Advertisement
ಕುಪ್ಪೆಪದವು ಪೇಟೆಯಲ್ಲಿಯೇ ಹಲ ವಾರು ಸಮಸ್ಯೆಗಳಿವೆ. ಸಮರ್ಪಕವಾದ ಚರಂಡಿ ಇಲ್ಲದೇ ಇರುವುದು, ಮಳೆಯ ನೀರು ರಸ್ತೆಯಲ್ಲಿಯೇ ಹರಿಯುತ್ತಿರುವುದು ಪ್ರಮುಖ ಸಮಸ್ಯೆ. ಕಿರಿದಾದ ರಸ್ತೆಯಿಂದಾಗಿ ವಾಹನ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಇಲ್ಲಿ ಸಂಜೆ ವೇಳೆ ಯಾವಾಗಲೂ ಕಿರಿಕಿರಿ, ಗಲಾಟೆಗಳು ನಡೆಯುತ್ತಿದೆ. ಇದಕ್ಕೆ ಪರಿಹಾರ ಸಿಗಬೇಕು.
Related Articles
Advertisement
ಇಲ್ಲಿನ ಜನರು ತುರ್ತು ಚಿಕಿತ್ಸೆಗೆ ಮೂಡು ಬಿದಿರೆಗೆ ಹೋಗಬೇಕಾಗಿದೆ. ಪ್ರಾ. ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕೆಂದು ಹಲವಾರು ವರ್ಷಗಳಿಂದ ಇಲ್ಲಿನವರು ಮನವಿ ಮಾಡುತ್ತಿದ್ದಾರೆ. ಪ್ರಾ.ಆ.ಕೇಂದ್ರಕ್ಕೆ ಮಹಿಳೆಯರು ಜಾಸ್ತಿ ಬರುವ ಕಾರಣ ಇಲ್ಲಿ ಮಹಿಳಾ ವೈದ್ಯಾಧಿಕಾರಿಯ ನೇಮಕ ವಾಗಬೇಕು ಎಂಬ ಬೇಡಿಕೆಯೂ ಇದೆ.
12 ಕೊಳವೆ ಬಾವಿ,4 ಟ್ಯಾಂಕ್‌ನಿಂದ ನೀರು ಸರಬರಾಜು
ಜೋರ, ಕಾಪಿಕಾಡ್, ಬಾರ್ದಿಲದಲ್ಲಿ ನೀರಿನ ಸಮಸ್ಯೆ ಇದೆ. ಕೊಳವೆ ಬಾವಿ ಯಿಂದಲೇ ಕುಡಿಯವ ನೀರು ಸರಬರಾಜು ಆಗುತ್ತಿದೆ. ಇಲ್ಲಿ ಈಗ 12 ಕೊಳವೆ ಬಾವಿಗಳು, 4 ಟ್ಯಾಂಕ್‌ಗಳಿಂದ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತದೆ. ಜಲಜೀವನ್ ಮಿಶನ್‌ನಿಂದ ಓವರ್ ಹೆಡ್ ಟ್ಯಾಂಕ್‌ಗಳು ನಿರ್ಮಾಣವಾಗುತ್ತಿದೆ. ಆದರೆ ಫಲ್ಗುಣಿ ನದಿಗೆ ದೊಡ್ಡಲಿಕೆಯಲ್ಲಿ ನಿರ್ಮಾಣವಾದ ಡ್ಯಾಂನಿಂದ ನೀರು ಸರಬರಾಜು ಮಾಡಿದರೆ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಶೀಘ್ರ ಕಾರ್ಯಗತವಾದರೆ ಮಾತ್ರ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ. ಮಂಗಲ್‌ಚಾರ್ ಸೈಟ್‌ನಲ್ಲಿ ತ್ಯಾಜ್ಯ ಘಟಕ ನಿರ್ಮಾಣವಾಗಿದೆ. ಆದರೆ ಅದು ಇನ್ನೂ ಕಾರ್ಯಾರಂಭವಾಗಿಲ್ಲ. ಗುರಿಕಾರ ಗುಡ್ಡೆಯಲ್ಲಿ ರುದ್ರಭೂಮಿ ಇದೆ. ಅದರ ಅಭಿವೃದ್ಧಿಗೆ ಸಮಿತಿ ರಚನೆಯಾಗಿದೆ. ಚಿತಾಗಾರ ಹಾಗೂ ದಾಸ್ತಾನು ಕೊಠಡಿ ನಿರ್ಮಾಣಕ್ಕೆ ಬಾಕಿ ಇದೆ. ಆದಷ್ಟು ಬೇಗ ಇದರ ಕಾಮಗಾರಿ ನಡೆಯಬೇಕು.
ಗಾಣದ ಕೊಟ್ಟ ಮಣ್ಣು ರಸ್ತೆ(ಕಚ್ಚಾ) ರಸ್ತೆಯನ್ನು ಡಾಮರೀಕರಣ ಮಾಡಬೇಕು ಅದನ್ನು ದೊಡ್ಡಲಿಕ್ಕೆ ಡ್ಯಾಂಗೆ ಸಂಪರ್ಕ ಮಾಡಬೇಕೆಂದು ಗ್ರಾಮಸ್ಥರು ಬೇಡಿಕೆ ಇಟ್ಟಿದ್ದಾರೆ. ಅಂಚೆ ಕಚೇರಿಯಲ್ಲಿ ಈಗ ಹೆಚ್ಚಿನ ವ್ಯವಹಾರ ನಡೆಸಲಾಗುತ್ತಿದೆ. ಬೆಳಗ್ಗೆ 9ರಿಂದ 12.30 ತನಕ ಇರುವ ವ್ಯವಹಾರದ ಅವಧಿಯನ್ನು ಸಂಜೆ 4ರ ವರೆಗೆ ವಿಸ್ತರಿಸಿದರೆ ಉತ್ತಮ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ಪೊಲೀಸ್ ಹೊರಠಾಣೆ
ಬಜಪೆ ಪೊಲೀಸ್ ಠಾಣೆ ಭಾರೀ ದೂರ ವಾಗಿದ್ದು,ಯಾವುದೇ ಘಟನೆಗೆ ತುರ್ತು ಸ್ಪಂದನೆಯಾಗುವಂತೆ ಇಲ್ಲಿ ಪೊಲೀಸ್ ಹೊರಠಾಣೆ ಕೇಂದ್ರ ನಿರ್ಮಾಣವಾಗಬೇಕು.
ರಿಕ್ಷಾ ಪಾರ್ಕ್
ಬೆಳೆಯುತ್ತಿರುವ ಕುಪ್ಪೆಪದವು ಪೇಟೆಗೆ ರಿಕ್ಷಾ ಪಾರ್ಕ್ ಅಗತ್ಯವಾಗಿದೆ.ಕುಗ್ರಾಮಗಳಿಗೆ ಬಸ್ ಸೌಕರ್ಯ ಇಲ್ಲದ ಕಾರಣ ಜನರು ರಿಕ್ಷಾವನ್ನು ಅವಲಂಬಿತರಾಗಿದ್ದಾರೆ. ರಿಕ್ಷಾ ಗಳು ಜಾಸ್ತಿಯಾಗಿ ರಿಕ್ಷಾ ಸುವ್ಯವಸ್ಥೆಗೆ ರಿಕ್ಷಾ ಪಾರ್ಕ್ ಅಗತ್ಯವಿದೆ.
ಕೊಲೆಂಜಿ, ಕಿಲೆಂಜಿ…
ಕಿಲೆಂಜಾರು ಗ್ರಾಮದ ಆದಾಯ ಮೂಲ ಕೃಷಿಯಾಗಿದೆ. ಹೆಚ್ಚಿನ ಪ್ರದೇಶಗಳು ಗುಡ್ಡದಿಂದ ಕೂಡಿದ್ದು, ಸಣ್ಣ ಕೃಷಿ ಗದ್ದೆಗಳು (ತುಳುವಿನಲ್ಲಿ ಕಿಲೆಂಜಿ, ಕೊಲೆಂಜಿ) ಯಿಂದ ಕೂಡಿದ್ದ ಕಾರಣ ಕಿಲೆಂಜಾರು ಹೆಸರು ಬಂತು. ಕಿಲೆಂಜಾರು (ತುಳುಭಾಷೆಯಲ್ಲಿ ಶಿಮುಳ್ಳು ಬಲ್ಲೆ , ಕಿಲೆಂಜಿದ ಪಟ್ಟ್) ಮುಳ್ಳಿನ ಬಲ್ಲೆ ಮತ್ತು ನೊಣದ ಪಟ್ಟು (ಗುಂಪು) ಹೆಚ್ಚು ಇರುವ ಪ್ರದೇಶವಾಗಿತ್ತು. ಊರಿನ ಕೊಡಮಣಿತ್ತಾಯ ದೈವ ಅದನ್ನು ನಾಶ ಮಾಡಿತು ಎಂಬ ಪ್ರತೀತಿ ಇದೆ.
ಜಲಜೀವನ್ ಮಿಶನ್ ಯೋಜನೆಯಡಿ ನಾಲ್ಕು ಟ್ಯಾಂಕ್ ನಿರ್ಮಾಣವಾಗಲಿದೆ. ಅದಕ್ಕೆ ನೀರಿನ ಮೂಲದ್ದೇ ಸಮಸ್ಯೆ. ಫಲ್ಗುಣಿ ನದಿಯ ಸಣ್ಣಿಕಾಯಿ ಎಂಬಲ್ಲಿ ಬಹುಗ್ರಾಮ ಯೋಜನೆಯಿಂದ ನೀರನ್ನು ಟ್ಯಾಂಕ್‌ಗೆ ನೀಡಿದಲ್ಲಿ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಸಿಗಲಿದೆ. ಕುಪ್ಪೆಪದವಿನಲ್ಲಿ ರಿಕ್ಷಾ ಪಾರ್ಕ್ ನಿರ್ಮಿಸಬೇಕೆಂಬ ಬೇಡಿಕೆ ಇದೆ. ಪೇಟೆಯಲ್ಲಿ ರಸ್ತೆಯ ಎರಡೂ ಕಡೆ ಚರಂಡಿ ಇಲ್ಲ. ಇಲ್ಲಿ ಬಾಕ್ಸ್ ಚರಂಡಿ ನಿರ್ಮಾಣವಾಗಬೇಕು. ಅಂಬೆಲೊಟ್ಟು ಮನೆ ನಿವೇಶನ ಜಾಗ ಪಾದೆಯಾಗಿದ್ದು ಅದು ಯೋಗ್ಯವಲ್ಲ. ಅರಣ್ಯ ಇಲಾಖೆಯ ನಿರಪೇಕ್ಷಣಾ ಪತ್ರ ಬೇಕು ಎಂದು ಹೇಳುತ್ತಾರೆ. ನಿಗಮದಿಂದಲೇ ಹಕ್ಕುಪತ್ರ ಕೊಟ್ಟು 4 ವರ್ಷಗಳಾಯಿತು. ನಮಗೆ ಸರ್ವೆ ನಂಬ್ರ 58ರಲ್ಲಿ 3 ಎಕರೆ ಜಾಗ ನಿವೇಶನಕ್ಕೆ ನೀಡಬೇಕು ಎಂದು ಮನವಿ ಮಾಡಿದ್ದೇವೆ. – ಡಿ. ಪಿ. ಹಮ್ಮಬ್ಬ, ಅಧ್ಯಕ್ಷರು, ಕುಪ್ಪೆಪದವು ಗ್ರಾಮ ಪಂಚಾಯತ್
ಉಡುಪಿಯಿಂದ ಕಾಸರಗೋಡಿಗೆ 400 ಕೆ.ವಿ. ವಿದ್ಯುತ್ ತಂತಿಗಳು ತಾಳಿಪಾಡಿ ಪ್ರದೇಶವನ್ನು ಹಾದು ಹೋಗುತ್ತದೆ. ಇದಕ್ಕೆ ನಮ್ಮ ವಿರೋಧವಿದೆ. ಇಲ್ಲಿ ಮೊಬೈಲ್‌ಗೆ ನೆಟ್‌ವರ್ಕ್ ಸಮಸ್ಯೆ ಇದೆ. ಇದನ್ನು ಪರಿಹರಿಸಬೇಕು. – ರಾಮಚಂದ್ರ ಸಾಲ್ಯಾನ್, ಕೃಷಿಕ
ಹಕ್ಕುಪತ್ರ ನೀಡಿಕೆಗೆ ಸೀಮಿತ ಅಂಬೆಲೊಟ್ಟು,ಕಲ್ಲಾಡಿ ನಿವೇಶನದಲ್ಲಿ ಸುಮಾರು 98 ಮಂದಿಗೆ ಹಕ್ಕು ಪತ್ರ ನೀಡಲಾಗಿದೆ. ನಿವೇಶನ ಸಮತಟ್ಟು ಮಾಡಲು ಪಂಚಾಯತ್‌ಗೆ ಅನುದಾನದ ಕೊರತೆ ಇದೆ. ಇದರಿಂದಾಗಿ ಮನೆ ನಿವೇಶನ ನೀಡದೇ ಹಕ್ಕುಪತ್ರದಲ್ಲಿಯೇ ಉಳಿದಿದೆ. ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಕಟ್ಟಡ ಇದೆ. ಆದರೆ ಖಾಯಂ ಪಶುವೈದ್ಯರಿಲ್ಲ ಪಶು ಸಂಗೋಪನಾ ಇಲಾಖೆಗೆ ಕಟ್ಟಡ ಇದೆ. ಆದರೆ ಅಲ್ಲಿ ಖಾಯಂ ಪಶು ವೈದ್ಯರಿಲ್ಲ. ಗಂಜಿಮಠದ ಪಶು ವೈದ್ಯರು ಇಲ್ಲಿ ಪ್ರಭಾರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ಹೆಚ್ಚು ಕೃಷಿಕರೇ ಇರುವುದರಿಂದ ಇಲ್ಲಿ ಖಾಯಂ ಪಶುವೈದ್ಯರ ನೇಮಕ ಅಗತ್ಯ.
-ಸುಬ್ರಾಯ ನಾಯಕ್ ಎಕ್ಕಾರು