ನಂಜನಗೂಡು: ಭೂಮಿತಾಯಿಯನ್ನು ನಂಬಿದವರು ಯಾರೂ ಹಾಳಾಗಿಲ್ಲ. ಸಹನೆ, ಶ್ರಮದಿಂದ ದುಡಿದರೆ ಕೋಟಿ ಕೋಟಿ ಸಂಪಾದಿಸಬಹುದು ಎಂದು ಸಾವಯವ ಕೃಷಿ ಸಾಧಕಿ ಮಾನ್ವಿ ತಾಲೂಕಿನ ಕವಿತಾ ಮಿಶ್ರಾ ಪ್ರತಿಪಾದಿಸಿದರು.
ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ನಡೆದ ಕೃಷಿ ಮೇಳ ಸಮಾರೋಪದಲ್ಲಿ ಮಾತನಾಡಿದ ಅವರು, ತಾವು ಕಂಪ್ಯೂಟರ್ ಪದವೀಧರೆಯಾಗಿದ್ದರೂ ಕೃಷಿ ಕ್ಷೇತ್ರ ಆಯ್ದುಕೊಂಡೆ. ಮಾನ್ವಿಯಲ್ಲಿ ಸುಮಾರು ನಾಲ್ಕೂವರೆ ಲಕ್ಷ ಶ್ರೀಗಂಧದ ಸಸಿಗಳನ್ನು ಬೆಳೆದು ಪ್ರತಿ ಗಿಡಕ್ಕೆ 30 ರೂ.ನಂತೆ ಮಾರಾಟ ಮಾಡಿ ಲಕ್ಷಾಂತರ ರೂ. ಆದಾಯ ಪಡೆದಿದ್ದೇನೆ ಶ್ರೀಗಂಧ ಬೆಳೆದರೆ ಸರ್ಕಾರವೇ ಪ್ರತಿ ಕೆ.ಜಿ.ಗೆ 6780 ರೂ. ನೀಡಿ ಖರೀದಿಸುತ್ತದೆ. ಮೈಸೂರು ನಾಡು ಗಂಧದ ಬೀಡು, ನೀವೇಕೆ ಶ್ರೀಗಂಧ ಬೆಳೆಯಬಾರದು ಎಂದು ಪ್ರಶ್ನಿಸಿದರು.
ದಾಳಿಂಬೆ ಬೆಳೆದು 50 ಲಕ್ಷ ರೂ. ಸಂಪಾದಿಸಿ, ಕೊನೆಗೆ ಕೈಸುಟ್ಟುಕೊಂಡಿದ್ದನ್ನು ವಿವರಿಸಿದ ಅವರು, ಸಾವಯವ ಕೃ ಷಿಕ ರಾಗಿ ಪರಾವಲಂಬಿಗಳಾಗಬೇಡಿ. ವಲಸಿಗ ರಾಗಿ ನಗರೀಕರಣದ ಭಿಕ್ಷುಕರಾಗದೇ ನಿಮ್ಮ ಕಾಲ ಮೇಲೆ ನೀವು ನಿಲ್ಲಿ. ನಿಮ್ಮ ಕೃಷಿ ಸಹಾಯಕ್ಕೆ ಬೇಕಾದ ಎಲ್ಲಾ ಮಾಹಿತಿ ಯನ್ನು ನೀಡಲು ತಾನು ಸಿದ್ಧ ಎಂದರು.
ಮತ್ತೋರ್ವ ಕೃಷಿ ಸಾಧಕ ಇಂಡಿ ತಾಲೂಕಿನ ಎಸ್.ಟಿ. ಪಾಟೀಲ್ ಮಾತ ನಾಡಿ, ಸಾಲಮನ್ನಾ ಮಾಡಿ ಎಂದು ಕೇಳು ವವರು ರೈತರಲ್ಲ. ನಮಗೆ ಸರ್ಕಾರದ ಭಿಕ್ಷೆ ಬೇಕಾಗಿಲ್ಲ. ರಾಸಾಯನಿಕದಿಂದ ದೂರ ವಿದ್ದು, ಭೂಮಿಯ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಪ್ರಗತಿಪರ ರೈತರಾದ ಶಿರಟ್ಟಿಯ ಬಸವರಾಜ ನಾವಿ ಹಾಗೂ ಹೆಗ್ಗವಾಡಿಯ ಶಿವಕುಮಾರ್ ತಮ್ಮ ಕೃಷಿ ಸಾಧನೆ ಹಂಚಿಕೊಂಡರು. ಬಸವಕೇಂದ್ರದ ಮರುಳಸಿದ್ಧಸ್ವಾಮೀಜಿ, ಶಿವಮೊಗ್ಗ ಶಾಸಕ ಎಸ್. ರುದ್ರೇಗೌಡ, ಮಾಜಿ ಶಾಸಕ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಇತರರಿದ್ದರು.