ಬನ್ನೂರು: ಯಾಚೇನಹಳ್ಳಿ ಸುತ್ತಮುತ್ತಲಿನ ಬನ್ನೂರು ಹೋಬಳಿಯ ಕಾಡಾ ವ್ಯಾಪ್ತಿಗೆ ಬರುವ ರಸ್ತೆಗಳನ್ನು ಅಭಿವೃದ್ಧಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕೆಂದು ಯಾಚೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್.ಶಂಕರೇಗೌಡ, ಕಾಡಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಎಚ್.ಎಸ್. ನಂಜಪ್ಪ ಅವರಿಗೆ ಮನವಿ ಮಾಡಿದರು.
ಯಾಚೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಕಾಡಾ ಅಧ್ಯಕ್ಷ ಎಚ್.ಎಸ್.ನಂಜಪ್ಪರವರಿಗೆ ಗ್ರಾಮದಲ್ಲಿರುವ ರಸ್ತೆಗಳನ್ನು ತೋರಿಸಿ ಮಾತನಾಡಿದರು. ಯಾಚೇನಹಳ್ಳಿ ಗ್ರಾಮ ಕೃಷಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ಗ್ರಾಮ. ಇದನ್ನು ಅಭಿವೃದ್ಧಿ ಮಾಡುವತ್ತ ಗ್ರಾಮದ ಎಲ್ಲಾ ಯುವಕರು ಕೈ ಜೋಡಿಸಿದ್ದಾರೆ. ಅಂತಹವರಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಗ್ರಾಮದಲ್ಲಿ ರಸ್ತೆಗಳು ಹಾಳಾಗಿದೆ. ಇದರಿಂದ ರೈತರು ತಾವು ಬೆಳೆಯುವ ಬೆಳೆಗಳನ್ನು ಸಾಗಣೆ ಮಾಡಲು ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ. ಇದರಿಂದ ರಸ್ತೆಗಳನ್ನು ಅಭಿವೃದ್ಧಿಗೊಳಿಸಿ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದರು.
ನಂತರ ಮಾತನಾಡಿದ ಕಾಡಾ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಯಾಚೇನಹಳ್ಳಿ ಅಭಿವೃದ್ಧಿಯಲ್ಲಿ ಮಾದರಿ ಗ್ರಾಮವಾಗಿದೆ. ಎಲ್ಲರೂ ಒಟ್ಟಾಗಿ ಗ್ರಾಮದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿರುವುದು ಬಹಳಷ್ಟು ಸಂತಸ ವಿಷಯ. ಆದರೆ ಗ್ರಾಮದ ರಸ್ತೆಗಳನ್ನು ಅಭಿವೃದ್ಧಿ ಮಾಡಿದರೆ ಇನ್ನಷ್ಟು ಪ್ರಗತಿ ಕಾಣಲಿದೆ ಎಂದರು.
ಗ್ರಾಮದ ಮುಖಂಡರು, ಸಾರ್ವಜನಿಕರಿಂದ ಅಹವಾಲನ್ನು ಸ್ವೀಕರಿಸಿದ್ದು, ಕಾಡಾ ವ್ಯಾಪ್ತಿಯ ಪ್ರಮುಖ ರಸ್ತೆಗಳನ್ನು ಶೀಘ್ರದಲ್ಲಿಯೇ ಉತ್ತಮಪಡಿಸಲು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಕರ್ನಾಟಕ ಸಹಕಾರ ಮಾರಾಟ ಮಹಾಮಂಡಲದ ನಿರ್ದೇಶಕ ಜಯರಾಮು, ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಶಿವನಾಗಪ್ಪ, ಮುಖಂಡರಾದ ವೈ.ಎಚ್.ಹನುಮಂತೇಗೌಡ, ವೈ.ಜೆ. ಪುಟ್ಟಪ್ಪ, ವೈ.ಎಲ್.ಸಣ್ಣಮರೀಗೌಡ, ವೈ.ಜಿ.ಮಹೇಂದ್ರ, ವೈ.ಸಿ.ದೇವನಾಥ್, ವೈ.ಜಿ.ಮಹದೇವು, ವೈ.ಎ.ಪುಟ್ಟರಾಜು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಕ್ಯಾತೇಗೌಡ, ಮುಖಂಡರು, ಸಾರ್ವಜನಿಕರು ಇದ್ದರು.