Advertisement

ಕೆಸಿಎನ್‌ ವಿರುದ್ಧ ದೇವೇಗೌಡರ ಗುಡುಗು

10:20 AM Mar 02, 2020 | Lakshmi GovindaRaj |

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ನಿಷೇಧ, ಸಚಿವ ಹಾಗೂ ಕೆ.ಆರ್‌.ಪೇಟೆ ಕ್ಷೇತ್ರದ ಶಾಸಕ ಕೆ.ಸಿ.ನಾರಾಯಣಗೌಡರು ಜೆಡಿಎಸ್‌ ಕಾರ್ಯಕರ್ತರ ಮೇಲೆ ದಬ್ಟಾಳಿಕೆ ನಡೆಸುತ್ತಿದ್ದಾರೆಂದು ಆರೋಪಿಸಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಶನಿವಾರ ಜೆಡಿಎಸ್‌ ಕಾರ್ಯಕರ್ತರ ಜೊತೆ ಸೇರಿ ಪ್ರತಿಭಟನೆ ನಡೆಸಿದರು. ಆ ಮೂಲಕ ಸಚಿವ ಕೆ.ಸಿ.ನಾರಾಯಣಗೌಡರ ವಿರುದ್ಧ ಮಾಜಿ ಪ್ರಧಾನಿಯವರು ನೇರ ಹೋರಾಟಕ್ಕೆ ಇಳಿದಿದ್ದಾರೆ.

Advertisement

ಕೆ.ಆರ್‌.ಪೇಟೆ ತಾಲೂಕಿನ ಹರಳಹಳ್ಳಿ ಸರ್ವೇ ನಂ. 222ರಲ್ಲಿ ಜೆಡಿಎಸ್‌ ಮುಖಂಡ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌.ಟಿ.ಮಂಜು ಅವರು, ಟಿ.ಜೆ.ಕ್ರಷರ್‌ ನಡೆಸುತ್ತಿದ್ದು, ಕೋರ್ಟ್‌ ಆದೇಶದ ನಡುವೆಯೂ ಅಧಿಕಾರಿಗಳು ಅದನ್ನು ಸ್ಥಗಿತಗೊಳಿಸಿದ್ದಾರೆ ಎಂದು ಆರೋಪಿಸಿ ಗ್ರಾಮದಲ್ಲಿ ಅವರು ಪ್ರತಿಭಟನೆ ನಡೆಸಿದರು. ಶನಿವಾರ ಮಧ್ಯಾಹ್ನ 12 ಗಂಟೆಯ ವೇಳೆ ಸ್ಥಳಕ್ಕೆ ಆಗಮಿಸಿದ ದೇವೇಗೌಡರು,

-ಕ್ರಷರ್‌ ನಡೆಯುತ್ತಿರುವ ಪ್ರದೇಶದ ವೀಕ್ಷಣೆ ನಡೆಸಿ, ಮಾಹಿತಿ ಪಡೆದುಕೊಂಡರು. 2016ರಲ್ಲಿ ಗಣಿಗಾರಿಕೆ ನಡೆಸಲು ಗಣಿ ಸಚಿವರಿಗೆ ಬರೆದಿದ್ದ ಪತ್ರ ಹಾಗೂ ಜೆಡಿಎಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದ ಬಳಿಕ 2020ರ ಜನವರಿಯಲ್ಲಿ ಗಣಿಗಾರಿಕೆ ಅನುಮತಿ ರದ್ದುಪಡಿಸುವಂತೆ ಕೆ.ಸಿ.ನಾರಾಯಣಗೌಡರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರವನ್ನು ತೋರಿಸಿ, ಅವರ ಇಬ್ಬಗೆಯ ನೀತಿಯನ್ನು ಮಾಧ್ಯಮಗಳ ಎದುರು ಪ್ರದರ್ಶಿಸಿದರು. ಈ ವೇಳೆ, ಸಚಿವ ನಾರಾಯಣಗೌಡರ ವಿರುದ್ಧ ಗೌಡರು ಹರಿಹಾಯ್ದ ಪರಿ ಹೀಗಿತ್ತು.

ಕೆಲ ಜೆಡಿಎಸ್‌ ಶಾಸಕರೇ ಗೈರು: ಜೆಡಿಎಸ್‌ ಶಾಸಕರಾದ ಸುರೇಶ್‌ಗೌಡ, ಕೆ.ಅನ್ನದಾನಿ, ವಿಧಾನಪರಿಷತ್‌ ಸದಸ್ಯರಾದ ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ ಅವರು ದೇವೇಗೌಡರ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದರು. ಆದರೆ, ಜೆಡಿಎಸ್‌ನ ಇತರ ಶಾಸಕರು ಪ್ರತಿಭಟನಾ ಸ್ಥಳದಲ್ಲಿ ಕಾಣಿಸಲಿಲ್ಲ.

* ಗಣಿ ಮಾಲೀಕರ ಪರವಾಗಿ ಕೋರ್ಟ್‌ ಆದೇಶವಿದ್ದರೂ ಗಣಿಗಾರಿಕೆ ನಡೆಸುವುದನ್ನು ಸ್ಥಗಿತಗೊಳಿಸಿದ್ದಾರೆ. ರಾಜಕೀಯ ಕಾರಣಕ್ಕಾಗಿ ಈ ರೀತಿ ದ್ವೇಷ ಸಾಧಿಸಲಾಗುತ್ತಿದೆ. ಸೇಡು ತೀರಿಸಿ ಕೊಳ್ಳಲು ಸಚಿವರು ಸರ್ವಯತ್ನ ನಡೆಸುತ್ತಿದ್ದಾರೆ.

Advertisement

* ಈ ಕುರಿತು ಮುಖ್ಯಮಂತ್ರಿಗೆ ನಾನು ದೂರವಾಣಿ ಕರೆ ಮಾಡಿ, ಮಾತನಾಡಿದ್ದೇನೆ. ಎಲ್ಲಾ ದಾಖಲೆಗಳನ್ನು ಅವರಿಗೆ ಕಳುಹಿಸಿದ್ದೇನೆ. ಸಿಎಂ ಅವರ ವಿಶೇಷ ಕರ್ತವ್ಯಾಧಿಕಾರಿ ಲಕ್ಷ್ಮೀನಾರಾಯಣ್‌ಗೂ ವಿವರಿಸಿದ್ದೇನೆ.

* ನಾನು ಯಾವ ಸಿಎಂ ಅಥವಾ ಮಂತ್ರಿ ಬಗ್ಗೆಯೂ ಕೆಟ್ಟದಾಗಿ ಮಾತನಾಡುವುದಿಲ್ಲ.

* ಹಿಂದಿನ ಅಧಿಕಾರಿಗಳು ಕಾನೂನು ಪ್ರಕಾರ ಪರಿಶೀಲನೆ ನಡೆಸಿ, ಅನುಮತಿ ಕೊಟ್ಟಿದ್ದರು. ಅಧಿಕಾರಿಗಳು ಕೊಟ್ಟ ಅನುಮತಿಯಂತೆ ಯಂತ್ರೋಪಕರಣ ಅಳವಡಿಸಿದ್ದಾರೆ. ಸಾಲ ತಂದು ಕ್ರಷರ್‌ ಶುರು ಮಾಡಿದ್ದಾರೆ. ಗಣಿಗಾರಿಕೆ ಸ್ಥಗಿತದಿಂದ ಮಾಲೀಕರು ತೊಂದರೆಗೆ ಒಳಗಾದರೆ, ಕಾರ್ಮಿಕರು ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

* ಈಗಿರುವ ಜಿಲ್ಲಾಧಿಕಾರಿಯವರು ಮಂತ್ರಿ ಹೇಳಿದ ಮಾತನ್ನು ಮೀರಿ ಒಂದು ಹೆಜ್ಜೆಯೂ ಮುಂದೆ ಹೋಗುವುದಿಲ್ಲ. ಅವರ ಅಧಿಕಾರ ಬಳಸಿ ಈ ರೀತಿ ಮಾಡುತ್ತಿದ್ದಾರೆ.

* ನಾನು ಯಾರದೋ ದಾಕ್ಷಿಣ್ಯಕ್ಕೆ ಇಲ್ಲಿಗೆ ಬಂದಿಲ್ಲ. ಕಾರ್ಯಕರ್ತರ ಪರ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಪ್ರಾದೇಶಿಕ ಪಕ್ಷದ ಉಳಿವಿಗಾಗಿ ಕಾರ್ಯಕರ್ತರ ಹಿತ ಕಾಯಲು ನಾನು ಸಿದ್ಧನಿದ್ದೇನೆ. ಈ ವಿಷಯದಲ್ಲಿ ನಾನು ನನ್ನ ಹೋರಾಟವನ್ನು ಕೈಬಿಡುವುದಿಲ್ಲ. ಕೊನೆಯ ಘಟ್ಟ ಮುಟ್ಟುವವರೆಗೆ ನಾನು ಹೋರಾಟದಿಂದ ಹಿಂದೆ ಸರಿಯುವುದಿಲ್ಲ.

* ನೀವು (ಕೆ.ಸಿ.ನಾರಾಯಣಗೌಡ) ಇನ್ನೂ ಮೂರೂವರೆ ವರ್ಷ ಅಧಿಕಾರ ನಡೆಸಿ. ಅದಕ್ಕೆ ನನ್ನ ಅಭ್ಯಂತರವೇನೂ ಇಲ್ಲ. ಆದರೆ, ನನ್ನ ಒಬ್ಬನೇ ಒಬ್ಬ ಕಾರ್ಯಕರ್ತನಿಗೆ ತೊಂದರೆಯಾದರೂ ನಾನು ಸಹಿಸುವುದಿಲ್ಲ. ಅದರ ವಿರುದ್ಧ ಸಿಡಿದೇಳ್ಳೋದು ಸತ್ಯ.

* ಜೆಡಿಎಸ್‌ನ ಯಾರ್ಯಾರಿಗೆ ತೊಂದರೆ ಕೊಡುತ್ತಿದ್ದಾರೆ ಎನ್ನುವುದನ್ನು ಒಂದು ಪಟ್ಟಿ ಮಾಡಿ. ಅಧಿವೇಶನದ ಬಳಿಕ ದೊಡ್ಡ ಹೋರಾಟ ಮಾಡೋಣ. ಕೆ.ಆರ್‌.ಪೇಟೆಯಿಂದಲೇ ಹೋರಾಟಕ್ಕೆ ಚಾಲನೆ ನೀಡೋಣ.

* ನ್ಯಾಯಾಲಯದ ಆದೇಶಕ್ಕೆ ತಕ್ಕಂತೆ ಮುಖ್ಯಮಂತ್ರಿಗಳು ನಡೆದುಕೊಳ್ಳಬೇಕು. ಆಗ ಅವರನ್ನು ನಾವು ಗೌರವದಿಂದ ಕಾಣುತ್ತೇವೆ. ಇಲ್ಲವಾದರೆ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡುವುದು ನಿಶ್ಚಿತ. ವಿಧಾನಸಭೆ ಮತ್ತು ವಿಧಾನಪರಿಷತ್‌ನೊಳಗೆ ಶಾಸಕರು ಧ್ವನಿ ಎತ್ತಿದರೆ, ಹೊರಗೆ ನಾವು ಹೋರಾಟ ಮಾಡುತ್ತೇವೆ. ಕೋರ್ಟ್‌ ಆದೇಶ ಧಿಕ್ಕರಿಸುವ ಸರ್ಕಾರವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ.

* ನಾನು ರಾಜಕೀಯಕ್ಕೆ ಬಂದು 60 ವರ್ಷವಾಯಿತು. ವಿಧಾನಸಭೆಗೆ ಸ್ಪರ್ಧೆ ಮಾಡಿ 58 ವರ್ಷವಾಗಿದೆ. ಆದರೂ, ನಾನು ಅಧಿಕಾರ ಅನುಭವಿಸಿದ್ದು ಕಡಿಮೆ. 10 ತಿಂಗಳು ಪ್ರಧಾನಮಂತ್ರಿ, ಒಂದೂವರೆ ವರ್ಷ ಮುಖ್ಯಮಂತ್ರಿ, ನೀರಾವರಿ ಮಂತ್ರಿಯಾಗಿ ಮೂರು ಬಾರಿ ರಾಜೀನಾಮೆ ನೀಡಿದ್ದೇನೆ. ಅಧಿಕಾರದಲ್ಲಿ ಇದ್ದುದಕ್ಕಿಂತ ಹೋರಾಟ ಮಾಡಿದ ಅವಧಿಯೇ ಹೆಚ್ಚು.

ಕೆ.ಆರ್‌.ಪೇಟೆ ಸೇರಿ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ ಕಾರ್ಯಕರ್ತರು ಹಾಲಿ ಸರ್ಕಾರದ ಟಾರ್ಗೆಟ್‌ ಆಗಿದ್ದಾರೆ. ಈ ಸರ್ಕಾರ ಮಂಡ್ಯ ಜಿಲ್ಲೆಯ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಮಂಡ್ಯ ಜಿಲ್ಲಾಧಿಕಾರಿಗಳು ಕೋರ್ಟ್‌ನ ಆದೇಶಗಳನ್ನು ಧಿಕ್ಕರಿಸುತ್ತಿದ್ದಾರೆ. ಕಾನೂನು ಪ್ರಕಾರ ಕೆಲಸ ಮಾಡದೆ, ಮಂತ್ರಿಗಳ ಜವಾನರಂತೆ ಅವರು ಕೆಲಸ ಮಾಡುತ್ತಿದ್ದಾರೆ. ಮಂಡ್ಯ ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದೇನೆ.
-ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ

ಯಡಿಯೂರಪ್ಪ ನವರ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಆಹ್ವಾನಿಸಲು ಸಿಎಂ ಪುತ್ರ ನನ್ನ ಮನೆಗೆ ಬಂದಿದ್ದರು. ಕಾವೇರಿ ನಿವಾಸಕ್ಕೆ ನಾನು ಹೋಗಬೇಕಿತ್ತು. ಆದರೆ, ಕಾರ್ಯದ ಒತ್ತಡದಿಂದ ಅಲ್ಲಿಗೆ ಹೋಗಲು ಆಗಲಿಲ್ಲ. ಆದರೂ, ನಾನೊಂದು ಸಂದೇಶ ಕಳುಹಿಸಿದ್ದೇನೆ.
-ಎಚ್‌.ಡಿ. ದೇವೇಗೌಡ ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next