ಬೀದರ: ಮಕ್ಕಳ ಮನಸ್ಸು ನಿರ್ಮಲವಾದದ್ದು, ಅವರನ್ನು ಓದುವುದಕ್ಕೆ ಮಾತ್ರ ಸೀಮಿತಗೊಳಿಸದೇ ಎಲ್ಲ ರೀತಿಯ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುವುದು ತುಂಬಾ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷೆ ಭಾರತಬಾಯಿ ಶೇರಿಕಾರ ಹೇಳಿದರು.
ಜಿಲ್ಲಾ ಬಾಲ ಭವನದಲ್ಲಿ ರಾಜ್ಯ ಬಾಲ ಭವನ ಸೂಸೈಟಿ ಬೆಂಗಳೂರು, ಭಾರತ ವಿಜ್ಞಾನ ಸಮಿತಿ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಮೂಢನಂಬಿಕೆ ಹೊಗಲಾಡಿಸಿ, ವೈಜ್ಞಾನಿಕ ಮನೋಭಾವ ಮೂಡಿಸುವ ಕಾರ್ಯ ನಡೆಯಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಇತರೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರಣೆ ನೀಡಬೇಕು ಎಂದು ಸಲಹೆ ನೀಡಿದರು.
ನಗರ ಸಭೆ ಅಧ್ಯಕ್ಷೆ ಶಾಲಿನಿ ರಾಜು ಚಿಂತಾಮಣಿ ಮಾತನಾಡಿ, ಮಕ್ಕಳು ಟಿವಿ, ಸಿನಿಮಾ, ಹಾವಳಿಯಿಂದ ದೂರವಿದ್ದು, ಸಾಹಿತ್ಯ, ಸಂಸ್ಕೃತಿ ಹಾಗೂ ರಂಗಭೂಮಿಯತ್ತ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು. ಈ ಕುರಿತು ಮಕ್ಕಳಿಗೆ ಪ್ರೇರೇಪಿಸಬೇಕು. ಮಕ್ಕಳಿಗೆ ಸರ್ವತೋಮುಖ ಬೇಳವಣಿಗೆ ಸಹಕರಿಸಬೇಕು ಎಂದರು. ಪ್ಲಾಸ್ಟಿಕ್ ಮುಕ್ತ ಬೀದರ ನಗರ ಮಾಡುವ ಉದ್ದೇಶವಿದ್ದು, ಈ ಕುರಿತು ಮಕ್ಕಳಲ್ಲಿ ಕೂಡ ಶಿಕ್ಷಕರು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಮಾತನಾಡಿದರು. ಚಂದ್ರಪ್ಪಾ ಹೆಬ್ಟಾಳ್ಕರ್, ದೇವಿಪ್ರಸಾದ ಕಲಾಲ, ಶಾಮರಾವ್ ನೆಲ್ವಾಡೆ, ಸಂಜುಕುಮಾರ ಸ್ವಾಮಿ, ಬಾಬುರಾವ್ ಸಲ್ಸಾರೆ, ಶಂಭುಲಿಂಗ ವಾಲೊಡಿ, ಸಂಜೀವ ಕುಮಾರ ಅತಿವಾಳೆ, ಎಂ.ಎಸ್. ಮನೋಹರ, ಮಹೇಶ ಗೊರನಾಳಕರ್ ಇದ್ದರು.