Advertisement

ಜನರ ಸಹಕಾರ ಮನೋಭವಾನೆಯಿದ್ದರೆ ಅಭಿವೃದ್ಧಿ

09:29 PM Aug 06, 2019 | Team Udayavani |

ದೇವನಹಳ್ಳಿ: ಪ್ರತಿಯೊಬ್ಬರೂ ಸಹಕಾರ ಮನೋಭಾವವಿದ್ದರೆ ಅಭಿವೃದ್ಧಿ ಸಾಧ್ಯ. ಮೊದಲೆಲ್ಲ ಹಳ್ಳಿಗಳಲ್ಲಿ ಶಾಲೆ ನಿರ್ಮಾಣವಾಗಬೇಕಾದರೆ ಸ್ಥಳೀಯರು ಪರಸ್ಪರ ಸಹಕಾರ ಮನೋಭಾವನೆಯಿಂದ ಕೈ ಜೋಡಿಸಿ, ವಿಶೇಷ ಕಾಳಜಿ ವಹಿಸುತ್ತಿದ್ದರು ಎಂದು ಜಿಪಂ ಸದಸ್ಯ ಲಕ್ಷ್ಮಿನಾರಾಯಣಪ್ಪ ಹೇಳಿದರು. ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ಜೊನ್ನಹಳ್ಳಿ ಮಾರುತಿ ಪ್ರೌಢಶಾಲೆ ಆವರಣದಲ್ಲಿ ಶಾಸಕರ ವಿಶೇಷ ಅನುದಾನದಡಿ 20 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಶಾಲಾ ಕೊಠಡಿಗಳ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದರು.

Advertisement

ಹಳ್ಳಿಗಳಲ್ಲಿ ಶಾಲೆಗಳು ಉಳಿದರೆ, ಈಗಿನ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಲಿಕ್ಕೆ ಸಾಧ್ಯವಾಗುತ್ತದೆ. ಇತ್ತಿಚೆಗೆ ಗಾಳಿ, ಮಳೆಯಿಂದಾಗಿ ಮೇಲ್ಛಾವಣಿ ಹಾರಿ ಹೋಗಿ ಮಕ್ಕಳ ಕಲಿಕೆಗೆ ತೊಡಕಾಗಿದ್ದರಿಂದ ಶಾಸಕರ ವಿಶೇಷ ಅನುದಾನದಲ್ಲಿ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಶಾಲಾಭಿವೃದ್ಧಿ ಸಮಿತಿಯವರು ಸೇರಿದಂತೆ ಮುಖ್ಯಶಿಕ್ಷಕರು ವಿಶೇಷ ಕಾಳಜಿ ವಹಿಸಿ ಗುಣಮಟ್ಟ ಪರಿಶೀಲನೆ ಮಾಡಿಕೊಳ್ಳಬೇಕು. ಕೊಠಡಿಗಳು ಶಾಶ್ವತವಾಗಿರುವಂತೆ ಕಾಮಗಾರಿಯಾಗಬೇಕು ಎಂದರು.

ಹಿಂದಿನ ಕಾಲದಲ್ಲಿ ಶಾಲಾ ಕಟ್ಟಡಗಳು ಉತ್ತಮ ಗುಣಮಟ್ಟದಿಂದ ಕೂಡಿರುತ್ತಿದ್ದವು. 80 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಶಾಲೆಗಳು ನಮ್ಮಲ್ಲಿ ಇನ್ನೂ ಉತ್ತಮ ಸ್ಥಿತಿಯಲ್ಲಿವೆ. 20 ವರ್ಷಗಳ ಹಿಂದೆ ನಿರ್ಮಾಣ ಮಾಡಿರುವ ಕಟ್ಟಡಗಳು ನೆಲಕ್ಕುರುಳುವ ಸ್ಥಿತಿಗೆ ತಲುಪಿವೆ. ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರ ಎಷ್ಟೇ ಅನುದಾನ ನೀಡಿದರೂ ಅದು ಸದುಪಯೋಗವಾಗಲಿದೆ ಎಂದರು.

ಮುಖಂಡ ದೊಡ್ಡಕುರುಬರಹಳ್ಳಿ ಹನುಮೇಗೌಡ ಮಾತನಾಡಿ, ನಮಗೆ ಅಗತ್ಯವಾಗಿರುವ ಎಲ್ಲಾ ವಸ್ತುಗಳನ್ನು ಕಾರ್ಖಾನೆಗಳಿಂದ ತಯಾರು ಮಾಡುತ್ತಾರೆ. ನಾವು ತಿನ್ನುವ ಅನ್ನವನ್ನು ಭೂಮಿಯಿಂದ ಬೆಳೆದುಕೊಳ್ಳುತ್ತೇವೆ. ಆದರೆ, ಜ್ಞಾನವನ್ನು ಎಲ್ಲಿಯೂ ಖರೀದಿ ಮಾಡಲಿಕ್ಕೆ ಆಗಲ್ಲ, ಯಾವ ಕಾರ್ಖಾನೆಗಳಿಂದಲೂ ತಯಾರು ಮಾಡಲಿಕ್ಕೆ ಸಾಧ್ಯವಿಲ್ಲ. ಅದು ಶಾಲೆಗಳಲ್ಲಿ ಕಲಿಯುವ ಸಂಸ್ಕಾರದಿಂದ ಮಾತ್ರ ಬರಲಿಕ್ಕೆ ಸಾಧ್ಯವಾಗುತ್ತದೆ.

ಆದ್ದರಿಂದ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗುವುದರ ಬದಲಿಗೆ ಶಾಲೆಗಳು ಹೆಚ್ಚಾಗಬೇಕು. ಪೋಷಕರು ವಿಶೇಷ ಕಾಳಜಿವಹಿಸಬೇಕು. ಮುಂಬರುವ ದಿನಗಳಲ್ಲಿ ನಗರದಲ್ಲಿನ ಖಾಸಗಿ ಶಾಲೆಗಳಿಗಿಂತ ಗ್ರಾಮಾಂತರ ಪ್ರದೇಶಗಳಲ್ಲಿ ಶಾಲೆಗಳೇ ಮೇಲುಗೈ ಸಾಧಿಸಲಿವೆ ಎಂದರು. ಮುಖ್ಯಶಿಕ್ಷಕ ಕೃಷ್ಣಮೂರ್ತಿ, ಸಹಶಿಕ್ಷಕರು, ಸ್ಥಳೀಯ ಮುಖಂಡರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next