನ್ನು, ಸಂಬಾರು ಪದಾರ್ಥಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದರು. ಇದು ಈಗಲೂ ಅವ್ಯಾಹತವಾಗಿ ಮುಂದುವರಿದುಕೊಂಡು ಬಂದಿದೆ.

ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ
ಒಳನಾಡು ಜಲಸಾರಿಗೆ ಅಭಿವೃದ್ಧಿ ಪ್ರವಾಸೋದ್ಯಮಕ್ಕೆ ಪೂರಕವಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಸಾಗರ ಪ್ರವಾಸೋದ್ಯಮ ಇದರಲ್ಲಿ ಮುಖ್ಯವಾಗಿ ಗುರುತಿಸಲ್ಪಡುತ್ತದೆ. ದೇಶದ ಪ್ರವಾಸೋದ್ಯಮ ಕ್ಷೇತ್ರವನ್ನು ಅವಲೋಕಿಸಿದರೆ ಸಾಗರತೀರ ಪ್ರವಾಸೋದ್ಯಮ ಒಂದು ಪ್ರಮುಖ ಆದಾಯ ತರುವ ಕ್ಷೇತ್ರ. ನೇತ್ರಾವತಿ ನದಿ ಹರಿಯುತ್ತಿರುವ ಅಡ್ಯಾರ್‌ನಿಂದ ಅಳಿವೆ ಬಾಗಿಲು ವರೆಗಿನ ಹಾಗೂ ಫಲ್ಗುಣಿ ನದಿ ಹರಿಯುತ್ತಿರುವ ಗುರುಪುರದಿಂದ ತಣ್ಣೀರು ಬಾವಿಯವರೆಗಿನ ಪ್ರದೇಶದಲ್ಲಿ ಹಲವಾರು ಕಡೆಗಳಲ್ಲಿ ನದಿ ಇಕ್ಕೆಲಗಳಲ್ಲಿ ಹಿನ್ನೀರಿನಲ್ಲಿ ಸುಂದರ ಪ್ರಕೃತಿ ತಾಣಗಳಿವೆ. ಬೋಟು ಹೌಸ್‌ಗಳು, ಪ್ರವಾಸೋದ್ಯಮ ತಾಣಗಳ ಸ್ಥಾಪನೆಗೆ ಈ ಪ್ರದೇಶಗಳು ಅತ್ಯಂತ ಸೂಕ್ತವಾಗಿದೆ. ಕೇಂದ್ರ ಸರಕಾರ ಸಿಆರ್‌ ಝಡ್‌ ನಿಯಮ ಪರಿಷ್ಕರಣೆಯಲ್ಲೂ ಸಾಗರ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕೆಲವು ರಿಯಾಯತಿಗಳನ್ನು ನೀಡಲಾಗಿದೆ. ಬೋಟ್‌ ಹೌಸ್‌ಗಳ ಜತೆಗೆ ನದಿಗಳ ಮಧ್ಯೆ ಇರುವ ಕಿರು ದ್ವೀಪಗಳು ಕೂಡ ಹಿನ್ನೀರು ಪ್ರದೇಶಗಳ ಪ್ರವಾಸೋದ್ಯಮಕ್ಕೆ ಪೂರಕವಾಗಿವೆ. ಕೆಲವು ಕುದ್ರುಗಳನ್ನು ಪ್ರವಾಸೋದ್ಯಮ ತಾಣಗಳಾಗಿ ಅಭಿವೃದ್ಧಿಗೊಳಿಸುವ ಪ್ರಯತ್ನಗಳು ನಡೆದರೂ ಕೆಲವು ಕಾರಣಗಳಿಂದ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ.

ನೀಲ ನಕಾಶೆ ಹೀಗಿರಲಿ
ಮಂಗಳೂರು ಸಹಿತ ಕರಾವಳಿಯಲ್ಲಿ ಜಲ ಪ್ರವಾಸೋದ್ಯಮಕ್ಕೆ ಪೂರಕವಾಗಿ ಒಳನಾಡು ಜಲಸಾರಿಗೆಯನ್ನು ರೂಪಿಸುವ ನಿಟ್ಟಿನಲ್ಲಿ ನೀಲ ನಕಾಶೆಯೊಂದು ಸಿದ್ಧಗೊಳ್ಳುವ ಆವಶ್ಯಕತೆ ಇದೆ. ಸಮಗ್ರ ಸರ್ವೆ ಕಾರ್ಯ ನಡೆದು ಹಿನ್ನೀರುಗಳಲ್ಲಿ ಯಾವುದೆಲ್ಲ ಪ್ರದೇಶಗಳು ಜಲಸಾರಿಗೆಗೆ ಪೂರಕವಾಗಿವೆ. ಇದಕ್ಕೆ ಹೊಂದಿಕೊಂಡು ಹಿನ್ನೀರು ಪ್ರವಾಸೋದ್ಯಮವನ್ನು ರೂಪಿಸಬಹುದು. ಯಾವುದೆಲ್ಲ ತಾಣಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿದೆ, ಹೇಗೆ ವೈವಿಧ್ಯವಾಗಿ ಇವುಗಳನ್ನು ವಿನ್ಯಾಸಗೊಳಿಸಬಹುದಾಗಿದೆ ಮತ್ತು ದೇಶವಿದೇಶಗಳಿಂದ ಪ್ರವಾಸಿಗರನ್ನು ಆಕರ್ಷಿಸಲು ಅನುಸರಿಸಬೇಕಾದ ತಂತ್ರಗಳು ಸಹಿತ ಸಮಗ್ರ ಯೋಜನೆಯನ್ನು ನೀಲ ನಕಾಶೆಯಲ್ಲಿ ರೂಪಿಸಬಹುದಾಗಿದೆ. 

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next