Advertisement

“ಅಭಿವೃದ್ಧಿಗೆ ಸದಸ್ಯರ ಇಚ್ಛಾಶಕ್ತಿ ಬೇಕು’

12:49 PM Sep 05, 2017 | Team Udayavani |

ಆನೇಕಲ್‌: ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಕೀಯ ತಾರತಮ್ಯ ಮಾಡುವುದಿಲ್ಲ. ಆದರೆ, ವಾರ್ಡ್‌ನ ಸದಸ್ಯರು ತಮ್ಮ ವಾರ್ಡ್‌ನ ಮೂಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪುರಸಭಾ ಸದಸ್ಯರ ಇಚ್ಛಾಶಕ್ತಿ ಮತ್ತು
ಜವಾಬ್ದಾರಿ ಹೊರಬೇಕು ಶಾಸಕ ಬಿ.ಶಿವಣ್ಣ ಪುರಸಭೆ ಸದಸ್ಯರಿಗೆ ಸಲಹೆ ನೀಡಿದರು.

Advertisement

ತಾಲೂಕಿನ ಚಂದಾಪುರದ ಪುರಸಭೆ ವ್ಯಾಪ್ತಿಯ ಹೆಡ್‌ಮಾಸ್ಟರ್‌ ಲೇಔಟ್‌ನಲ್ಲಿ ವಿನಾಯಕ ಗೆಳೆಯರ ಬಳಗದಿಂದ ಏರ್ಪಡಿಸಿದ್ದ ಗಣೇಶೋತ್ಸವ ಹಾಗೂ ಕನ್ನಡ ಧ್ವಜಸ್ತಂಭ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ: ತಾಲೂಕಿನಲ್ಲಿ ಅಂತರ್ಜಲ ಕಲುಷಿತಗೊಂಡು ಬೋರ್‌ವೆಲ್‌ ನೀರು ಕುಡಿಯಲು ಯೋಗ್ಯವಾಗಿಲ್ಲ. ಫ್ಲೋರೈಡ್‌ ಮತ್ತು ಕ್ಲೋರೈಡ್‌ ಅಂಶಗಳ ಪ್ರಮಾಣ ಹೆಚ್ಚಾಗಿದೆ. ಶುದ್ಧ ಮಿನರಲ್‌ ನೀರು ಕುಡಿಯಬೇಕಾದರೆ ಖಾಸಗಿಯಾಗಿ ಒಂದು ಕ್ಯಾನಿಗೆ 30 ರೂ. ಗಳನ್ನು ಕೊಡಬೇಕಾಗುತ್ತದೆ. ಇದು ಬಡವರಿಗೆ
ಹೆಚ್ಚು ಹೊರೆಯಾಗುತ್ತದೆ. ಆದ್ದರಿಂದ ಆರ್‌ಒ ಪ್ಲಾಂಟ್‌ ಸ್ಥಾಪನೆ ಮಾಡುವ ಮೂಲಕ ಶುದ್ಧ ನೀರನ್ನು ಕೇವಲ 2 ರೂ.
ಗಳಿಗೆ ಒಂದು ಕ್ಯಾನ್‌ ನೀಡುವಂತಹ ವ್ಯವಸ್ಥೆ ಮಾಡಲಾಗುತ್ತದೆ. ಇದರ ಬಳಕೆಗೆ ಸ್ಮಾರ್ಟ್‌ ಕಾರ್ಡ್‌ ನೀಡಲಾಗುತ್ತದೆ. ತಿಂಗಳೊಳಗಾಗಿ ಕಾರ್ಯರೂಪಕ್ಕೆ ತರಲಾಗುವುದು ಎಂದು ತಿಳಿಸಿದರು.

ಮೂಲ ಸೌಕರ್ಯಕ್ಕಾಗಿ ನಿವಾಸಿಗಳ ಮನವಿ: ಈ ವೇಳೆ ಎಚ್‌.ಎಂ.ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ
ಅಧ್ಯಕ್ಷ ಆರ್‌.ಕೆ.ವೇಣು ಮಾತನಾಡಿ, ಈ ಬಡಾವಣೆಯು 25 ವರ್ಷಗಳ ಹಳೆಯ ಬಡಾವಣೆಯಾಗಿದೆ. ಸುಮಾರು 500 -600 ಮನೆಗಳಿವೆ. ಆದರೂ ಈ ಬಡಾವಣೆಯಲ್ಲಿ ಗ್ರಾಪಂ ಆಡಳಿತ ಇದ್ದಾಗ ಒಂದಿಷ್ಟು ಸಣ್ಣ ಪುಟ್ಟ ಕಾರ್ಯಗಳು ಅಗಿದನ್ನು ಬಿಟ್ಟು ಕಳೆದ ಎರಡು ವರ್ಷಗಳಿಂದ ಈ ಚಂದಾಪುರ ಪುರಸಭೆಯಾಗಿ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಯಾವುದೇ ಮೂಲ ಸೌಲಭ್ಯಗಳು ದೊರಕಿಲ್ಲ. ಕುಡಿಯುವ ನೀರಿನ ಹಾಹಾಕಾರವಿದೆ. ಬಡಾವಣೆ ರಸ್ತೆಗಳು ಮಂಡಿಯುದ್ದಷ್ಟು ಗುಂಡಿಬಿದ್ದು ಹಾಳಾಗಿವೆ. ಸಾನೇಟರಿ ವ್ಯವಸ್ಥೆ ಇಲ್ಲ. ಬೀದಿ ದೀಪಗಳು ಇಲ್ಲ. ಇಡೀ ತಾಲೂಕಿನಲ್ಲಿಯೇ ಅತ್ಯಂತ ಹಿಂದುಳಿದ ವಾರ್ಡ್‌ ಆಗಿದೆ. ಇದರ ಬಗ್ಗೆ ಪುರಸಭೆ ಸದಸ್ಯರು ಹಾಗೂ ಅಧ್ಯಕ್ಷರು ನಿರ್ಲಕ್ಷ್ಯತೆ ವಹಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಸರಿಯಾದ ಪಾಠ ಕಲಿಸಬೇಕಾಗುತ್ತದೆ ಎಂಬುದಾಗಿ ಎಚ್ಚರಿಸಿ ಶಾಸಕರಿಗೆ ಹಾಗೂ ಪುರಸಭಾ ಅಧ್ಯಕ್ಷರಿಗೆ ಮನವಿ ಪತ್ರ ನೀಡಿದರು.

ಮೂಲ ಸೌಕರ್ಯಕ್ಕೆ ಒತ್ತು: ಇದೇ ಸಂದರ್ಭಲ್ಲಿ ನಿವಾಸಿಗಳ ಮನವಿ ಪತ್ರ ಸ್ವೀಕರಿಸಿದ ಚಂದಾಪುರ ಪುರಸಭೆ ಅಧ್ಯಕ್ಷ ವೇಣುಗೋಪಾಲ್‌ ಮಾತ ನಾಡಿ, ಪುರಸಭೆಯಲ್ಲಿ ಯಾವುದೇ ಕಾರ್ಯ ಕೈಗೆತ್ತುಕೊಳ್ಳಬೇಕಾದರೂ ಟೆಂಡರ್‌ ಪ್ರಕ್ರಿಯೇಯಿಂದಲೇ ಆರಂಭ ಮಾಡಬೇಕಾಗುತ್ತದೆ. ಆದರೆ ಈ ಬಡಾವಣೆ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದು
ಬೇಸರದ ವಿಷಯ. ಇದಕ್ಕೆ ಹಲವಾರು ಕಾರಣಗಳಿಂದ ಜನರ ನಿರೀಕ್ಷೆಗೆ ತಕ್ಕ ಕೆಲಸವಾಗಿಲ್ಲ. ಈ ಬಗ್ಗೆ ನಮಗೂ ನೋವು ಇದೆ. ಇನ್ನು ಮುಂದೆ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರಮಾಣಿಕವಾಗಿ ಪರಿಹರಿಸಲಾಗುವುದು ಎಂದು ತಿಳಿಸಿದರು. 

Advertisement

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ಇಗ್ಲೂರು ವೆಂಕಟೇಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಚಂದಾಪುರ ರಾಜಣ್ಣ, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಮಂಜುನಾಥ್‌, ರೇಣುಕಾ ಆರಾಧ್ಯ, ನಾಗರಾಜು, ಡಾ.ಹರೀಶ್‌, ಸುರೇಶ್‌, ಸಿದ್ದಪ್ಪ, ಜಗದೀಶ್‌, ಗಣೇಶ್‌, ಬೋಜರಾಜು ಮತ್ತಿತರರಿದ್ದರು.

ಬಹುಮಾನ ವಿತರಣೆ: ಗಣೇಶೋತ್ಸವದ ಅಂಗವಾಗಿ ಮಕ್ಕಳಿಗಾಗಿ ಏರ್ಪಡಿಸಿದ್ದ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನಿಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next