ಅಳ್ನಾವರ: ಪ್ರಸ್ತುತ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಶಿಕ್ಷಣ ಇದ್ದರೆ ಸಾಲದು. ಜತೆಗೆ ಜೀವನೋಪಾಯಕ್ಕೆ ಬೇಕಾದ ತರಬೇತಿ, ಉದ್ಯಮಶೀಲತೆ, ಕೌಶಲ ರೂಢಿಸಿಕೊಳ್ಳಬೇಕು. ಅರ್ಹರಿಗೆ ಇಂತಹ ಮಾರ್ಗದರ್ಶನ ನೀಡಲು ಜಿಲ್ಲಾ ಕೌಶಲ ವಿಭಾಗ ಶ್ರಮಿಸುತ್ತದೆ ಎಂದು ಜಿಲ್ಲಾ ಕೌಶಲ ಅಧಿ ಕಾರಿ ಡಾ| ಎಂ.ಎಸ್. ಚಂದ್ರಪ್ಪ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್, ಕ್ರೀಡಾ ವಿಬಾಗ, ಯುಥ್ ರೆಡ್‌ಕ್ರಾಸ್ ಘಟಕ, ಸ್ಥಳೀಯ ಲಯನ್ಸ್ ಕ್ಲಬ್ , ರೋಟರಿ ಬ್ಲಿಡ್ ಬ್ಯಾಂಕ್ ಹಾಗೂ ಜಿಲ್ಲಾಸ್ಪತ್ರೆ ಮತ್ತು ಜಿಲ್ಲಾ ಕೌಶಲ ತರಬೇತಿ ಇಲಾಖೆ ವತಿಯಿಂದ ರಾಷ್ಟ್ರೀಯ ಯುವ ಸಪ್ತಾಹ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡ ಸ್ವಯಂ ರಕ್ತದಾನ ಶಿಬಿರ ಹಾಗೂ ಕೌಶಲ ಅಭಿವೃದ್ಧಿ ಕುರಿತ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಗರ, ಗ್ರಾಮೀಣ ಹಾಗೂ ಬಡತನ ರೇಖೆಗಿಂತ ಕೆಳಗಿನ ಸ್ತರದ ಜನರ ಬದುಕನ್ನು ಎತ್ತರಿಸಲು ಜಿಲ್ಲಾ ಕೌಶಲ ಅಭಿವೃದ್ಧಿ ಇಲಾಖೆ ಉಪಯುಕ್ತ ಯೋಜನೆ, ತರಬೇತಿ ಹಮ್ಮಿಕೊಂಡಿದೆ. ಕಾಲ ಕಾಲಕ್ಕೆ ಉದ್ಯಮ ಮೇಳ ಆಯೋಜಿಸಿ ಉದ್ಯೋಗಾವಕಾಶ ನೀಡುವಲ್ಲಿ ಸದಾ ಮುಂದಿದೆ ಎಂದರು.
ನಮ್ಮ ದೇಶ ಯುವ ಸಂಪತ್ತಿನಿಂದ ಕೂಡಿದೆ. ಇದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಈ ನಿಟ್ಟಿಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದರ ಜೊತಗೆ ಸಾಂಪ್ರದಾಯಿಕ ಉದ್ಯೋಗ ಮರೆಯಬಾರದು. ಸರ್ಕಾರದ ಮೂಲ ಉದ್ದೇಶ ನಿಮ್ಮ ಬದುಕು ರೂಪಿಸುವುದು. ಇದರ ಲಾಭ ಪಡೆದುಕೊಂಡು ಪ್ರಗತಿ, ಸಾಧನೆಗೆ ಕೈ ಜೋಡಿಸಿ ಎಂದು ಮನವಿ ಮಾಡಿದರು.
ಧಾರವಾಡ ರೋಟರಿ ಬ್ಲಡ್ ಬ್ಯಾಂಕ್ ಆರೋಗ್ಯಾ ಧಿಕಾರಿ ಡಾ| ನಂದೇಶ ಮಾತನಾಡಿ, ರಕ್ತ ಮಾನವನ ಬದುಕಿಗೆ ಅತೀ ಅವಶ್ಯ ವಸ್ತು. ರಕ್ತದಾನ ಅತ್ಯಂತ ಶ್ರೇಷ್ಠ ಕಾರ್ಯ. ರಕ್ತ ನೀಡುವ ಮೂಲಕ ಇನ್ನೊಂದು ಜೀವ ಬದುಕಿಸಬಹುದು ಎಂದರು. ಪ್ರಾಂಶುಪಾಲರಾದ ಡಾ| ಸಿ.ಎನ್. ಹೊಂಬಾಳಿ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ರಾಜಶೇಖರ ಹಿರೇಮಠ, ಪ್ರಶಾಂತ ಸೋನಾರ, ಪಿ.ಆರ್. ನಾಗರಾಳ, ಮಹ್ಮದ್‌ಶಫಿ ವಡ್ಡೊ, ಸಂತೋಷ ಜಾಧವ, ಶ್ರೀಪಾಲ ಕುರಕುರಿ, ರಾಧಿಕಾ ಆಪ್ಟೆ, ಅರುಣ ನಾಯ್ಕ, ವಿನಯಕುಮಾರ, ವರುಣ ಅಪರಾಜ ಇದ್ದರು. ಈಶ್ವರಿ ಕಲಾಲ ಸ್ವಾಗತಿಸಿದರು. ರಾಜೇಶ್ವರಿ ಮರಾಠಿ ನಿರೂಪಿಸಿದರು. ಸೇವಂತಿ ಜವಳೇಕರ ವಂದಿಸಿದರು.