ಕೊಪ್ಪಳ: ದೇಶದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಪರ್ವವೇ ನಡೆದಿದೆ. ಈ 8 ವರ್ಷಗಳಲ್ಲಿ ಬಡವರ, ಶೋಷಿತರ, ನೊಂದವರಿಗೆ ಮೋದಿ ಸರ್ಕಾರ ಯೋಜನೆ ರೂಪಿಸಿ ಜನಪರ ಆಡಳಿತ ನೀಡುತ್ತಿದೆ. ಕೃಷಿ ಕ್ಷೇತ್ರದ ಉತ್ಪಾದನೆ ಗಣನೀಯ ಹೆಚ್ಚಾಗಿದೆ. ಆಯುಷ್ಮಾನ್ ಭಾರತ ಕಾರ್ಡ್ ಮೂಲಕ ಬಡವರಿಗೆ ಆರೋಗ್ಯ ಸೇವೆ ಕಲ್ಪಿಸಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 8 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪತ್ರಕರ್ತರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಯಾರ ಖಾತೆಗೂ 15 ಲಕ್ಷ ರೂ. ಹಾಕುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಆದರೆ ಅವರು ಜನಧನ್ ಖಾತೆಯನ್ನು ಪ್ರಾರಂಭಿಸುವ ಮೂಲಕ ಸೋರಿಕೆ ತಪ್ಪಿಸಿ, ಸಹಾಯಧನ ನೇರವಾಗಿ ಅವರ ಖಾತೆಗೆ ಜಮಾ ಮಾಡುವ ಯೋಜನೆ ಪ್ರಾರಂಭಿಸಿದ್ದಾರೆ. ಮುದ್ರಾ ಯೋಜನೆಯಲ್ಲಿ 34 ಕೋಟಿಗೂ ಹೆಚ್ಚು ಜನರಿಗೆ ಸಾಲ ನೀಡಲಾಗಿದೆ. ಕೋವಿಡ್ ವೇಳೆ ಮೋದಿ ಅವರು ಜನರಿಗೆ ನೀಡಿದ ಸೇವೆಯಿಂದಾಗಿ ಅವರ ಜನಪ್ರಿಯತೆ ಶೇ. 73ರಷ್ಟು ಹೆಚ್ಚಿದೆ ಎಂದು ಸಮೀಕ್ಷಾ ವರದಿ ಹೇಳುತ್ತಿದೆ. ಅವರ ಕಾರ್ಯ ವೈಖರಿಗೆ ಇದು ಹಿಡಿದ ಕೈಗನ್ನಡಿಯಾಗಿದೆ ಎಂದರು.
ಕಳೆದ 8 ವರ್ಷದಲ್ಲಿ ವಿವಿಧ ಯೋಜನೆಯಡಿ ರಾಜ್ಯಕ್ಕೆ 1,29,776.74 ಕೋಟಿ ರೂ. ನೀಡಿದ್ದಾರೆ. ಇದು ಹಿಂದಿನ ಎಲ್ಲಾ ಸರ್ಕಾರಗಳ ಲೆಕ್ಕಕ್ಕಿಂತಲೂ ಅಧಿಕವಾಗಿದೆ. ಭತ್ತದ ದರ 2015 ರೂ.ಗೆ ಹೆಚ್ಚಿಸಿದ್ದಾರೆ. ಕಿಸಾನ್ ಸಮ್ಮಾನ್‌ನಡಿ 12 ಕೋಟಿ ರೈತರಿಗೆ 1.82 ಲಕ್ಷ ಕೋಟಿ ರೂ. ವಿತರಣೆಯಾಗಿದೆ. ರೈತರ ಉತ್ಪನ್ನ ಸಾಗಿಸಲು ರೈಲು ಪ್ರಾರಂಭ, ಪಿಎಂ ಪಸಲ್ ಬಿಮಾ ಯೋಜನೆ, ಆಯುಷ್ಮಾನ್ ಭಾರತದಡಿ 10 ಕೋಟಿ ಬಡವರಿಗೆ ಆರೋಗ್ಯ ಚಿಕಿತ್ಸಾ ವೆಚ್ಚ ಭರಿಸಿದ್ದು, ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ನೀಡಲಾಗುತ್ತದೆ. ಅಲ್ಲದೇ ಕೃಷಿ ವಲಯದಲ್ಲಿ ಅಮೂಲಾಗ್ರ ಬದಲಾವಣೆ ಕಂಡಿದ್ದು, ಉತ್ಪಾದನೆಯ ಪ್ರಮಾಣ ಹೆಚ್ಚಾಗಿದೆ. ನನ್ನ ಕ್ಷೇತ್ರಕ್ಕ ಎಲ್ಲ ಯೋಜನೆಗಳನ್ನು ತಂದಿದ್ದೇನೆ. ರೈಲ್ವೆ ಯೋಜನೆಗಳಿಗೆ 2500 ಕೋಟಿ ರೂ. ಅನುದಾನ ಬಂದಿದೆ. ಸೇತುವೆ, ಹೆದ್ದಾರಿ ನಿರ್ಮಿಸಿದ್ದೇವೆ ಎಂದರು.
ಊಹಾಪೋಹ: ನಾನು ಬಿಜೆಪಿಯಲ್ಲೇ ಇದ್ದೇನೆ. ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ಎರಡು ಬಾರಿ ಸಂಸದನಾಗಿ ಆಯ್ಕೆಯಾಗಿದ್ದೇನೆ. ಮುಂದಿನ ಚುನಾವಣೆಗೆ ಜೆಡಿಎಸ್ ಪಕ್ಷಕ್ಕೆ ಹೋಗುತ್ತೇನೆ ಎನ್ನುವುದೆಲ್ಲ ಸುಳ್ಳು. ಅದೆಲ್ಲ ಊಹಾಪೋಹ. ಜೆಡಿಎಸ್ ಗೆ ಸೇರಲು ನನಗೇನು ಹುಚ್ಚು ಹಿಡಿದಿದೆಯಾ? ಎಂದು ಗರಂ ಆಗಿಯೇ ಪ್ರಶ್ನೆ ಮಾಡಿದರು.
ಟಿಕೆಟ್ ಕೊಟ್ಟರೆ ಸ್ಪರ್ಧೆ, ಇಲ್ಲದಿದ್ದರೆ ಇಲ್ಲ: ನಾನು ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಮತ್ತೆ ಸ್ಪರ್ಧೆ ಮಾಡಬೇಕೆಂದು ಕ್ಷೇತ್ರದ ಮತದಾರರು ಬಯಸುತ್ತಿದ್ದಾರೆ. ಆದರೆ, ಪಕ್ಷ ಇದಕ್ಕೆ ಅವಕಾಶ ನೀಡಿದರೇ ಸ್ಪರ್ಧೆ ಮಾಡುತ್ತೇನೆ. ಇಲ್ಲದಿದ್ದರೆ ಸಂಸದನಾಗಿ ಇರುತ್ತೇನೆ, ನಾನ್ಯಾಕೆ ಜೆಡಿಎಸ್ ಸೇರಲಿ. ನನಗೇನು ವಯಸ್ಸಾಗಿಲ್ಲ. ದೇವೇಗೌಡರು ಪಕ್ಕದಲ್ಲಿ ಇರುವವರ ಹೆಗಲ ಮೇಲೆ ಕೈ ಹಾಕಿ ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ಆಗಿರುವಷ್ಟು ವಯಸ್ಸು ನನಗೆ ಆಗಿಲ್ಲ. ದೇವೇಗೌಡರಂತೆ ನಾನು ಆ ವಯಸ್ಸಿನವರೆಗೂ ರಾಜಕೀಯ ಮಾಡುತ್ತೇನೆ ಎಂದರು.
ಶಾಸಕ ಹಿಟ್ನಾಳ ಏನು ಮಾಡ್ತಿದ್ದಾರೆ? ಕ್ಷೇತ್ರದಲ್ಲಿ ರಸ್ತೆಗಳೆಲ್ಲವೂ ಹದೆಗೆಟ್ಟಿವೆ. ದುರಸ್ತಿ ಮಾಡಿಸಬೇಕಾದ ಶಾಸಕ ಹಿಟ್ನಾಳ ಅವರು ಏನು ಮಾಡ್ತಿದ್ದಾರೆ. ಅವರಿಗೆ ಕ್ಷೇತ್ರದಲ್ಲಿ ಜವಾಬ್ದಾರಿ ಇಲ್ಲವೇ? ಈ ಹಿಂದೆ ಅವರದ್ದೇ ಸರ್ಕಾರ ಇದ್ದಾಗ ಏನ್ಮಾಡಿದರು? ಸಿಂಗಟಾಲೂರು ಏತ ನೀರಾವರಿ ಜಾರಿಗೆ ಯಾಕೆ ಪ್ರಯತ್ನಿಸಲಿಲ್ಲ. ಈಗ ವಿರೋಧ ಪಕ್ಷದಲ್ಲಿರುವಾಗ ಕೆಲಸ ಮಾಡಬಾರದು ಎನ್ನುವುದೇನಾದರೂ ಇದೆಯಾ? ಎಂದರಲ್ಲದೇ ಪ್ರತಿಯೊಂದು ವಿಷಯದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ನಗರಕ್ಕೆ 2 ಸಾವಿರ ಆಶ್ರಯ ಮನೆಗಳನ್ನು ತಂದರೂ ಇಂದಿಗೂ ಕೊಡಲು ಸಾಧ್ಯವಾಗುತ್ತಿಲ್ಲ. ಕಾಮಗಾರಿ ಪೂರ್ಣಗೊಳಿಸದೇ ದ್ವೇಷದ ರಾಜಕೀಯ ಮಾಡುತ್ತಿದ್ದಾರೆ ಎಂದು ಗುಡುಗಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್, ವಿಭಾಗೀಯ ಉಸ್ತುವಾರಿ ಚಂದ್ರಶೇಖರ ಹಲಿಗೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಗುಳಗಣ್ಣವರ ಉಪಸ್ಥಿತರಿದ್ದರು.