ಯಾದಗಿರಿ: ಆಶನಾಳ ಗ್ರಾಮದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಲು ಸರ್ಕಾರ ಸುಮಾರು 302 ಎಕರೆ ಜಮೀನು ಗುರುತಿಸಿದ್ದು, ಸ್ವಾಧೀನ ಪ್ರಕ್ರಿಯೆ ಪೂರ್ಣವಾಗಿಲ್ಲ. ಜಿಲ್ಲೆಯ ಕೇಂದ್ರ ಸ್ಥಾನವಾದ ಯಾದಗಿರಿಯಲ್ಲಿ ಕೈಗಾರಿಕೆ ಸ್ಥಾಪಿಸಲು ಬಹಳಷ್ಟು ಕೈಗಾರಿಕೋದ್ಯಮಿಗಳು ಉತ್ಸುಕರಾಗಿದ್ದು ಕೈಗಾರಿಕಾ ನಿವೇಶನಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ದಿನೇಶಕುಮಾರ ಜೈನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕೈಗಾರೀಕರಣ ವಿಶೇಷವಾಗಿ ಎಂಎಸ್‌ಎಂಇ ವಲಯದ ಅಭಿವೃದ್ಧಿ ಹಿತದೃಷ್ಟಿಯಿಂದ ಆಶನಾಳ ಕೈಗಾರಿಕಾ ವಸಾಹತು ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ, ಆದಷ್ಟು ಬೇಗ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.
“ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಯಡಿ ಎಲ್ಲ ಕೃಷಿ ಉತ್ಪನ್ನ ಸೇರ್ಪಡೆ ಮಾಡಲಾಗಿದೆ. ಸದರಿ ಯೋಜನೆಯಲ್ಲಿ ಶೇ.50ರ ವರೆಗೆ ಸಹಾಯಧನ ಸರ್ಕಾರ ಘೋಷಿಸಿದೆ. ಇದರ ಉಪಯೋಗ ಜಿಲ್ಲೆಯ ಎಲ್ಲ ಯುವ ಜನತೆ ಮತ್ತು ಉದ್ಯಮಿದಾರರಿಗೆ ಸಿಗುವಂತೆ ನೋಡಿಕೊಳ್ಳುತ್ತೇವೆ. ಡೀಸೆಲ್-ಪೆಟ್ರೋಲ್ ದರ ಏರಿಕೆಯಿಂದ ಉದ್ಯಮಗಳಿಗೆ ಭಾರೀ ಹೊಡೆತ ಬೀಳುತ್ತಿದ್ದು, ಶೀಘ್ರ ಕೇಂದ್ರ ಸರ್ಕಾರ ದರಗಳ ಮೇಲಿನ ತೆರಿಗೆ ಕಡಿತಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಯಾದಗಿರಿ ನಗರ ದಿನೇ-ದಿನೇ ಬೆಳೆಯುತ್ತಿರುವುದರಿಂದ ನಗರದ ಹೊರವಲಯದಲ್ಲಿ ರಿಂಗ್ ರೋಡ್ ನಿರ್ಮಿಸುವ ಅವಶ್ಯಕತೆ ಇದೆ. ಮುಖ್ಯ ಮಾರ್ಗದ ಮೂಲಕ ಭಾರೀ ವಾಹನಗಳು ಸಂಚರಿಸುವುದರಿಂದ ಪ್ರತಿ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ನಗರದಲ್ಲಿ ಜಡ ವಾಹನಗಳನ್ನೊಳಗೊಂಡು ಎಲ್ಲ ರೀತಿಯ ವಾಹನಗಳು ನಗರದ ಹೊರವಲಯದಿಂದ ಹಾದು ಹೋಗುವ ಔಟರ್ ರಿಂಗ್ ರೋಡ್ ನಿರ್ಮಿಸಬೇಕು. ಭಾರತ ಮಾಲಾ ರಸ್ತೆಯು ಜಿಲ್ಲೆಯ ಶಹಾಪುರ ತಾಲೂಕಿನ ಮೂಲಕ ಹಾದು ಹೋಗುತ್ತಿದ್ದು, ಸಂಬಂಧಪಟ್ಟ ಇಲಾಖೆಗಳೊಂದಿಗೆ ಪತ್ರ ವ್ಯವಹಾರ ಕೈಗೊಳ್ಳಲಿದ್ದೇವೆ. ಯಾದಗಿರಿ ಮೂಲಕ ಹಾದು ಹೋಗುವ ಎಲ್ಲ ರೈಲುಗಳನ್ನು ಇಲ್ಲಿನ ನಿಲ್ದಾಣದಲ್ಲಿ ನಿಲ್ಲಿಸಬೇಕು ಎಂದು ಕೇಂದ್ರ ರೈಲ್ವೆ ಮಂತ್ರಿಗಳಿಗೂ ನಿಯೋಗದಿಂದ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಯಾದಗಿರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಈಗಾಗಲೇ ಕಟ್ಟಡ ನಿರ್ಮಿಸಲು ಯಾದಗಿರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ನಿವೇಶನ ಖರೀದಿಸಲಾಗಿದೆ. ನಿವೇಶನದಲ್ಲಿ ಸುಸಜ್ಜಿತ ಕಟ್ಟಡ ಕಟ್ಟಲು ಶ್ರಮಿಸುತ್ತೇವೆ ಎಂದರು.
ಜಿಲ್ಲಾ ಅಕ್ಕಿ ಗಿರಣಿದಾರರ ಸಂಘದ ಅಧ್ಯಕ್ಷ ಲಾಯಕ ಹುಸೇನ್ ಬಾದಲ್ ಮಾತನಾಡಿ, ಬ್ಯಾಂಡೆಡ್ ಅಲ್ಲದ ಆಹಾರ ಉತ್ಪನ್ನಗಳ ಮೇಲೆ ಜಿಎಸ್‌ಟಿ ಹೇರಿದ ಕೇಂದ್ರದ ಕ್ರಮ ಸರಿಯಲ್ಲ. ಜಿಎಸ್‌ಟಿ ಸಭೆಯಲ್ಲಿ ಆಯ್ದ ಆಹಾರ ಉತ್ಪನ್ನಗಳ ಮೇಲೆ ಶೇ.5 ತೆರಿಗೆ ವಿಧಿಸಲು ತೀರ್ಮಾನಿಸಿದ್ದು ಜನವಿರೋಧಿಯಾಗಿದೆ. ಇದರ ದುಷ್ಪರಿಣಾಮ ಕೊನೆಯದಾಗಿ ಗ್ರಾಹಕರು ಮತ್ತು ರೈತರ ಮೇಲೆ ನೇರವಾಗಿ ಬೀರಲಿದ್ದು, ಇದನ್ನು ನಾವು ವಿರೋಧಿಸುತ್ತೇವೆ ಎಂದರು.
ಶೇ.5 ಜಿಎಸ್‌ಟಿ ಕಟ್ಟಬೇಕೆಂದು ರೂಪಿಸಿದ ನಿಯಮ ಅವೈಜ್ಞಾನಿಕ. ಈಗಾಗಲೇ ರೈತರು ಭತ್ತ ಬೆಳೆಯುವುದು ಬಿಟ್ಟು ಪರ್ಯಾಯ ಬೆಳೆಯತ್ತ ಆಕರ್ಷಿತರಾಗಿದ್ದಾರೆ. ಅಕ್ಕಿ ಮೇಲೆ ಜಿಎಸ್‌ಟಿ ಹಾಕಿರುವುದರಿಂದ ಈಗಾಗಲೇ ರೈತರು ಬೇರೆ ಬೆಳೆಯತ್ತ ಮುಖ ಮಾಡುತ್ತಿದ್ದು, ಅಕ್ಕಿ ಮೇಲೆ ಜಿಎಸ್‌ಟಿ ಹಾಕುವುದರಿಂದ ದೇಶದಲ್ಲಿ ಆಹಾರದ ಕೊರತೆ ಉಂಟಾಗುವ ಅಪಾಯವಿದೆ ಎಂಬುದನ್ನು ಸರ್ಕಾರ ಮನಗಾಣಬೇಕು ಎಂದರು. ಈ ವೇಳೆ ಹನುಮಾನ್‌ದಾಸ ಮುಂದಡಾ, ವಿಷ್ಣುಕುಮಾರ ವ್ಯಾಸ, ಶಾಮಸುಂದರ್ ಭಟ್ಟಡ್, ಭರತ್‌ಕುಮಾರ ಭಾನುಶಾಲಿ ಸೇರಿದಂತೆ ಇತರರಿದ್ದರು.