Advertisement

ಅಭಿವೃದ್ಧಿ -ಸಾಧನೆಯೇ ಗೆಲುವಿಗೆ ಮೂಲಮಂತ್ರ: ವೇದವ್ಯಾಸ ಕಾಮತ್‌

06:36 PM Apr 25, 2023 | Team Udayavani |

ಮಂಗಳೂರು: ಕಳೆದ ಐದು ವರ್ಷಗಳಲ್ಲಿ ಮಂಗಳೂರು ನಗರ ದಕ್ಷಿಣ ಕ್ಷೇತ್ರಕ್ಕೆ 4500 ಕೋಟಿ ರೂ.ಗಳಿಗೂ ಅಧಿಕ ಅನುದಾನ ತಂದಿದ್ದು 2000 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳು ನಡೆದಿದೆ, ಬಹಳಷ್ಟು ಕೆಲಸಗಳು ಪ್ರಗತಿಯಲ್ಲಿವೆ, 2025ರ ವೇಳೆಗೆ ಮಂಗಳೂರು ನಗರದ ಚಿತ್ರಣವೇ ಬದಲಾಗಲಿದೆ ಎಂದು ಕ್ಷೇತ್ರದ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್‌ ಹೇಳಿದ್ದಾರೆ.

Advertisement

ನಗರದ ಅಟಲ್‌ ಸೇವಾ ಕೇಂದ್ರದಲ್ಲಿ ಸೋಮವಾರ “ಅಭಿವೃದ್ಧಿ ಪಥ’ ಪುಸ್ತಕ ಬಿಡುಗಡೆ ಬಳಿಕ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಅವರು ಮಾತನಾಡಿ ಅಭಿವೃದ್ಧಿ-ಸಾಧನೆಯೇ ಗೆಲುವಿಗೆ ಮೂಲಮಂತ್ರವಾಗಲಿದೆ ಎಂದರು.

ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಜಲಸಿರಿ ಯೋಜನೆಯ 792 ಕೋಟಿ ರೂ.ಗಳ ಕಾಮಗಾರಿ ಪ್ರಗತಿಯಲ್ಲಿದೆ, 25ಕ್ಕೂ ಹೆಚ್ಚಿನ ಕೆರೆ,  53 ಪಾರ್ಕ್‌ ಅಭಿವೃದ್ಧಿ ಮಾಡಲಾಗುತ್ತಿದೆ. ನಾರಾಯಣ ಗುರು ವೃತ್ತ, ಮಂಜೇಶ್ವರ ಗೋವಿಂದ ಪೈ ವೃತ್ತ ನಿರ್ಮಾಣಗೊಂಡಿದೆ. ಕೋಟಿ ಚೆನ್ನಯ ವೃತ್ತ , ಹುಲಿ ವೇಷದ ಪ್ರತಿಮೆ, ಶಿವಾಜಿ ಪ್ರತಿಮೆಯ ಸರ್ಕಲ್‌ ತಲೆಯೆತ್ತಲಿದ್ದು ನಗರದ ಅಭಿಮಾನವನ್ನು ಹೆಚ್ಚಿಸಲಿದೆ ಎಂದರು.

ಒಳಚರಂಡಿ ಸಮಸ್ಯೆ ಬಗೆಹರಿಸಲು 300 ಕೋಟಿ ರೂ.ಗಳ ಕುಡ್ಸೆಂಪ್‌ ಯೋಜನೆ ಜಾರಿಯಲ್ಲಿದ್ದು,  ಎರಡು ವರ್ಷಗಳಲ್ಲಿ ಎಲ್ಲಾ ಕಾಮಗಾರಿ ಪೂರ್ಣಗೊಳ್ಳಲಿದೆ. ನೆರೆ ಹಾವಳಿ ತಡೆಗೆ  ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಾಣಕ್ಕಾಗಿ 1500 ಕೋಟಿ ರೂ. ಅಗತ್ಯವೆಂದು ಅಂದಾಜಿಸಿದ್ದು ಈಗಾಗಲೇ 125 ಕೋಟಿರೂ.ಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದರು.

ವೆನ್‌ಲಾಕ್‌ಗೆ 125ಕ್ಕೂ ಅಧಿಕ ವೆಂಟಿಲೇಟರ್‌ ಒದಗಿಸಿದ್ದು, ವೆನಾÉಕ್‌, ಲೇಡಿಗೋಷನ್‌, 7 ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೊಳಿಸಿದ್ದು ನಮ್ಮ ಕ್ಲಿನಿಕ್‌ ಆರಂಭಿಸಲಾಗಿದೆ. ಸೆಂಟ್ರಲ್‌ ಮಾರ್ಕೆಟ್‌ನ್ನು ಹೈಟೆಕ್‌ ಮಾರುಕಟ್ಟೆಯಾಗಿ ನಿರ್ಮಿಸಲಾಗುತ್ತಿದೆ, ಮಲ್ಟಿಲೆವೆಲ್‌ ಕಾರ್‌ ಪಾರ್ಕಿಂಗ್‌ ಯೋಜನೆ ಅನುಷ್ಠಾನ ಹಂತದಲ್ಲಿದೆ. ನೇತ್ರಾವತಿ ನದಿ ತೀರದಿಂದ ಸುಲ್ತಾನ್‌ ಬತ್ತೇರಿವರೆಗೆ  ನದಿಮುಖೀ ಯೋಜನೆ, 45 ಕೋಟಿ ರೂ. ವೆಚ್ಚದಲ್ಲಿ ತೂಗುಸೇತುವೆ ಹಾಗೂ ಮೀನುಗಾರಿಕೆಗೆ ಅಗತ್ಯವಾದ ಮೂಲಸೌಲಭ್ಯ ಕಾಮಗಾರಿಗೆ ಒತ್ತು ನೀಡಲಾಗಿದೆ. ದೇವಸ್ಥಾನ ಅಭಿವೃದ್ಧಿ , ಮಂದಿರಕ್ಕೆ ಅನುದಾನ, ಹೀಗೆ ಇನ್ನಿತರ  ಹಿಂದುಳಿದ ಸಮುದಾಯದ ಭವನ ನಿರ್ಮಾಣಕ್ಕೆ ಒತ್ತು, 38 ಕೋಟಿ ರೂ. ಹಿಂದುಳಿದ ಕಲ್ಯಾಣ ಇಲಾಖೆಯಿಂದ ಅನುದಾನ ತಂದು ಅಂಬೇಡ್ಕರ್‌ ಭವನ ನಿರ್ಮಾಣ, ಕಾಲನಿ ಅಭಿವೃದ್ಧಿ  ಕಾರ್ಯಗಳನ್ನು ಕೂಡಾ ತಮ್ಮ ಅವಧಿಯಲ್ಲಿ ಕೈಗೆತ್ತಿಕೊಂಡಿರುವುದಾಗಿ ಅವರು ಹೇಳಿದರು.

Advertisement

ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿವೃದ್ಧಿಪಥ ಪುಸ್ತಕವನ್ನು ಬಿಡುಗಡೆ ಮಾಡಿದರು. ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಮಾಜಿ ಮೇಯರ್‌ ದಿವಾಕರ್‌, ಮನಪಾ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ರೂಪಾ ಡಿ. ಬಂಗೇರ,  ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ನಿತಿನ್‌ ಕುಮಾರ್‌, ಮನಪಾ ಮಾಜಿ ಸದಸ್ಯ ವಿಜಯ ಕುಮಾರ್‌ ಶೆಟ್ಟಿ, ಸುಪ್ರಸಾದ್‌ ಶೆಟ್ಟಿ, ಸುರೇಂದ್ರ ಉಪಸ್ಥಿತರಿದ್ದರು.

ಬೆಂಗ್ರೆ ಜನತೆಗೆ ಹಕ್ಕುಪತ್ರ,ಶಕ್ತಿನಗರದಲ್ಲಿ ಆತಂಕ ನಿವಾರಣೆ

ಕಳೆದ ಸುಮಾರು 40 ವರ್ಷಗಳಿಂದ ಸಿಗದ ಹಕ್ಕು ಪತ್ರಗಳನ್ನು ಬೆಂಗ್ರೆ ಜನತೆಗೆ ಒದಗಿಸಲಾಗಿದೆ.  ಶಕ್ತಿ ನಗರದಲ್ಲಿ ಬಡವರಿಗೆ ಮನೆ ನೀಡುವ ಕುರಿತಂತೆ ಅಲ್ಲಿನ ಡೀಮ್ಡ್ ಫಾರೆಸ್ಟ್‌ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಕಳೆದ ನಾಲ್ಕು ವರ್ಷ ಒಂಭತ್ತು ತಿಂಗಳ ಅವಧಿಯಲ್ಲಿ ಏಳು ಬಾರಿ  ಕೇಂದ್ರ ಸರಕಾರದಿಂದ ತಿರಸ್ಕರಿಸ್ಪಟ್ಟಿದ್ದರೂ, ಕೊನೆಗೂ 8ನೆ ಬಾರಿ ಸಭೆಯಲ್ಲಿ ಪರಿವರ್ತನೆಗೆ ಆದೇಶವಾಗಿದೆ. ಮುಂದಿನ ಅವಧಿಯಲ್ಲಿ  ಮನೆ ಕಟ್ಟುವ ಕಾಮಗಾರಿ ನಡೆಯಲಿದೆ. ಈ ಎಲ್ಲಾ ಅಭಿವೃದ್ದಿ ಕಾರ್ಯಗಳು, ಸಾಧನೆಯಿಂದ ಮುಂದಿನ ಅವಧಿಯಲ್ಲಿಯೂ ಜನತೆ ನನ್ನನ್ನು ಗೆಲ್ಲಿಸುತ್ತಾರೆಂಬ ವಿಶ್ವಾಸ ಇದೆ ಎಂದು ವೇದವ್ಯಾಸ ಕಾಮತ್‌ ಹೇಳಿದರು.

ಗೃಹ ಬಳಕೆ ನೀರಿನ ದರ ಇಳಿಕೆ
ಆಡಳಿತಾಧಿಕಾರಿ ಅಧಿಕಾರದಲ್ಲಿ ಇದ್ದ ಸಂದರ್ಭ 2019ರ ಎ. 1ರಿಂದ ಅನ್ವಯವಾಗುವಂತೆ ಪಾಲಿಕೆಯಲ್ಲಿ ನೀರಿನ ಶುಲ್ಕ ಹೆಚ್ಚಳ ಮಾಡಲಾಗಿತ್ತು. ಹಾಗೂ ಕನಿಷ್ಠ ನೀರಿನ ಬಳಕೆ ಮಿತಿಯನ್ನು 24000 ಲೀಟರ್‌ನಿಂದ 8 ಸಾವಿರ ಲೀಟರ್‌ಗೆ ಇಳಿಕೆ ಮಾಡಿ ಜನಸಾಮಾನ್ಯರಿಗೆ ಹೊರೆಯಾಗಿತ್ತು. ಪಾಲಿಕೆಯಲ್ಲಿ ಬಿಜೆಪಿ ಆಡಳಿತಕ್ಕೆ ಬಂದರೆ ನೀರಿನ ಶುಲ್ಕ ಕಡಿತ ಮಾಡುವ ಆಶ್ವಾಸನೆಯಂತೆ ಮುಖ್ಯಮಂತ್ರಿ ಮೂಲಕ ವಿಶೇಷ ಪ್ರಯತ್ನದ ಪರಿಣಾಮ ಬಳಕೆಯ ಮಿತಿಯನ್ನು 20,000 ಲೀಟರ್‌ಗೆ ಏರಿಕೆ ಮಾಡಿದ್ದಲ್ಲದೆ ಕನಿಷ್ಟ  140 ರೂ. ಇದ್ದ ನೀರಿನ ದರವನ್ನು 100 ರೂ.ಗೆ ಇಳಿಕೆ ಮಾಡಲಾಯಿತು ಎಂದು ವೇದವ್ಯಾಸ ಕಾಮತ್‌ ಹೇಳಿದರು.

ಮುಡಾ ತೆರಿಗೆ ಸರಳೀಕರಣ
ಸಿಂಗಲ್‌ ಸೈಟ್‌ಗೆ ಹೊರೆಯಾಗಿದ್ದ ಮುಡಾ ಆಸ್ತಿ ಖರೀದಿ ತೆರಿಗೆಯನ್ನು ಶೇ. 15 ಇಳಿಕೆ ಮಾಡಿ ಸಿಂಗಲ್‌ ಸೈಟ್‌ ಖರೀದಿದಾರರಿಗೆ ಅನುಕೂಲ ಮಾಡಲಾಗಿದೆ ಎಂದರು.

ಒಂದೇ ಕ್ಷೇತ್ರದ ಮೂರುಕಾಲೇಜುಗಳಿಗೆ ನ್ಯಾಕ್‌ ಎ ಗ್ರೇಡ್‌

ಮಂಗಳೂರು ದಕ್ಷಿಣ ಕ್ಷೇತ್ರದ ಮೂರು ಸರಕಾರಿ ಪದವಿ ಕಾಲೇಜುಗಳು ನ್ಯಾಕ್‌ನಿಂದ “ಎ’ ಗ್ರೇಡ್‌ ಪಡೆದಿದ್ದು, ಕ್ಷೇತ್ರವೊಂದರಲ್ಲಿ ಇಂತಹ ಸಾಧನೆ ಇದು ರಾಜ್ಯದಲ್ಲೇ ಪ್ರಥಮ ಎಂದು ವೇದವ್ಯಾಸ ಕಾಮತ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next